ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕನಸುಗಳು 2023- ಉದ್ಘಾಟನಾ ಸಮಾರಂಭ

0

ವಿದ್ಯಾರ್ಥಿಗಳು ಪ್ರತಿಯೊಂದು ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು : ನರಸಿಂಹ ಪೈ

ಪುತ್ತೂರು: ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ ಆದರೆ ಅದನ್ನು ಸಾಕಾರಗೊಳಿಸುವ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ತಲುಪುವುದರ ಬಗ್ಗೆ ಸದಾ ಜಾಗೃತರಾಗಬೇಕು. ಅದಕ್ಕಿಂತ ಮೊದಲು ತಮ್ಮ ಗುರಿಯನ್ನು ನಿಗದಿಪಡಿಸಿಕೊಳ್ಳುವುದು ಮುಖ್ಯ ಎಂದು ಯುವ ಉದ್ಯಮಿ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಕೋಶಾಧಿಕಾರಿ ನರಸಿಂಹ ಪೈ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಕನಸುಗಳಿಗೆ ವೇದಿಕೆಯನ್ನು ನೀಡುವ ಕನಸುಗಳು-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಗಳನ್ನು ಪ್ರತಿಭೆ ಪ್ರದರ್ಶಿಸಲು ಇರುವ ವೇದಿಕೆಯೆಂದು ಭಾವಿಸಿ ಪ್ರತಿಯೊಂದರಲ್ಲೂ ಭಾಗವಹಿಸಬೇಕು. ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಕನಸನ್ನು ನನಸಾಗಿಸಲು ನಿರಂತರ ಪ್ರಯತ್ನ ಮುಖ್ಯ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಶೈಕ್ಷಣಿಕವಾಗಿ ಪ್ರಬಲರಾಗಬೇಕು. ಆಗ ಮಾತ್ರ ಶಿಕ್ಷಣ ಸಂಸ್ಥೆಯು ಸಾರ್ಥಕತೆಯನ್ನು ಕಾಣಲು ಸಾಧ್ಯ. ಇಂದು ಈ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಒಳ್ಳೆಯ ಹೆಸರಿಂದ ಗುರುತಿಸಲ್ಪಡುತ್ತಿದೆ ಎಂದರೆ ಅದಕ್ಕೆ ಕಾರಣ ವಿದ್ಯಾರ್ಥಿಗಳಿಗೆ ಇಲ್ಲಿ ನೀಡುತ್ತಿರುವ ಸಂಸ್ಕಾರ ಮತ್ತು ಸಂಸ್ಕೃತಿ. ನಾವೆಲ್ಲರೂ ದೇಶವನ್ನು ಮುನ್ನಡೆಸುವ ಗುರಿಯನ್ನು ಹೊಂದಿರುವ ಕನಸುಗಾರರಾಗಬೇಕು ಎಂದು ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ಕನಸನ್ನು ಬಿತ್ತುವುದು ಸುಲಭ. ಬಿತ್ತಿದ ಕನಸು ಮೊಳಕೆಯೊಡೆಯಲು ಮನಸ್ಸು ಹದಗೊಂಡಿರಬೇಕು. ಅದನ್ನು ಹದ ಮಾಡುವ ಶಕ್ತಿಯಿರುವುದು ಅಧ್ಯಾಪಕರಿಗೆ ಮಾತ್ರ. ಅವರನ್ನು ಸದಾ ನೆನಪಿಟ್ಟುಕೊಳ್ಳಬೇಕು ಎಂದರು.

ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕೋಶಾಧಿಕಾರಿ ಸಚಿನ್ ಶೆಣೈ ಕೆ, ಸದಸ್ಯೆ ಇಂದಿರಾ ಬಿ ಕೆ, ಉಪಪ್ರಾಂಶುಪಾಲ ದೇವಿಚರಣ್ ರೈ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಅನುಪಮ ಶೇಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಮುಖ್ಯ ಸಂಯೋಜಕಿ ಹರ್ಷಿತಾ ಪಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿ ಉಪನ್ಯಾಸಕಿ ದಯಾಮಣಿ ವಂದಿಸಿದರು.

ವೈವಿಧ್ಯಮಯ ಸ್ಪರ್ಧೆಗಳು:
ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಎರಡು ದಿವಸದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚರ್ಚಾ ಸ್ಪರ್ಧೆ, ಚಿತ್ರಕಲೆ, ಪ್ರಾಕೃತಿಕ ರಂಗೋಲಿ, ಕನ್ನಡ ಕವನ ರಚನೆ ಹಾಗೂ ವಾಚನ, ಯುವ ಪತ್ರಕರ್ತ, ದೃಶ್ಯ- ಕಾವ್ಯ, ಯುವ ಉದ್ಯಮಿ, ಯಕ್ಷಗಾನ ಭಾಗವತಿಕೆ, ಕಲರವ- ಸಾಂಸ್ಕೃತಿಕ ವೈವಿಧ್ಯ, ಮುಖವರ್ಣಿಕೆ, ವಿಡಿಯೋ ಸಂಕಲನ, ನಿಧಿ ಶೋಧ ವಿವಿಧ ಸ್ಪರ್ಧೆಗಳು ನಡೆದವು. ಸುಮಾರು 35 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಸೇರಿದಂತೆ ಸುಮಾರು ೫೦೦ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here