ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ: ಶಶಿಕುಮಾರ್ ರೈ ಬಾಲ್ಯೊಟ್ಟು
ಪುತ್ತೂರು: ಮನುಷ್ಯನಿಗೆ ಹುಟ್ಟಿನಿಂದ ಸಾಯುವ ತನಕ ಮುಖ್ಯವಾಗಿ ಬೇಕಾಗಿರೋದು ಆರೋಗ್ಯ. ಅದೊಂದಿದ್ದರೆ ಆತ ಎಲ್ಲವನ್ನು ಸಾಧಿಸಬಲ್ಲ ಮತ್ತು ಗಳಿಸಿಬಲ್ಲ ಆದ್ದರಿಂದ ನಾವು ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಇಂದಿನ ಅಗತ್ಯತೆಯಾಗಿದೆ ಎಂದು ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಅವರು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಮತ್ತು ಅವನಿ ಫೌಂಡೇಶನ್ ಪುತ್ತೂರು ಇದರ ಸಹಯೋಗದೊಂದಿಗೆ ಕಂಪಾನಿಯೊ ನೆಮ್ಮದಿ ವೆಲ್‌ನೆಸ್ ಸೆಂಟರ್ ಪುತ್ತೂರು ಇವರ ಸಹಕಾರದೊಂದಿಗೆ ಕುಂಬ್ರದ ರೈತ ಸಭಾ ಭವನದಲ್ಲಿ ನ.22ರಿಂದ ದ.5 ರ ತನಕ ನಡೆಯಲಿರುವ ಉಚಿತ ಫೂಟ್ ಫಲ್ಸ್ ಥೆರಪಿ ಶಿಬಿರವನ್ನು ನ.22ರಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, ನಾವು ಜೀವನದಲ್ಲಿ ಏನೇ ಸಾಧನೆ ಮಾಡಬೇಕಾದರೂ ನಮಗೆ ಆರೋಗ್ಯ ಬಹುಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ಸವಾಲು ಎಂದರೆ ತಪ್ಪಾಗಲಾರದು ಆದ್ದರಿಂದ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು, ಕುಂಬ್ರದಲ್ಲಿ ಇಂತಹ ಥೆರಪಿ ಶಿಬಿರ ಇಟ್ಟುಕೊಂಡಿರುವುದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಮನುಷ್ಯನ ದೇಹದಲ್ಲಿ ರಕ್ತ ಸಂಚಾರಿ ಸರಿಯಾಗಿ ಆಗದೇ ಇದ್ದಾಗ ಎಲ್ಲಾ ಖಾಯಿಲೆಗಳು ಹುಟ್ಟಿಕೊಳ್ಳುತ್ತವೆ. ರಕ್ತ ಸಂಚಾರ ಆಗಬೇಕಾದರೆ ನರಗಳು ಸರಿಯಾಗಿ ಕೆಲಸ ಮಾಡಬೇಕು ನರಗಳಿಗೆ ಸರಿಯಾದ ವ್ಯಾಯಾಮ ಸಿಗದೇ ಇದ್ದಾಗ ರಕ್ತಸಂಚಾರದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದನ್ನು ತಪ್ಪಿಸಲು ಇಂದಿನ ಆಧುನಿಕ ಕಾಲದಲ್ಲಿ ಇಂತಹ ಥೆರಪಿಗಳು ಅಗತ್ಯ ಎಂದರು. ಅವನಿ ಫೌಂಡೇಶನ್‌ನ ಅಧ್ಯಕ್ಷ ನಿತೀಶ್ ಕುಮಾರ್ ಶಾಂತಿವನರವರು ಮಾತನಾಡಿ, ಗ್ರಾಮಸ್ಥರಿಗೆ ಸಾಧ್ಯವಾಗುವ ಎಲ್ಲಾ ರೀತಿಯ ಸೇವೆಗಳನ್ನು ನೀಡುವ ಸಲುವಾಗಿ ಅವನಿ ಫೌಂಡೇಶನ್ ಸ್ಥಾಪನೆ ಮಾಡಿದ್ದೇವೆ. ಇದರ ಆಶ್ರಯದಲ್ಲಿ ಈ ಫೂಟ್ ಫಲ್ಸ್ ಥೆರಪಿ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. 15 ದಿನಗಳ ಕಾಲ ನಡೆಯುವ ಈ ಶಿಬಿರಕ್ಕೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ನೆಮ್ಮದಿ ವೆಲ್‌ನೆಸ್ ಸೆಂಟರ್ ಪುತ್ತೂರು ಇದರ ಕೆ.ಪ್ರಭಾಕರ ಸಾಲ್ಯಾನ್‌ರವರು ಫೂಟ್ ಫಲ್ಸ್ ಥೆರಪಿ ಪಡೆದುಕೊಳ್ಳುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳನ್ನು ತಿಳಿಸಿದರು. ಬಿಪಿ, ಶುಗರ್‌ನಂತಹ ಖಾಯಿಲೆಗಳನ್ನು ಕೂಡ ಈ ಥೆರಪಿ ಸಂಪೂರ್ಣ ಗುಣಪಡಿಸುತ್ತದೆ ಎಂದ ಅವರು ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು. ವೇದಿಕೆಯಲ್ಲಿ ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್ ಉಪಸ್ಥಿತರಿದ್ದರು. ಜೀವ ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಾಮಕೃಷ್ಣ ಮುಡಾಲ ವಂದಿಸಿದರು.
15 ದಿನಗಳ ಶಿಬಿರ
ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನ.22ರಿಂದ ದ.5ರ ತನಕ 15 ದಿನಗಳ ಕಾಲ ಬೆಳಿಗ್ಗೆ 9.30ರಿಂದ ಸಂಜೆ 4.30ರ ತನಕ ಶಿಬಿರ ನಡೆಯಲಿದೆ. ಯಾವುದೇ ಔಷಧಿ ಇಲ್ಲದೆ ರಕ್ತ ಸಂಚಾರ ಮತ್ತು ನರ ಸಂಬಂಧಿತ ಖಾಯಿಲೆಗಳಿಗೆ ಉಚಿತ ಥೆರಫಿ, ಥೈರಾಯಿಡ್, ನಿದ್ರಾಹೀನತೆ, ವೆರಿಕೋಸ್ ವೇನ್, ಬೊಜ್ಜು, ಪಾರ್ಶ್ವವಾಯು, ಕುತ್ತಿಗೆ ನೋವು, ಪಾರ್ಕಿನ್‌ಸನ್ ಇತ್ಯಾದಿ ಎಲ್ಲಾ ನೋವುಗಳಿಗೆ ಥೆರಫಿ ನೀಡಲಾಗುತ್ತದೆ.