ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆ

0

ಪ್ರತಿಯೊಬ್ಬ ನಾಯಕನೂ ಕಾರ್ಯಕರ್ತರ ನೋವಿಗೆ ಸ್ಪಂದಿಸಬೇಕು: ಅಶೋಕ್ ರೈ

ಪುತ್ತೂರು: ಕಾರ್ಯಕರ್ತರೇ ಪಕ್ಷದ ಬೆನ್ನೆಲುಬು ಎಂದು ಬಾಯಿಯಲ್ಲಿ ಹೇಳಿದರೆ ಸಾಲದು ಪಕ್ಷದ ವಿವಿಧ ಜವಾಬ್ದಾರಿಯಲ್ಲಿರುವ ಪ್ರತಿಯೊಬ್ಬ ಪದಾಧಿಕಾರಿಯೂ ಕಾರ್ಯಕರ್ತರ ನೋವಿಗೆ ಸ್ಪಂದಿಸಬೇಕು ಮತ್ತು ಪ್ರತೀಯೊಂದು ಕಾರ್ಯಕ್ರಮದಲ್ಲಿಯೂ ಅವರನ್ನು ಸೇರಿಸಿಕೊಳ್ಳಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎಂಬ ಕೊರಗು ಇತ್ತು ಅದನ್ನು ಕಾರ್ಯಕರ್ತರೇ ಹೋಗಲಾಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಹೋರಾತ್ರಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ, ಕಾರ್ಯಕರ್ತರ ಶ್ರಮದಿಂದ ನಾನಿಂದು ಶಾಸಕನಾಗಿದ್ದೇನೆ, ನಾನು ಯಾವತ್ತೂ ಕಾರ್ಯಕರ್ತರ ಕಡೆಗಣನೆ ಮಾಡಲಾರೆ ಮತ್ತು ಯಾವ ನಾಯಕರೂ ಕಾರ್ಯಕರ್ತರನ್ನು ಕಡೆಗಣಿಸಬಾರದು. ಅವರಿಲ್ಲದೇ ಇದ್ದರೆ ಇಲ್ಲಿ ಪಕ್ಷ ಉಳಿಯಲು ಸಾಧ್ಯವಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕರ್ತರ ಕೈ ಬಲಪಡಿಸುವ ಕೆಲಸವನ್ನು ನಾವು ಮಾಡಬೇಕಿದೆ. ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ನಡೆಯುವ ಯಾವುದೇ ಅಭಿವೃದ್ದಿ ಕಾರ್ಯಗಳಿಗೆ ಸ್ಥಳೀಯ ವಲಯಾಧ್ಯಕ್ಷರು, ಬೂತ್ ಅಧ್ಯಕ್ಷರಿಗೆ ತಿಳಿಸಿಯೇ ಕಾಮಗಾರಿ ಗುದ್ದಲಿಪೂಜೆ, ಉದ್ಘಾಟನೆ ಮಾಡುತ್ತಿದ್ದೇನೆ. ವಲಯ, ಬೂತ್ ಅಧ್ಯಕ್ಷರ ಗಮನಕ್ಕೆ ಬಾರದೆ ಯವುದೇ ಕೆಲಸಗಳು ನಡೆಯುವುದಿಲ್ಲ, 94 ಸಿ , 94 ಸಿಸಿ ಹಾಗೂ ಅಕ್ರಮ ಸಕ್ರಮ ಕಡತಗಳು ವಿಲೇವಾರಿಯಾಗುವಲ್ಲಿಯೂ ಕಾರ್ಯಕರ್ತರ ಸಹಕಾರ ಅತೀ ಅಗತ್ಯವಾಗಿದೆ. ಗ್ರಾಮದ ಅಭಿವೃದ್ದಿ ವಿಚಾರಗಳು ನಮ್ಮ ಕಾರ್ಯಕರ್ತರ ಮೂಲಕವೇ ಗ್ರಾಮಕ್ಕೆ ತಲುಪಿಸುವ ಕೆಲಸವನ್ನು ನಾನು ಮಾಡುತ್ತೇನೆ.

ಕಾರ್ಯಕರ್ತರ ನೋವಿಗೆ ತಕ್ಷಣ ಸ್ಪಂದನೆ:
ಯಾವುದೇ ಕಾರ್ಯಕರ್ತಗೆ ನೋವಾದರೂ ಅದಕ್ಕೆ ನಾನು ಶಾಸಕನಾಗಿ ತಕ್ಷಣ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ ಶಾಸಕರು ಕಾರ್ಯಕರ್ತರು ಯಾವುದೇ ಸಮಸ್ಯೆಗಳಿದ್ದರೂ ನನ್ನಲ್ಲಿ ನೇರವಾಗಿ ಹೇಳಬಹುದು ಅಥವಾ ಬ್ಲಾಕ್ ಅಧ್ಯಕ್ಷರು ಅಥವಾ ಪದಾಧಿಕಾರಿಗಳ ಬಳಿ ತಿಳಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಎಲ್ಲರೂ ಸೇರಿ ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸವನ್ನು ಮಾಡಬೇಕು. ಮುಂದಿನ ಲೋಕಸಭಾ ಚುನಾವಣೆಗೆ ಈಗಲೇ ತಯಾರು ಮಾಡಿಕೊಳ್ಳಬೇಕು. ಗೃಹಲಕ್ಷ್ಮೀ ಯೋಜನೆ ಸಿಗದೇ ಇರುವ ಕುಟುಂಬವನ್ನು ಭೇಟಿಯಾಗಿ ಅವರ ಪಟ್ಟಿಯನ್ನು ಕಚೇರಿಗೆ ಕಳುಹಿಸಿ ನಮ್ಮ ಸಿಬ್ಬಂದಿಗಳು ಅದರ ವ್ಯವಸ್ಥೆಯನ್ನು ಮಾಡಲಿದ್ದಾರೆ. ಗ್ರಾಮಗಳಿಗೆ ವಾರದಲ್ಲಿ ಒಂದು ದಿನವಾದರೂ ಭೇಟಿಯಾಗಿ ಪಕ್ಷದ ಪರ ಪ್ರಚಾರ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here