ವಿಟ್ಲ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ವಿಟ್ಲ ಘಟಕದ ಆಶ್ರಯದಲ್ಲಿ ಡಿ. 7ರಿಂದ ಡಿ.11ರ ವರೆಗೆ ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಕಬ್ಸ್ -ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್-ಗೈಡ್ಸ್ ಮೇಳ ಮತ್ತು ರೋವರ್ಸ್- ರೇಂಜರ್ಸ್ ಸಮಾಗಮ ಒಳಗೊಂಡ ಜಿಲ್ಲಾ ಕ್ಯಾಂಪೋರಿ 2023-2024 ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ದಂಬೆಕಾನ ಪ್ರಭಾಕರ ಶೆಟ್ಟಿ ತಿಳಿಸಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲದ ವಿಠಲ ಪದವಿಪೂರ್ವ ಕಾಲೇಜು, ವಿಠಲ ಪ್ರೌಢಶಾಲೆ, ವಿಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆ,ಸರಕಾರಿ ಪ್ರೌಢಶಾಲೆ ( ಆರ್ ಎಂಎಸ್ ಎ), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಂಟ್ ರೀಟಾ ಹಿರಿಯ ಪ್ರಾಥಮಿಕ ಶಾಲೆಗಳು ಕ್ಯಾಂಪೋರಿಗೆ ಸಹಯೋಗ ನೀಡಿವೆ ಎಂದರು.
ಡಿ.7 ರಂದು ಸಂಜೆ ಭಾರತ ಸ್ಕೌಟ್ಸ್ ಗೈಡ್ಸ್ ನ ಸ್ಥಳೀಯ ಸಂಸ್ಥೆ ಯ ಅಧ್ಯಕ್ಷ ಸುದರ್ಶನ ಪಡಿಯಾರ್ ಅವರ ಅಧ್ಯಕ್ಷತೆಯಲ್ಲಿ ಶಾಸಕ ಅಶೋಕ ಕುಮಾರ್ ರೈ ರೋವರ್ಸ್ ರೇಂಜರ್ಸ್ ಸಮಾಗಮ ಕಾರ್ಯಕ್ರಮ ಉದ್ಘಾಟಿಸುವರು. ಸಾಹಸಮಯ ಚಟುವಟಿಕೆಗಳನ್ನು ಉದ್ಯಮಿ ಸುರೇಶ್ ಬನಾರಿ ಉದ್ಘಾಟಿಸುವರು.
ಡಿ. 8ರಂದು ಸಂಜೆ ಸ್ಕೌಟ್ಸ್ ಮತ್ತು ಗೈಡ್ಸ್ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು.ಪ್ರಭಾಕರ ಶೆಟ್ಟಿ ದಂಬೆಕಾನ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಉಳಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಉದ್ಘಾಟಿಸುವರು.
ಡಿ. 9ರಂದು ಬೆಳಗ್ಗೆ ಭಾರತ ಸ್ಕೌಟ್ಸ್ ಗೈಡ್ಸ್ ನ ಉಪಾಧ್ಯಕ್ಷರಾದ ಇರಾ ಬಾಳಿಕೆ ಸತೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಕಬ್ಸ್ ಬುಲ್ ಬುಲ್ಸ್ ಉತ್ಸವವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು.ವಿಟ್ಲ ಶೋಕಮಾತೆ ಇಗರ್ಜಿಯ ಧರ್ಮಗುರು ರೆ.ಫಾ. ಐವನ್ ಮೈಕಲ್ ರೋಡಿಗ್ರಸ್ ಮತ್ತು ವಿಟ್ಲ ಮೇಗಿನಪೇಟೆ ಕೇಂದ್ರ ಜುಮಾ ಮಸೀದಿಯ ಧರ್ಮಗುರು ಬಹು ಮಹಮ್ಮದ್ ನಸೀಹ್ ದಾರಿಮಿ ಉಪಸ್ಥಿತರಿರುವರು. ವೈದ್ಯಲೋಕವನ್ನು ಡಾ. ಗೀತಾಪ್ರಕಾಶ್ ಉದ್ಘಾಟಿಸುವರು.
ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತ ಸ್ಕೌಟ್ಸ್-ಗೈಡ್ಸ್‌ನ ಜಿಲ್ಲಾ ಆಯುಕ್ತ ಡಾ. ಎಂ ಮೋಹನ ಆಳ್ವ ವಹಿಸುವರು. ಭಾರತ ಸ್ಕೌಟ್ಸ್ ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ. ಜಿ.ಆರ್. ಸಿಂಧ್ಯಾ ಸಮಾರೋಪ ಭಾಷಣ ಮಾಡುವರು. ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್, ವಿಟ್ಲ ಅರಮನೆಯ ಬಂಗಾರ ಅರಸರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು. ಉದ್ಯಮಿ ರಾಜಾರಾಂ ಭಟ್ ಬಲಿಪಗುಳಿ ಜಾನಪದಲೋಕವನ್ನು ಉದ್ಘಾಟಿಸಲಿರವರು ಎಂದವರು ಮಾಹಿತಿ ನೀಡಿದರು.
ಸಸ್ಯಗಳ ಮಾಹಿತಿ, ಹಾಳೆ ಮುಟ್ಟಾಳೆ ತಯಾರಿ
ಕಸಿ ಕಟ್ಟುವಿಕೆ, ಚಂದ್ರಯಾನ ಸಹಿತ ವಿಜ್ಞಾನ , ತಂತ್ರಜ್ಞಾನ ಮಾಹಿತಿ ,ಅರೋಗ್ಯ ಮಾಹಿತಿ ಇತ್ಯಾದಿ ನೀಡಲಾಗುವುದು. ಸರ್ವಧರ್ಮಗಳ ಮಾಹಿತಿ, ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರದೀಪ್, ವಿಶ್ವನಾಥ, ನಾರಾಯಣ ನಾಯಕ್ ಉಪಸ್ಥಿತರಿದ್ದರು.