ಸರಕಾರಿ ಸೇರಿದಂತೆ, ಖಾಸಗಿ ಬಸ್ಸುಗಳಲ್ಲಿ ಹೆಚ್ಚುವರಿ ಪ್ರಯಾಣಿಕರು, ಫುಟ್ಬೋರ್ಡ್ ನಲ್ಲಿ ನೇತಾಡಿದರೆ ವಾಹನಗಳ ಪರವಾನಿಗೆ ರದ್ದು: ಎಸ್ಪಿ ಸಿ.ಬಿ.ರಿಷ್ಯಂತ್

0

ಮಂಗಳೂರು : ದ.ಕ.ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರಿ ಸೇರಿದಂತೆ, ಖಾಸಗಿ ಬಸ್ಸುಗಳ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು, ಶಾಲಾ ವಾಹನಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದರೆ, ಅಂತಹ ವಾಹನಗಳನ್ನು ತಡೆದು, ವಶಕ್ಕೆ ಪಡೆದು, ಪರವಾನಿಗೆ ರದ್ದತಿಗೆ ಕ್ರಮ ವಹಿಸಬೇಕು. ಪ್ರತಿ ಠಾಣಾ ವ್ಯಾಪ್ತಿಯಿಂದ ಈ ನಿಟ್ಟಿನಲ್ಲಿ ದಾಖಲಿಸಿದ ಪ್ರಕರಣಗಳ ವರದಿಯನ್ನು ಡಿ. 25ರೊಳಗೆ ನನಗೆ ಒದಗಿಸಬೇಕು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆದ.ಕ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಆಲಿಕೆ ಸಭೆಯಲ್ಲಿ ದಲಿತ ಮುಖಂಡರ ದೂರಿನ ಮೇರೆಗೆ ಈ ಪ್ರತಿಕ್ರಿಯೆ ನೀಡಿದರು.

ದಲಿತ ನಾಯಕಿ ಈಶ್ವರಿ ಅವರು ವಿಷಯ ಪ್ರಸ್ತಾಪಿಸಿ, ಬೆಳ್ತಂಗಡಿ ಭಾಗದಲ್ಲಿ ಸರಕಾರಿ ಬಸ್ಸಿನಲ್ಲಿ ಫುಟ್‌ಬೋರ್ಡ್‌ನಲ್ಲಿ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುವ ಪರಿಸ್ಥಿತಿ ಇದೆ. ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಆಗಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಪೊಲೀಸ್ ಇಲಾಖೆಯಿಂದ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು

ಎಸ್ಪಿ  ರಿಷ್ಯಂತ್ ಮಾತನಾಡಿ, ‘ಇದು ನಾನೂ ಗಮನಸಿದ್ದೇನೆ. ವೀಡಿಯೋ ಕೂಡಾ ನಾನು ನೋಡಿದ್ದೇನೆ. ಇದು ಅತ್ಯಂತ ಗಂಭೀರ ಹಾಗೂ ಅಪಾಯಕಾರಿ. ತಿರುವುಗಳಲ್ಲಿ ಅತ್ಯಂತ ಗಂಭೀರ ಹಾಗೂ ಅಪಾಯಕಾರಿ. ತಿರುವುಗಳಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎಂದರು.ಬೆಳ್ತಂಗಡಿಯ ಶೇಖರ್ ಅವರು ಮಾತನಾಡಿ, ನಾರಾವಿಯಿಂದ ಬೆಳ್ತಂಗಡಿಗೆ ಒಂದು ಸರಕಾರಿ ಬಸ್ಸಿಗಾಗಿ ಸುಮಾರು 300ರಷ್ಟು ಪ್ರಯಾಣಿಕರು ಕಾಯಬೇಕಾದ ಪರಿಸ್ಥಿತಿ ಇದೆ. ಅಲ್ಲಿಗೆ ಹೆಚ್ಚುವರಿ ಸರಕಾರಿ ಬಸ್ಸುಗಳ ಅಗತ್ಯವಿದೆ ಎಂದು ಒತ್ತಾಯಿಸಿದರು. ನಾವು ಈಗಾಗಲೇ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ ಮನವಿ ಮಾಡಿದ್ದೇವೆ. ಮಾತ್ರವಲ್ಲದೆ, ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ನಾವು ಗಂಭೀರವಾಗಿ ಕ್ರಮ ವಹಿಸಲಿದ್ದೇವೆ ಎಂದರು.

ಶಾಲೆಗಳಿಗೆ ಮಕ್ಕಳನ್ನು ಒಯ್ಯುವ ಆಟೋಗಳಲ್ಲಿಯೂ 10ಕ್ಕೂ ಅಧಿಕ ಮಕ್ಕಳನ್ನು ಸಾಗಿಸಲಾಗುತ್ತಿದೆ ಎಂಬ ದೂರು ವ್ಯಕ್ತವಾದಾಗ ಎಲ್ಲಾ ಶಾಲೆಗಳಿಗೆ ಡಿಡಿಪಿಐ ಮೂಲಕ, ಮಕ್ಕಳ ಸಾಗಾಟದ ವಾಹನಗಳ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಬೇಕು. ಅಂತಹ ವಾಹನಗಳು ಕಂಡು ಬಂದರೆ ಸರ್ಕಲ್‌ಗಳಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ಪ್ರಕರಣ ದಾಖಲಿಸಿ ದಂಡ ವಿಧಿಸಿ ಎಂದು ಎಸ್ಪಿ ನಿರ್ದೇಶನ ನೀಡಿದರು.

ಅಕ್ರಮ ಮರಳುಗಾರಿಕೆ ವಿರುದ್ಧ ಜಂಟಿ ಕಾರ್ಯಾಚರಣೆ
ಅಕ್ರಮ ಮರಳುಗಾರಿಕೆ ಬಗ್ಗೆ ಮಾಹಿತಿ ನೀಡಿ ಹಿಂದಿನ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ಕುರಿತಂತೆ ವ್ಯಕ್ತವಾದ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಋಷ್ಯಂತ್, ಜಿಲ್ಲಾಧಿಕಾರಿ , ಪಿಡಬ್ಲ್ಯುಡಿ, ಗಣಿ ಇಲಾಖೆ ಹಾಗೂ ಪೊಲೀಸ್ ಠಾಣಾಧಿಕಾರಿಗಳನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಒಂದನ್ನು ಈ ನಿಟ್ಟಿನಲ್ಲಿ ರಚಿಸಲಾಗಿದೆ. ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಬಂದ ದೂರನ್ನು ಈ ಗ್ರೂಪ್‌ನಲ್ಲಿ ಹಾಕಿ ಜಂಟಿಕಾರ್ಯಾಚರಣೆಯ ಮೂಲಕ ಕ್ರಮ ವಹಿಸಲಾಗುತ್ತದೆ. ಮಾಹಿತಿ ನೀಡಿದವರು ಯಾರೆಂದು ಸೋರಿಕೆ ಆಗದಂತೆ ಶೇ. 100ರಷ್ಟು ಕ್ರಮಕ್ಕೆ ಇಲಾಖೆ ಬದ್ಧವಾಗಿದೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದರು.

ಬೆಳ್ತಂಗಡಿ ನದಿ ಬದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. 81 ಗ್ರಾಮದಲ್ಲಿ ಐದು ಪರವಾನಿಗೆದಾರರು ಮಾತ್ರ ಇದ್ದರೂ ಎಲ್ಲಾ ಕಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ವ್ಯಕ್ತವಾದ ದೂರಿಗೆ, ಸ್ಪಷ್ಟ ಮಾಹಿತಿ ನೀಡಿದರೆ ಕ್ರಮ ವಹಿಸುವುದಾಗಿ ಎಸ್ಪಿ ಭರವಸೆ ನೀಡಿದರು. ಸಭೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here