ಬಜರಂಗದಳ ಕಾರ್ಯಕರ್ತರ ಗಡಿಪಾರು ನೋಟೀಸ್ ಹಿಂಪಡೆಯಲು ಆಗ್ರಹಿಸಿ ಕಡಬದಲ್ಲಿ ಪ್ರತಿಭಟನೆ

0

ಮುಸ್ಲಿಮರನ್ನು ತುಷ್ಟೀಕರಿಸಲು ಹಿಂದೂ ಯುವಕರಿಗೆ ಗಡಿಪಾರು ಶಿಕ್ಷೆ- ಮುರಳಿಕೃಷ್ಣ ಹಸಂತಡ್ಕ ಆರೋಪ

ಕಡಬ: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಹಿಂದೂ ದಮನ ನೀತಿ ಮಿತಿಮೀರುತ್ತಿದೆ, ಇದೀಗ ಹಿಂದೂ ಕಾರ್ಯಕರ್ತರನ್ನು ಗಡಿಪಾರು ಮಾಡುವ ನೋಟೀಸ್ ಜಾರಿ ಮಾಡುತ್ತಿದ್ದಾರೆ, ತಾಕತ್ತಿದ್ದರೆ ಕುಕ್ಕರ್‌ನಲ್ಲಿ ಬಾಂಬ್ ಇಟ್ಟು ದೇಶದ್ರೋಹಿ ಕೆಲಸ ಮಾಡುವವರನ್ನು ಗಡಿಪಾರು ಮಾಡಲಿ ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ರಾಜ್ಯ ಗೃಹ ಸಚಿವರಿಗೆ ಸವಾಲು ಹಾಕಿದರು.


ಬಜರಂಗದಳ ಕಾರ್ಯಕರ್ತರ ಮೇಲಿನ ಗಡಿಪಾರು ವರದಿಯನ್ನು ಹಿಂಪಡೆಯಲು ಆಗ್ರಹಿಸಿ ಸೋಮವಾರ ಕಡಬದಲ್ಲಿ ವಿಶ್ವಹಿಂದೂ ಪರಿಷತ್ ಕಡಬ ಪ್ರಖಂಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಮ್ಮ ಕಾರ್ಯಕರ್ತರು ಸಂವಿಧಾನ ವಿರುದ್ಧವಾಗಿ ಯಾವತ್ತೂ ನಡೆಯುವುದಿಲ್ಲ, ಅಪ್ರಾಪ್ತ ಹಿಂದೂ ಯುವತಿಯ ರಕ್ಷಣೆ ಮಾಡುವುದಕ್ಕೆ ಮುಂದಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ, ಸಾಲದು ಎಂಬಂತೆ ಗಡಿಪಾರು ನೋಟೀಸ್ ನೀಡಿ ಹಿಂದೂ ಕಾರ್ಯಕರ್ತರನ್ನು ದಮನ ಮಾಡುವ ಷಡ್ಯಂತರ ನಡೆಸಲಾಗುತ್ತಿದೆ. ಇದಕ್ಕೆ ನಮ್ಮ ಕಾರ್ಯಕರ್ತರು ಬೆದರುವುದಿಲ್ಲ, ನಮ್ಮ ಕಾರ್ಯಕರ್ತರ ಮೇಲೆ ಎಷ್ಟೇ ಪ್ರಕರಣ ದಾಖಲಿಸಿದರೂ ನಮ್ಮ ಹಿಂದೂ ಧರ್ಮ ರಕ್ಷಣೆ, ಮಾತೆಯರ ಮಾನ ಕಾಪಾಡುವ ಕಾರ್ಯವನ್ನು ಕೈ ಬಿಡುವುದಿಲ್ಲ , ಹಿಂದೂ ಪರ ಮುಖಂಡರು, ಬಿಜೆಪಿ ಶಾಸಕರು, ಹಿಂದೂ ಕಾರ್ಯಕರ್ತರನ್ನು ಪ್ರಕರಣಗಳಲ್ಲಿ ಸಿಲುಕಿಸಿ ಹಿಂದೂ ಸಮಾಜವನ್ನು ದಮನಿಸಬೇಕು ಎಂದು ಖಾಕಿ ಪಡೆಗೆ ರಾಜ್ಯ ಸರಕಾರದ ಒತ್ತಡ ಇದೆ ಎಂಬುದನ್ನು ಕೆಲವು ಪೊಲೀಸರೇ ಒಪ್ಪಿಕೊಂಡಿದ್ದಾರೆ ಎಂದ ಅವರು, ಇದ್ದ ಸರಕಾರ ನಾಳೆ ಇರುವುದಿಲ್ಲ, ಆದರೆ ಅದೇ ಖಾಕಿ. ಅದೇ ಸಂವಿಧಾನ ಮುಂದೆಯೂ ಇರುತ್ತದೆ, ಪೊಲೀಸರು ತಮ್ಮ ಕರ್ತವ್ಯವನ್ನು ನಿಯತ್ತಿನಿಂದ ಮಾಡಬೇಕು ಎಂದು ಹೇಳಿದರು.


ನೋಟೀಸ್ ನೀಡಿ ಹಿಂದೂ ಸಂಘಟನೆಗಳನ್ನು ಕಟ್ಟಿಹಾಕಬಹುದು ಎನ್ನುವ ಭ್ರಮೆಯಿಂದ ಸರಕಾರ ಹೊರಬರಬೇಕು, ಹಿಂದೂ ಕಾರ್ಯಕರ್ತರು ಕಾನೂನು ಬಾಹಿರ ಕೆಲಸ ಮಾಡುವುದಿಲ್ಲ, ಬೆಂಕಿ ಹಾಕುವವರಲ್ಲ, ಬಾಂಬ್ ಹಾಕುವವರಲ್ಲ, ದೇಶದ್ರೋಹ ಕೆಲಸ ಮಾಡುವವರಲ್ಲ, ಆದರೆ ದೇಶ ರಕ್ಷಣೆಯಲ್ಲಿ ನಮ್ಮ ಕಾರ್ಯಕರ್ತರು ಹಿಂದೆ ಬೀಳುವುದಿಲ್ಲ ಎಂದು ಹೇಳಿದ ಹಸಂತಡ್ಕ ನಮ್ಮ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್ ಜಾರಿ ಮಾಡಿರುವುದನ್ನು ಪರಿಷ್ಕರಣೆ ಮಾಡಿ ಗಡಿಪಾರು ವರದಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಬಳಿಕ ಕಡಬ ತಹಸೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ನಿಧಿ ಪ್ರಮುಖ್ ರವಿರಾಜ್ ಶೆಟ್ಟಿ, ಬಜರಂಗದಳ ಪ್ರಖಂಡ ಸಹ ಸಂಯೋಜಕ ಚೇತನ್ ಎಡಮಂಗಲ, ವಿ.ಹಿ.ಪಂ ಕಡಬ ಪ್ರಖಂಡ ಉಪಾಧ್ಯಕ್ಷರಾದ ಸುದರ್ಶನ ಶಿರಾಡಿ. ಸಂತೋಷ ಸುವರ್ಣ ಕೋಡಿಬೈಲ್, ಜೊತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್, ಮಾತೃಶಕ್ತಿ ಕಡಬ ಪ್ರಖಂಡ ಪ್ರಮುಖ್ ಪ್ರೇಮಲತಾ ಕೇಪುಂಜ, ಸಹ ಪ್ರಮುಖ್ ವೀಣಾ ರಮೇಶ್ ಕೊಲ್ಲೆಸಾಗು, ವಿ.ಹಿಂ.ಪ.ಜಿಲ್ಲಾ ಸಹ ಧರ್ಮಪ್ರಸಾರ ಪ್ರಮುಖ್ ಉಮೇಶ್ ಆಚಾರ್ಯ, ವಿಹಿಪ ಜಿಲ್ಲಾ ಗೋರಕ್ಷಕ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಮ್, ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, . ಪುತ್ತೂರು ವಿಭಾಗ ಧರ್ಮ ಪ್ರಸಾರ ಪ್ರಮುಖ್ ಪ್ರಮೋದ್ ರೈ ನಂದುಗುರಿ, ಪ್ರಮುಖರಾದ ಪುಲಸ್ತ್ಯಾ ರೈ, ಅಜಿತ್ ರೈ ಆರ್ತಿಲ, ಮೋನಪ್ಪ ಗೌಡ ನಾಡೋಳಿ, ಅಶೋಕ್ ಕುಮಾರ್ ಪಿ, ರಘುರಾಮ್ ನ್ಯಾಕ್ ಕುಕ್ಕೆರೆಬೆಟ್ಟು, ಸುರೇಶ್ ಕೋಟೆಗುಡ್ಡೆ, ಮನೋಜ್ ಮರ್ದಾಳ, ಉದಯ ಪೂವಳ, ಕಿಶನ್ ರೈ ಕುತ್ಯಾಳ ಮತ್ತಿತರರು ಭಾಗವಹಿಸಿದ್ದರು.
ವಿ,ಹಿಂ,ಪರಿಷತ್ ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ್ ಕಲ್ಲುಗುಡ್ಡೆ ಸ್ವಾಗತಿಸಿ, ನಿರೂಪಿಸಿದರು. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ವಂದಿಸಿದರು.

LEAVE A REPLY

Please enter your comment!
Please enter your name here