ಪುತ್ತೂರು: ಸಾಮಾಜಿಕ ನ್ಯಾಯದ ನೆಲೆಕಟ್ಟಿನಲ್ಲಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರ ಮೀಸಲಾತಿ ಸಮಸ್ಯೆಯ ಗೊಂದಲವನ್ನು ಸರಿಪಡಿಸಿ ಮುಸ್ಲಿಮರ ಮೀಸಲಾತಿಯನ್ನು ಶೇಕಡಾ 8ಕ್ಕೆ ಏರಿಸಬೇಕು, ಕಾಂತರಾಜು ಆಯೋಗದ ವರದಿಯನ್ನು ಬಿಡುಗಡೆ ಮಾಡಬೇಕು ಮತ್ತು ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬ ವಿಚಾರದಲ್ಲಿ ಡಿ.4ರಿಂದ ಬೆಳಗಾವಿಯ ಸುವರ್ಣ ಸೌದದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಧ್ವನಿಯೆತ್ತಿ ಸರಕಾರದ ಮೇಲೆ ಒತ್ತಡ ಹೇರಲು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರ ನೇತೃತ್ವದ ನಿಯೋಗವು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
SDPI ಪಕ್ಷದ ವತಿಯಿಂದ ಸಲ್ಲಿಸಿದ ಬೇಡಿಕೆಯನ್ನು ಸ್ವೀಕರಿಸಿದ ಶಾಸಕರು ಈ ಬಗ್ಗೆ ಸರಕಾರದ ಗಮನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿ ಮೀಸಲಾತಿ ಗೊಂದಲ ನಿವಾರಣೆ ಮತ್ತು ಆಯೋಗದ ವರದಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದರು.
ಶಾಸಕರನ್ನು ಭೇಟಿಯಾದ ನಿಯೋಗದಲ್ಲಿ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ, ಸಮಿತಿ ಸದಸ್ಯ ಅಬ್ದುಲ್ ರೆಹಮಾನ್(ರಹೀಂ) ಮತ್ತು ಪುತ್ತೂರು ನಗರಾಧ್ಯಕ್ಷ ಸಿರಾಜ್ ಕೂರ್ನಡ್ಕ ಮತ್ತು ಇತರರು ಉಪಸ್ಥಿತರಿದ್ದರು.