ಕೌಡಿಚ್ಚಾರು ಪರಿಸರದಲ್ಲಿ ಸರಣಿ ಕಳ್ಳತನ – ಮನೆ, ಅಂಗಡಿಯಿಂದ ಕಳ್ಳತನ-ಸಾರ್ವಜನಿಕರಲ್ಲಿ ಆತಂಕ

0

ಪುತ್ತೂರು: ಅರಿಯಡ್ಕ ಗ್ರಾಮದ ಕೌಡಿಚ್ಚಾರು, ಮಡ್ಯಂಗಳ, ಮದ್ಲ ಪ್ರದೇಶಗಳಲ್ಲಿ ಸರಣಿ ಕಳ್ಳತನ ನಡೆದ ಘಟನೆ ನ.27ರ ರಾತ್ರಿ ನಡೆದಿದೆ. ಕಳ್ಳರ ತಂಡವೊಂದು ಇಲ್ಲಿನ ಮನೆ, ಅಂಗಡಿಯಿಂದ ಕಳ್ಳತನ ನಡೆಸಿದೆ. ಕೌಡಿಚ್ಚಾರು ಜಂಕ್ಷನ್‌ನಲ್ಲಿರುವ ಉಮೇಶ್ ಗೌಡರವರ ಶುಭ ಸ್ಟೋರ್‌ನ ಮಾಡಿನ ಹಂಚು ತೆಗೆದು ಒಳ ನುಗ್ಗಿದ ಕಳ್ಳರು ಚಿಲ್ಲರ ಹಣ ಹಾಗೂ ಸಿಗರೇಟ್ ದೋಚಿದ್ದಾರೆ. ಇದರ ಮೌಲ್ಯ ಸುಮಾರು 6 ಸಾವಿರ ಎಂದು ಅಂದಾಜಿಸಲಾಗಿದೆ. ಮದ್ಲದಲ್ಲಿರುವ ದಿನಕರ ಬೋರ್ಕರ್ ಎಂಬವರ ಮನೆ ವಠಾರಕ್ಕೆ ಬಂದ ಕಳ್ಳರು ಒಣಗಲು ಹಾಕಿದ್ದ ಅಡಿಕೆಯಿಂದ ಸುಮಾರು 3 ಸಾವಿರದಷ್ಟು ಅಡಿಕೆ ಕದ್ದೊಯ್ದಿದ್ದಾರೆ. ಇದಲ್ಲದೆ ಮಡ್ಯಂಗಳದಲ್ಲಿರುವ ಗೋಪಾಲಕೃಷ್ಣ ಭಟ್ ಎಂಬವರ ಮನೆಗೆ ಬಂದು ಮನೆಯ ವಠಾರದಲ್ಲಿ ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಅಡಿಕೆಯಿಂದ ಗೋಣಿ ಚೀಲ ಅಡಿಕೆ ಕದ್ದೊಯ್ದು ಇದರಲ್ಲಿ ಒಂದು ಗೋಣಿ ಚೀಲ ಅಡಿಕೆಯನ್ನು ಗೇಟ್ ಬಳಿ ಬಿಸಾಡಿ ಹೋಗಿದ್ದಾರೆ. ಇದರ ಮೌಲ್ಯ ಸುಮಾರು 9 ಸಾವಿರ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.

ಪೊಲೀಸರು ಪರಿಶೀಲನೆ ಮಾಡುತ್ತಿರುವಾಗಲೇ ಕಳ್ಳತನ..!
ಮದ್ಲ ದಿನಕರ ಬೋರ್ಕರ್ ಎಂಬವರ ಮನೆಯಿಂದ ರಾತ್ರಿ 10 ಗಂಟೆ ಸುಮಾರಿಗೆ ಕಳ್ಳತನ ನಡೆದಿದ್ದು ಈ ಬಗ್ಗೆ ಪೊಲೀಸರಿಗೆ ತಿಳಿಸಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತಡರಾತ್ರಿ 12 ಗಂಟೆ ತನಕವೂ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ವೇಳೆಗಾಗಲೇ ಕೌಡಿಚ್ಚಾರುನಲ್ಲಿ ಅಂಗಡಿ ಮತ್ತು ಮಡ್ಯಂಗಳದಲ್ಲಿ ಮನೆಯಿಂದ ಕಳ್ಳತನ ನಡೆದಿದೆ. ಒಂದು ಕಡೆಯಲ್ಲಿ ಪೊಲೀಸರು ಕಳ್ಳರ ಹುಡುಕಾಟ ನಡೆಸುತ್ತಿರುವಾಗಲೇ ಅಲ್ಲೇ ಆಸುಪಾಸಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಸಾರ್ವಜನಿಕರಲ್ಲಿ ಆತಂಕ
ಸುಮಾರು ನಾಲ್ಕು ಜನರ ತಂಡದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಕಳ್ಳರನ್ನು ಮನೆಯವರು ನೋಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇದ್ದು, ಮನೆಗಳಿಂದ ಅಡಿಕೆ ಕಳ್ಳತನ ಹಾಗೂ ಅಂಗಡಿಗಳಿಂದ ಕಳ್ಳತನ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೃಷಿಕರಲ್ಲಿ ಆತಂಕ ಉಂಟಾಗಿದ್ದು ಅಂಗಲದಲ್ಲಿ ಅಡಿಕೆ ಒಣ ಹಾಕುವುದು ಯಾವ ಧೈರ್ಯದಲ್ಲಿ ಎಂದು ಹೇಳುತ್ತಿದ್ದಾರೆ. ಅಡಿಕೆ ಅಂಗಡಿ ಮಾಲಕರಲ್ಲೂ ಆತಂಕ ಉಂಟಾಗಿದೆ. ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ಬರುವಂತೆ ಸಾರ್ವಜನಿಕರು ವಿನಂತಿಸಿಕೊಂಡಿದ್ದಾರೆ. ಕಳ್ಳತನದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ತನಿಖೆ ಶುರುವಿಟ್ಟುಕೊಂಡಿದ್ದಾರೆ.

LEAVE A REPLY

Please enter your comment!
Please enter your name here