ಮಹಾಲಿಂಗೇಶ್ವರ ದೇವಸ್ಥಾನದ ನವೀಕೃತ ಸಭಾಭವನ ಲೋಕಾರ್ಪಣೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೀಕೃತ ಸಭಾ ಭವನದ ಉದ್ಘಾಟನೆ ಹಾಗೂ ಶ್ರೀರುದ್ರ ಹವನ ಸಹಿತ ಗಣಪತಿ ಹವನವು ನ.20ರಂದು ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಯ ಕುರಿತು ಇಲಾಖೆಯ ಆಯುಕ್ತರ ಜತೆ ಚರ್ಚೆ ಮಾಡಲಾಗಿದ್ದು ಅಭಿವೃದ್ಧಿಗೆ ಸಂಬಂಧಿಸಿದ ಪ್ರಸ್ತಾವನೆ ಸಲ್ಲಿಸಲಾಗಿದೆ. ಪುತ್ತೂರಿನಲ್ಲಿ ಪ್ರವಾಸೋಧ್ಯಮಕ್ಕೆ ಮಾನ್ಯತೆ ನೀಡಲು ಮನವಿ ಸಲ್ಲಿಸಲಾಗಿದೆ. ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೂ ಈಗಾಗಲೇ ನಕ್ಷೆ ಮಾಡಲಾಗಿದ್ದು ಎದುರುಗಡೆಯಿರುವ ಕಟ್ಟಡಗಳನ್ನು ತೆರವುಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಕೆರೆಯ ಬಳಿ ಎಡ ಭಾಗದಲ್ಲಿರುವ ಏಳು ಮನೆಗಳು ಹಾಗೂ ಮಹಿಳಾ ಪೊಲೀಸ್ ಠಾಣೆ ತೆರವುಗೊಳಿಸಲಾಗುವುದು. ಮಹಿಳಾ ಠಾಣೆಗೆ ಜಾಗ ಕಾದಿರಿಸಲು ಸಹಾಯಕ ಆಯುಕ್ತರಿಗೆ ತಿಳಿಸಲಾಗಿದೆ. ಮನೆ ಹಾಗೂ ಠಾಣೆ ತೆರವುಗೊಂಡಾಗ ಆ ಜಾಗ ಪೂರ್ತಿ ದೇವಸ್ಥಾನಕ್ಕೆ ದೊರೆತು ವಿಶೇಷ ಆಕರ್ಷಣೆಯಾಗಲಿದೆ. ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿ ಮುಂದಿನ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂದು ಹೇಳಿದರು. ಯಾರಿಗೂ ತೊಂದರೆಯಾಗದಂತೆ ಬದಲಾವಣೆಗಳನ್ನು ಮಾಡಿಕೊಂಡು ಕಾರ್ಯನಿರ್ವಹಿಸುವಂತೆ ಅವರು ತಿಳಿಸಿದರು.


ದೇವಸ್ಥಾನದ ವಿಶಾಲ ಕೆರೆಗೆ ವಿಶೇಷ ಕಾರಂಜಿ ಅಳವಡಿಸಿ, ಅದರಲ್ಲಿ ದೇವರ ಭಜನೆಯ ಮೂಲಕ ಕಾರಂಜಿ ಹಾರಿಸಲಾಗುವುದು. ತೋಡಿಗೆ ಸಣ್ಣ ನೀರಾವಳಿ ಇಲಾಖೆ ಮೂಲಕ ತಡೆಗೋಡೆ ನಿರ್ಮಾಣವಾಗಲಿದೆ. ರಸ್ತೆ ಕಾಂಕ್ರಿಟೀಕರಣ, ಕಂಬಳದ ಗದ್ದೆ ಸ್ಥಳಾಂತರ, ಭಕ್ತರನ್ನು ಆಕರ್ಷಿಸಲು ವಿಶೇಷ ಆಕರ್ಷಣೆಯ ಲೈಟಿಂಗ್ಸ್ ಅಳವಡಿಸಲಾಗುವುದು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಪ್ರಶ್ನಾ ಚಿಂತನೆ ನಡೆಸಿ ಅನುಮೋದನೆ ಪಡೆದುಕೊಳ್ಳಲಾಗುವುದು. ರಾಜಕೀಯ ದೇವಸ್ಥಾನದ ಹೊರಗೆ ಮಾತ್ರ. ದೇವಸ್ಥಾನದ ಅಭಿವೃದ್ಧಿಗಾಗಿ ಏಳು ಮನೆಯವರು ಸ್ವ ಇಚ್ಚೆಯಿಂದ ಬಿಟ್ಟುಕೊಡುಬೇಕು. ಅಭಿವೃದ್ಧಿಗೆ ಪೂರಕವಾಗಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಯೋಜನೆ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಿನ ವ್ಯವಸ್ಥಾಪನಾ ಸಮಿತಿ ಅಧಿಕಾರ ಪಡೆದ ಬಳಿಕ ದೇವಸ್ಥಾನದ ಆದಿ ಭೌತಿಕ ದೇವಸ್ಥಾನ ನಿರ್ಮಾಣದ ಕಾರ್ಯಗಳು ನಡೆಸಲಾಗಿದೆ. ಇದರ ಕುರಿತು ವಿಮರ್ಶೆ ಮಾಡುವ ನಿಟ್ಟಿನಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ನಡೆಸಲಾಗಿದೆ. ಪ್ರಶ್ನಾಚಿಂತನೆ ನಡೆಸಲು ಹಿಂದಿನ ಸಮಿತಿಯಲ್ಲಿಯೇ ತೀರ್ಮಾನವಾಗಿತ್ತು. ಹಿಂದಿನ ಸಮಿತಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಿದ್ದೇವೆ. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಏಕದಶರುದ್ರ ಪಾರಾಯಣ ನಡೆಸಲಾಗಿದೆ. ದೇಶೀ ದನದ ಹಾಲಿನ ಅಭಿಷೇಕಕ್ಕಾಗಿ ಗೋಶಾಲೆ ನಿರ್ಮಿಸಲಾಗಿದೆ. ಬಹಳಷ್ಟು ಹಿಂದೆ ನಿರ್ಮಾಣಗೊಂಡ ಸಭಾಭವನವನ್ನು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ನವೀಕರಣಗೊಳಿಸಲಾಗುತ್ತಿದೆ. ಅನ್ನಛತ್ರ ನಿರ್ಮಾಣ ಹಂತದಲ್ಲಿದ್ದು ಬಹಳಷ್ಟು ಮಂದಿ ದಾನಿಗಳು ಸಹಕರಿಸಿದ್ದಾರೆ. ಕುರಿಯ ಗ್ರಾಮದಲ್ಲಿ 19 ಎಕರೆ ಜಾಗ ಗೋಶಾಲೆಗೆ ಮಂಂಜೂರಾಗಿದ್ದು ಡಿಸೆಂಬರ್‌ನಲ್ಲಿ ಗೋ ಲೋಕೋತ್ಸವ ನಡೆಯಲಿದೆ ಎಂದರು.


ಎಂಟು ನೂರು ವರ್ಷಗಳಿಂದ ದೇವರ ಅವಭೃತ ಸ್ನಾನ ನಡೆಯುತ್ತಿದ್ದ ವೀರಮಂಗಲದ ಕಟ್ಟೆಯಿರುವ ಜಾಗವನ್ನು ನಮ್ಮ ಮನವಿಯಂತೆ ಸಹಾಯಕ ಆಯುಕ್ತ ಗಿರೀಶ್ ನಂದನ್‌ ದೇವಸ್ಥಾನದ ಹೆಸರಿನಲ್ಲಿ ಪಹಣಿ ಮಾಡಿಕೊಟ್ಟಿದ್ದಾರೆ. ಕೆರೆಯ ಅಭಿವೃದ್ಧಿಗೆ ಪೂಡಾದಿಂದ ಒದಗಿಸಲಾದ ರೂ.1ಕೋಟಿ ಅನುದಾನದಲ್ಲಿ ಮಂಜೂರುಗೊಂಡು ರೂ.35 ಲಕ್ಷದ ಕಾಮಗಾರಿಗಳು ನಡೆದಿದೆ. ಇನ್ನು ರೂ.65 ಲಕ್ಷ ಬಾಕಿಯಿದ್ದು ಅದನ್ನು ಮಂಜೂರುಗೊಳಿಸುವುದು ಹಾಗೂ ಭಕ್ತಾದಿಗಳ ಅನುಕೂಲಕ್ಕಾಗಿ ಬಿಎಸ್‌ಎನ್‌ಎಲ್ ಕಚೇರಿ ರಸ್ತೆಯಿರುವ ಜಾಗವನ್ನು ಸ್ವಾದೀನ ಪಡಿಸಿಕೊಂಡು ದೇವಸ್ಥಾನದ ರಸ್ತೆ ಅಭಿವೃದ್ಧಿಗೆ ಪೂರಕವಾಗಿ ಕಡತಗಳನ್ನು ಒದಗಿಸಿಕೊಡುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಸಹಾಯಕ ಆಯುಕ್ತರಲ್ಲಿ ಮನವಿ ಮಾಡಿದರು.


ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಭಕ್ತರ ಅಪೇಕ್ಷೆ, ನಿರೀಕ್ಷೆಯಂತೆ ವ್ಯವಸ್ಥಾಪನಾ ಸಮಿತಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪೂರೈಸಿದೆ. ಮುಂದಿನ ಸಮಿತಿಯವರಿಗೂ ಅಭಿವೃದ್ಧಿಗೆ ಪೂರಕವಾಗಿ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿಗೆ ಸಭಾಭವನ ಅವಶ್ಯಕವಾಗಿದ್ದು ಹಿಂದಿನಂತೆ ಮದುವೆಗಳು ನಡೆಯಲಿ. ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸುವಂತೆ ಅವರ ತಿಳಿಸಿದರು.

ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಕೆರೆಯ ಅಭಿವೃದ್ಧಿ ಬಾಕಿಯಿರುವ ಮೊತ್ತವನ್ನು ಬಿಡುಗಡೆಗೆ ಪೂಡಾದ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಬಿಎಸ್‌ಎನ್‌ಎಲ್ ಕಚೇರಿ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳಲಾಗುವುದು. ದೇವಸ್ಥಾನ ವಿಚಾರಗಳನ್ನು ಕಾನೂನಾತ್ಮವಾಗಿ ವಿಶೇಷ ಮುತುವರ್ಜಿಯಿಂದ ಮಾಡಿಕೊಡಲಾಗುವುದು ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಾತನಾಡಿ, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ವಿಶೇಷ ಮುತುವರ್ಜಿಯಲ್ಲಿ ಅಭಿವೃದ್ಧಿಗಳು ನಡೆಯುತ್ತಿದೆ. ದೇವಸ್ಥಾನದ ಅಭಿವೃದ್ಧಿಗೆ ರಾಜ್ಯ ಧಾರ್ಮಿಕ ಪರಿಷತ್ ನಿಂದ, ನನ್ನಿದಾಂಗುವ ಸಹಕಾರ ನೀಡಲಾಗುವುದು ಎಂದರು.

ಪ್ರಧಾನ ಅರ್ಚಕ ವಿ.ಎಸ್ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಐತ್ತಪ್ಪ ನಾಯ್ಕ, ರಾಮಚಂದ್ರ ಕಾಮತ್, ರಾಮದಾಸ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ಡಾ.ಸುಧಾ ಎಸ್.ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುವಸ್ತುಗಳೊಂದಿಗೆ ಸಭಾ ಭವನ ಪ್ರವೇಶ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀರುದ್ರ ಹವನ ಸಹಿತ ಗಣಪತಿ ಹವನ ಪ್ರಾರಂಭಗೊಂಡಿತು. ನಂತರ ಸುವಸ್ತುಗಳನ್ನು ದೇವರ ನಡೆಯಲ್ಲಿಟ್ಟು ಪ್ರಾರ್ಥನೆ ಸಲ್ಲಿಸಿದ ಬಳಿಕ ಮಂಗಳವಾದ್ಯದೊಂದಿಗೆ ಸುವಸ್ತಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಭಾಭವನಕ್ಕೆ ಪ್ರವೇಶ ಮಾಡಲಾಯಿತು. ನಂತರ ಹವನ ಪೂರ್ಣಾಹುತಿ, ಮಂಗಳಾರತಿ ನಡೆಯಿತು.

ಕಂಬಳಕ್ಕೆ ಚಿನ್ನ ಕೊಡುಗೆ:
ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಎರಡು ಪವನ್ ಚಿನ್ನ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನುಳಿಯಾಲು ರವೀಂದ್ರ ಶೆಟ್ಟಿ ಒಂದು ಪವನ್ ಚಿನ್ನವನ್ನು ಶಾಸಕ ಅಶೋಕ್ ರೈಗೆ ಹಸ್ತಾಂತರಿಸಿದರು.

ಗೌರವಾರ್ಪಣೆ:
ದೇವಸ್ಥಾನದ ಅನ್ನಛತ್ರದ ರೂವಾರಿ ನುಳಿಯಾಲು ಪುರುಷೋತ್ತಮ ಶೆಟ್ಟಿ ಪರವಾಗಿ ಅವರ ಸಹೋದರ ರವೀಂದ್ರ ಶೆಟ್ಟಿ, ಅಪ್ಪಕಜ್ಜಾಯ ತಯಾರಿಕೆಯ ಕೊಠಡಿ ದಾನಿ ಮುಳಿಯ ಗೋವಿಂದ ಭಟ್ ಪರವಾಗಿ ಕಾವೇರಮ್ಮ, ಅರ್ಚಕರು ಹಾಗೂ ತಂತ್ರಿಗಳ ವಿಶ್ರಾಂತಿ ಕೊಠಡಿ ದಾನಿ ಕೃಷ್ಣ ನಾರಾಯಣ ಮುಳಿಯ, ಮುಖ್ಯ ಧ್ವಾರ ನಿರ್ಮಾಣದ ದಾನಿ ಡಾ. ಸುಧಾ ಎಸ್ ರಾವ್, ದೇಣಿಗೆ ನೀಡಿದ ವ್ಯವಸ್ಥಾಪನಾ ಸದಸ್ಯರಾದ ರಾಮದಾಸ ಗೌಡ, ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ಸಭಾಂಗಣದ ಹೊರ ಭಾಗದ ಇಂಟರ್ ಲಾಕ್ ದಾನಿ ಇನ್ನರ್ ವ್ಹೀಲ್ ಕ್ಲಬ್ ನ ಅಶ್ವಿನಿ ಕೃಷ್ಣ, ಸಭಾ ಭವನದ ಇಂಜಿನಿಯರ್ ರವೀಶ್, ಆರ್ಕಿಟೆಕ್ಟ್ ಆಕಾಶ್, ಗುತ್ತಿಗೆದಾರ ಮಂಜುನಾಥರವರನ್ನು ಗೌರವಿಸಲಾಯಿತು.
ತನ್ವೀ ಡಿ ಈಶ್ಚರಚಂದ್ರ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯೆ ವೀಣಾ ಬಿ.ಕೆ. ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ವಂದಿಸಿದರು.

LEAVE A REPLY

Please enter your comment!
Please enter your name here