ಮಂತ್ರಾಕ್ಷತೆಯಂತೆ ಹಿಂದುಗಳು ಪಾವಿತ್ರ್ಯತೆಗಾಗಿ ಧರ್ಮದಲ್ಲಿ ಬೆರೆಯಬೇಕು

0

ಅಯೋಧ್ಯೆಯ ಅಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಎಡನೀರು ಶ್ರೀ ಆಶೀರ್ವಚನ
ಶ್ರೀರಾಮ ಮಂದಿರ ಜಗತ್ತಿನ ತೀರ್ಥಕ್ಷೇತ್ರವಾಗಿ ರೂಪುಗೊಳ್ಳಲಿದೆ- ನಾ ಸೀತಾರಾಮ

ಪುತ್ತೂರು: ನಿರಂತರ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣ ಆಗಿದೆ. ಇದು ಭಾರತ ಹಿಂದು ರಾಷ್ಟ್ರ ಎಂದು ಜಗತ್ತಿನ ದೃಷ್ಟಿಯಲ್ಲಿ ಸಾಕಾರಗೊಳಿಸಿದೆ. ಅದೇ ರೀತಿ ಮಂತ್ರಾಕ್ಷತೆಯಂತೆ ಹಿಂದುಗಳು ಪಾವಿತ್ರ್ಯತೆಗಾಗಿ ಧರ್ಮದಲ್ಲಿ ಬೆರೆಯಬೇಕೆಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಹೇಳಿದರು.


ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ನಡೆಯುವ ಅಕ್ಷತೆ ವಿತರಣಾ ಕಾರ್ಯಕ್ರಮದ ಕುರಿತು ಮನೆ ಮನೆ ಸಂಪರ್ಕ ಅಭಿಯಾನದ ಅಂಗವಾಗಿ ಆಯೋಧ್ಯೆಯಿಂದ ಬಂದಿರುವ ಅಕ್ಷತೆಯನ್ನು ಪುತ್ತೂರು ಜಿಲ್ಲೆಯ 7 ತಾಲೂಕು ಕೇಂದ್ರಗಳಿಗೆ ವಿತರಿಸುವ ಕುರಿತು ನ.30ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂಧ್ರ ಕಲಾ ಮಂದಿರದಲ್ಲಿ ಅವರು ಅಕ್ಷತೆಗೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.

ನಾವು ಗೊಂದಲದ ಸಮಾಜವನ್ನು ದೇಶದಲ್ಲಿ ಕಾಣುತ್ತಿದ್ದೇವೆ. ಅನ್ಯಮತಿಯರಿಗೆ ಪರ ಧರ್ಮದ ಚಿಂತೆಯಾದರೆ ಸ್ವಧರ್ಮಿಯರಿಗೆ ನಮ್ಮವರದ್ದೇ ಹೆಚ್ಚಿನ ಚಿಂತೆ. ನಮ್ಮ ಧರ್ಮದವರೇ ನಾಶಕ್ಕೆ ಕಾರಣವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಆರಾಧನ ಕೇಂದ್ರ ಪುರಾತನ ಪ್ರಸಿದ್ಧ ಕ್ಷೇತ್ರ ಸುವರ್ಣಗೊಂಡಾಗ ನಮ್ಮ ಧರ್ಮ ಉಜ್ವಲಿಸುತ್ತದೆ ಎಂದ ಅವರು ಅಕ್ಕಿಗೆ ಕುಂಕುಮದ ಸ್ಪರ್ಶದಿಂದ ಪವಿತ್ರ ಅಕ್ಷತೆಯಾದಂತೆ ಹಿಂದುಗಳು ಕೂಡಾ ಧರ್ಮದೊಂದಿಗೆ ಬೆರೆಯಬೇಕು. ನಮ್ಮ ಪ್ರತಿಯೊಬ್ಬ ಹಿಂದು ಧರ್ಮದೊಂದಿಗೆ ಬೆರೆಯಬೇಕು. ವಿಮೋಚನೆಗೊಳ್ಳುವ ಸಾತ್ವಿಕ ಹೋರಾಟವನ್ನು ಅರ್ಥೈಸಿಕೊಳ್ಳಬೇಕು. ಮುಂದೆ ಭಾರತ ವಿಶ್ವಗುರುವಾಗಿ ಶೋಭಿಸಲಿ ಎಂದರು.


ಶ್ರೀರಾಮ ಮಂದಿರ ಜಗತ್ತಿನ ತೀರ್ಥಕ್ಷೇತ್ರವಾಗಿ ರೂಪುಗೊಳ್ಳಲಿದೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನಾ ಸೀತಾರಾಮ ಅವರು ಮಾತನಾಡಿ ಏನೆ ಆಗಲಿ ನಮಗೆ ಮತ್ತೆ ಮತ್ತೆ ರಾಮ ಬೇಕೆ ಬೇಕು ಎಂಬ ನಿಟ್ಟಿನಲ್ಲಿ ನಾವು ಸ್ವಯಂ ಸೇವಕರಿಗೆ ಮಾಹಿತಿ ನೀಡುತ್ತೇವೆ. 1528 ನೇ ಇಸವಿಯಲ್ಲಿ ಧರ್ಮ ವಿರೋಧಿಗಳು ನಮ್ಮ ಧರ್ಮದ ಮೇಲೆ ಅತ್ಯಾಚಾರ ಮಾಡಿ ನಾಶ ಮಾಡಿದರು. ಇವತ್ತು ಸುಮಾರು 496 ವರ್ಷಗಳು ಹಿಂದುಗಳ ಸಹನೆ ಎಂತಹ ಶಕ್ತಿಯಾಗಿ ಮೂಡಿ ಬಂದಿದೆ ಎಂದು ಚಿಂತನೆ ಮಾಡಬೇಕು ಎಂದ ಅವರು 1984ರಲ್ಲಿ ಸಂಘದ ಅಪೇಕ್ಷೆಯಂತೆ ವಿಶ್ವಹಿಂದು ಪರಿಷತ್ ನೇತೃತ್ವದಲ್ಲಿ ರಾಮಜನ್ಮ ಭೂಮಿ ಸಮಿತಿಯಿಂದ ನಡೆದ ಹಂತಹಂತವಾದ ಹೋರಾಟ ಜಗತ್ತಿನ ಕಣ್ಣು ತೆರೆಸಿತು. 1990ರಲ್ಲಿ ಮತ್ತು 92ರಲ್ಲಿ ಕರಸೇವೆಯಾಯಿತು. ಬಳಿಕದ ದಿನದಲ್ಲಿ ರಾಮ ಭಕ್ತರ ಹಣದಿಂದಲೇ ರಾಮಮಂದಿರ ನಿರ್ಮಾಣ ಮಾಡಲಾಗುತ್ತಿದೆ. ರಾಮಮಂದಿರದಲ್ಲಿ ರಾಮಲಲ್ಲಾನ ಭವ್ಯ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ. ಈ ನಿಟ್ಟಿನಲ್ಲಿ ಇಡಿ ಅಯೋಧ್ಯೆ ನಮಗೆ ಪ್ರೇರಣೆಯಾಗಲಿದೆ. ಜಗತ್ತಿನ ತೀರ್ಥಕ್ಷೇತ್ರವಾಗಿ ರೂಪುಗೊಳ್ಳಲಿದೆ. ಈ ನಿಟ್ಟಿನಲ್ಲಿ ಮಂತ್ರಾಕ್ಷತೆಯನ್ನು ಮತ್ತು ಶ್ರೀರಾಮನ ಭಾವಚಿತ್ರವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಅವರು ಹೇಳಿದರು.


ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸೂಚನೆ ಪಾಲಿಸಿ:
ಶ್ರೀರಾಮನ ಮಂದಿರದ ಉದ್ಘಾಟನೆಗೆ ಸಂಬಂಧಿಸಿ ಪ್ರಥಮವಾಗಿ ಜ.1ರಂದು ಗುಂಪು ಚರ್ಚೆ ಮುಗಿಸಬೇಕು. ಮನೆ ಮನೆಗೆ ಭಜನೆ ಮೂಲಕ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ತಲುಪಿಸಬೇಕು. ಮನೆಗೆ ಹೋಗುವ ಸಂದರ್ಭ ಅಲ್ಲಿ ಯಾರೂ ಇಲ್ಲದಿದ್ದರೆ ಬಾಗಿಲಲ್ಲಿ ಅಥವಾ ಅನಾಥ ಜಗಲಿಯಲ್ಲಿ ಅಕ್ಷತೆಯನ್ನು ಇಡದೆ ಆ ಮನೆಯಲ್ಲಿ ಅವರು ಯಾವ ಸಮಯಕ್ಕೆ ಬರುತ್ತಾರೋ ಆ ಸಂದರ್ಭ ತೆರಳಿ ಅವರಿಗೆ ಭಕ್ತಿ ಪ್ರಧಾನವಾಗಿ ನೀಡಬೇಕು. ಜ.15ಕ್ಕೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸಮಾಲೋಚನೆ ಮಾಡಬೇಕು. ಜ.22ರಂದು ಪ್ರತಿ ದೇವಸ್ಥಾನ, ಮಂದಿರದಲ್ಲಿ ಭಜನೆ, ಹೋಮ ಮಾಡಬೇಕು. ಪ್ರತಿ ಮನೆಯಲ್ಲೂ 5 ದೀಪಗಳನ್ನು ಬೆಳಗಿಸಿ ಉತ್ತರ ಮುಖವಾಗಿ ನಿಂತು ಆರತಿ ಬೆಳಗಿಸಬೇಕು. ಮನೆ ಮನೆ ಸಂರ್ಪಕದಲ್ಲಿ ಯಾವುದೇ ಸಂದರ್ಭದಲ್ಲಿ ಯಾವುದೇ ದೇಣಿಗೆ ಸ್ವೀಕರಿಸುವಂತಿಲ್ಲ. ಕೊನೆಯ ತನಕ ಈ ಶುದ್ಧತೆಯನ್ನು ಕಾಪಾಡಬೇಕು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಏನು ಸೂಚನೆ ಕೊಟ್ಟಿದೆಯೋ ಅದನ್ನೇ ಪಾಲಿಸಬೇಕು. ಬಹಿರಂಗವಾಗಿ ಶೋಭಾಯಾತ್ರೆ ಮಾಡಬಾರದು. ಅನುಶಾಸನದಿಂದ ಕೆಲಸ ಮಾಡಬೇಕು ಎಂದು ಸ್ವಯಂ ಸೇವಕರಿಗೆ ನಾ ಸೀತಾರಾಮ ಹೇಳಿದರು. ವಿಶ್ವಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲಾ ಸಂಘ ಚಾಲಕ್ ವಿನಯಚಂದ್ರ ಉಪಸ್ಥಿತರಿದ್ದರು. ಪುರೋಹಿತ ವೆಂಕಟೇಶ್ ಭಟ್ ವೇದಗೋಷ ಪಠಿಸಿದರು. ರವೀಂದ್ರ ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿಮಂತ್ರದ ಬಳಿಕ ತಾಲೂಕು ಕೇಂದ್ರಗಳಗೆ ಎಡನೀರು ಶ್ರೀಗಳು ಅಕ್ಷತಾ ಕಲಶವನ್ನು ವಿತರಿಸಿದರು.


ವಿವಿಧ ತಾಲೂಕಿನಲ್ಲಿ ಅಕ್ಷತೆ ಪೂಜೆ, ಸಮಾವೇಶ:
ಪುತ್ತೂರಿನಿಂದ ಸಂಘದ ಪುತ್ತೂರು ಜಿಲ್ಲೆಯ 7 ತಾಲೂಕುಗಳಾದ ವೇಣೂರು, ಬೆಳ್ತಂಗಡಿ, ಕಡಬ, ಸುಳ್ಯ, ಪುತ್ತೂರು ನಗರ, ಗ್ರಾಮಾಂತರ, ಉಜಿರೆಯ ಕೇಂದ್ರಗಳಿಗೆ ಅಕ್ಷತೆ ವಿತರಣೆಯಾಗಿದ್ದು, ಕಡಬ ತಾಲೂಕಿನಲ್ಲಿ ದುರ್ಗಾಂಬಿಕ ಮಂದಿರದಲ್ಲಿ ಅಕ್ಷತೆಯನ್ನು ಪೂಜಿಸಲಾಗುವುದು. ಅಲ್ಲಿ ಡಿ.14ರಂದು ಸಮಾವೇಶ ನಡೆಯಲಿದೆ. ಸುಳ್ಯದಲ್ಲಿ ಶ್ರೀರಾಮ ಭಜನಾ ಮಂದಿರದಲ್ಲಿ ಅಕ್ಷತೆ ಇರಿಸಲಾಗುವುದು. ಡಿ.5ಕ್ಕೆ ಅಲ್ಲಿ ಸಮಾವೇಶ ನಡೆಯಲಿದೆ. ಪುತ್ತೂರು ನಗರದಲ್ಲಿ ಡಿ.10ಕ್ಕೆ ನಟರಾಜ ವೇದಿಕೆಯಲ್ಲಿ ಸಮಾವೇಶ ನಡೆಯಲಿದೆ. ಉಜಿರೆಗೆ ಸಂಬಂಧಿಸಿ ಉಜಿರೆ ದೇಸ್ಥಾನದಲ್ಲಿ ಅಕ್ಷತೆ ಇರಿಸಲಾಗುವುದು. ಡಿ.22ಕ್ಕೆ ಅಲ್ಲಿ ಸಮಾವೇಶ ನಡೆಯಲಿದೆ. ಪುತ್ತೂರು ಗ್ರಾಮಾಂತರಕ್ಕೆ ಸಂಬಂಧಿಸಿ ಹನುಮಗಿರಿಯಲ್ಲಿ ಅಕ್ಷತೆಯನ್ನು ಇರಿಸಿ. ಡಿ.9ಕ್ಕೆ ಸಮಾವೇಶ ನಡೆಯಲಿದೆ. ನಾಳದಲ್ಲಿ ದುರ್ಗಾಪರವೇಶ್ವರಿ ದೇವಸ್ಥಾನದಲ್ಲಿ ಅಕ್ಷತೆ ಇರಿಸಿ ಡಿ. 10ಕ್ಕೆ ಸಮಾವೇಶ ನಡೆಯಲಿದೆ. ವೇಣೂರಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲಿ ಅಕ್ಷತೆಯನ್ನು ಇರಿಸಿ ಡಿ.14ಕ್ಕೆ ಸಮಾವೇಶ ನಡೆಯಲಿದೆ. ಕಡಬ ತಾಲೂಕಿನ ಮೋಹನ್‌ದಾಸ್, ಸುಳ್ಯದ ನೇಮಿಚಂದ್ರ, ಪುತ್ತೂರು ನಗರದ ಯುವರಾಜ್, ಉಜಿರೆಯ ಪ್ರಶಾಂತ್, ಗ್ರಾಮಾಂತರದ ಡಾ .ಕೃಷ್ಣಪ್ರಸನ್ನ, ನಾಳದ ರವಿ ಆಚಾರ್ಯ, ವೇಣೂರಿನ ಪ್ರಕಾಶ್ ಪುರೋಹಿತ್ ತಮ್ಮ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here