ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿಟ್ಲ ಶಾಖೆಯ ಸ್ವಂತ ಕಟ್ಟಡ ಉದ್ಘಾಟನೆ

0

ಸಹಕಾರಿ ತತ್ವದಲ್ಲಿ ಬದುಕಿನ ಸಾರ ಅಡಗಿದೆ : ಒಡಿಯೂರು ಶ್ರೀ
ಪ್ರತಿ ಕುಟುಂಬಗಳಲ್ಲಿ ಸಹಕಾರಿಯ ತತ್ವ ಅಡಗಿದೆ: ಸಾಧ್ವಿ ಶ್ರೀ ಮಾತಾನಂದಮಯೀ
ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ: ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

ವಿಟ್ಲ: ಸಹಕಾರಿ ತತ್ವದಲ್ಲಿ ಬದುಕಿನ ಸಾರ ಅಡಗಿದೆ. ಗ್ರಾಹಕರು ಸಹಕಾರಿ ಸಂಘದ ಜೀವಾಳ. ಗ್ರಾಹಕರೊಂದಿಗಿನ ಸಿಬ್ಬಂದಿಗಳ ನಗುಮೊಗದ ಸೇವೆಯೇ ಸಂಸ್ಥೆಯ ಯಶಸ್ಸಿನ ಗುಟ್ಟಾಗಿದೆ. ಪರಿಶ್ರಮ, ಸಾಧನೆ ಇದ್ದಾಗ ಗೌರವ ಅರಸಿಕೊಂಡು ಬರುತ್ತದೆ. ನಿಸ್ವಾರ್ಥ ಸೇವೆಯಿದ್ದಾಗ ಯಶಸ್ಸಿಯ ಹಾದಿ ಸುಗಮವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ವಿಟ್ಲದಲ್ಲಿರುವ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ 3ನೇ ಮಹಡಿಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಿಟ್ಲ ಶಾಖೆಯ ಸ್ವಂತ ಕಟ್ಟಡವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಕೊಡುಕೊಳ್ಳುವಿಕೆಯಲ್ಲಿ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥ ಸೇವೆಯಿದ್ದಾಗ ಯಶಸ್ಸಿನ ಹಾದಿ ಸುಗಮವಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರು ಸೇರಿಕೊಂಡು ಹೋಗುವ ಅನಿವಾರ್ಯತೆ ಇದೆ. ಸಹಕಾರಿ ತತ್ವ ಜೀವನದಲ್ಲಿದೆ. ಯಶಸ್ಸಿನ ಗುಟ್ಟು ಶ್ರದ್ಧೆಯಲ್ಲಿ ಅಡಗಿದೆ. ಬಾಡಿಗೆಯಿಂದ ಸ್ವಂತದ ಕಡೆಗೆ ಬರುವುದು ಬೆಳವಣಿಗೆಯ ಮೊದಲ ಹೆಜ್ಜೆಯಾಗಿದೆ ಎಂದರು.

ಗೌರವ ಮಾರ್ಗದರ್ಶಕರಾದ ಸಾಧ್ವಿ ಶ್ರೀ ಮಾತಾನಂದಮಯೀ ರವರು ಆಶೀರ್ವಚನ ನೀಡಿ ಗುರುಗಳ ದಿವ್ಯ ಅನುಗ್ರಹದಿಂದ ಸಹಕಾರಿ ಸಂಘ ಉತ್ತುಂಗಕ್ಕೇರಿದೆ. ಪ್ರತಿ ಕುಟುಂಬಗಳಲ್ಲಿ ಸಹಕಾರಿಯ ತತ್ವ ಅಡಗಿದೆ. ಸಹಕಾರ ಎಂದರೆ ಮಾನವೀಯ ಮೌಲ್ಯವನ್ನು ತುಂಬಿಕೊಂಡಿದ್ದು, ಸೇವೆಗೆ ವಿಶೇಷ ಮಹತ್ವವಿದೆ. ಜನಹಿತದ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆದಾಗ ಯಶಸ್ಸು ನಿಶ್ಚಿತವಾಗಿರುತ್ತದೆ. ಸಹಕಾರಿ ಸಂಸ್ಥೆಗಳ ಮೂಲಕ ದೇಶದ ಉನ್ನತಿ ಸಾಧ್ಯ ಎಂದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ. ಭಾರತ ಸರಕಾರ ಸಹಕಾರಿ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಡ್ಡುಹೊಡೆಯುವ ರೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳೆದು ನಿಂತಿದೆ. ಕೃಷಿಕ ಎನ್ನುವುದಕ್ಕೆ ನಾವು ಹೆಮ್ಮೆ ಪಡಬೇಕಾಗಿದೆ. ಜಿಡಿಪಿ ಶ್ರೇಯಾಂಕ ಮಟ್ಟದಲ್ಲಿ ಭಾರತ ೫ನೇ ಸ್ಥಾನವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೆ ಹೋಗಲಿದ್ದೇವೆ ಎಂದರು.

ಸಹಕಾರಿಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶಕುಂತಳಾ ಟಿ. ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮುಕ್ತೇಸರ ವಿಟ್ಲ ಅರಮನೆಯ ಬಂಗಾರು ಅರಸರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ ಭಟ್, ಡಾ. ವಿ. ಕೆ. ಹೆಗ್ಡೆ, ವಕೀಲ ಜಯರಾಮ ರೈ, ಉದ್ಯಮಿಗಳಾದ ಅಲೆಕ್ಸಾಂಡರ್ ಲಸ್ರಾದೊ, ರಾಧಾಕೃಷ್ಣ ನಾಯಕ್, ಜಿಲ್ಲಾ ಸಂಯೋಜಕ ವಿಜಯ ಕುಮಾರ್ ಬಿ. ಮೊದಲಾದವರು ಉಪಸ್ಥಿತರಿದ್ದರು.

ವಿಟ್ಲ ಶಾಖೆಯ ಸಿಬ್ಬಂದಿ ಶ್ರದ್ಧಾ ಪ್ರಾರ್ಥಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ಸ್ವಾಗತಿಸಿದರು. ನಿರ್ದೇಶಕ ಎಂ. ಉಗ್ಗಪ್ಪ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here