ನಗರಸಭಾ ಉಪಚುನಾವಣೆ-2023 – ವಾರ್ಡ್ 11ರಲ್ಲಿ ನೆಲ್ಲಿಕಟ್ಟೆ , ಸತೀಶ್ ನಾೖಕ್‌? – ದಾಮೋದರ ಭಂಡಾರ್ಕರ್, ರಾಜೇಶ್ ಬನ್ನೂರು ಹೆಸರೂ ಚಾಲ್ತಿಯಲ್ಲಿ – ಪುತ್ತಿಲ ಪರಿವಾರದಿಂದಲೂ ಸ್ಪರ್ಧೆ ಖಚಿತ

0

ಪುತ್ತೂರು: ಪುತ್ತೂರು ನಗರಸಭೆಯಲ್ಲಿ ತೆರವಾಗಿರುವ ಎರಡು ಸದಸ್ಯ ಸ್ಥಾನಗಳಿಗೆ ದ.27ರಂದು ಚುನಾವಣೆ ನಡೆಯಲಿದ್ದು ದ.8ರಂದು ಅಧಿಸೂಚನೆ ಪ್ರಕಟವಾಗಲಿದೆ. ಎರಡೂ ಸ್ಥಾನಗಳಿಗೂ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಲ್ಲದೆ ಈ ಬಾರಿ ಪುತ್ತಿಲ ಪರಿವಾರದಿಂದಲೂ ಅಭ್ಯರ್ಥಿಗಳು ಕಣಕ್ಕಿಳಿಯುವುದು ಸ್ಪಷ್ಟವಾಗಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ನಗರಸಭೆಯ ವಾರ್ಡ್ 1ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವರಾಮ ಸಪಲ್ಯ ಮತ್ತು ವಾರ್ಡ್ 11ರಲ್ಲಿ ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹಾ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾಗಿದೆ.

11ರಲ್ಲಿ ನೆಲ್ಲಿಕಟ್ಟೆ ವರ್ಸಸ್ ಸತೀಶ್ ನಾೖಕ್‌: ಕಾಂಗ್ರೆಸ್ ಸದಸ್ಯ ಶಕ್ತಿ ಸಿನ್ಹಾರವರ ನಿಧನದಿಂದ ತೆರವಾಗಿರುವ ನೆಲ್ಲಿಕಟ್ಟೆ ವಾರ್ಡ್ ನಂ.11ರಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ನಗರಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತು ಬಿಜೆಪಿಯಿಂದ ಮಾಜಿ ಪುರಸಭಾ ಸದಸ್ಯ ಸತೀಶ್ ನಾೖಕ್‌ ಅವರು ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ,ಸತೀಶ್ ನಾೖಕ್‌ ಇದನ್ನು ನಿರಾಕರಿಸಿದ್ದಾರೆ. ಬಿಜೆಪಿಯಿಂದ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಅವರ ಹೆಸರೂ ಕೇಳಿ ಬರುತ್ತಿದೆ. ವಾರ್ಡ್ ನಂ.1 ಕಲ್ಲೇಗದಿಂದಲೂ ರಾಜೇಶ್ ಬನ್ನೂರು ಅವರ ಹೆಸರು ಪ್ರಚಲಿತವಿದೆ. ಮತ್ತೊಂದೆಡೆ ವಾರ್ಡ್ 11ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ದಾಮೋದರ ಭಂಡಾರ್ಕರ್ ಕೂಡಾ ಓರ್ವ ಆಕಾಂಕ್ಷಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರ ಆಯ್ಕೆ ಬಹುತೇಕ ಖಚಿತಗೊಂಡಿದೆ ಎಂದು ತಿಳಿದು ಬಂದಿದೆ.

ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು ಈ ಹಿಂದೆ ಪುರಸಭೆಯ ಸದಸ್ಯರಾಗಿ, ನಗರಸಭೆಯ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು.ಸತೀಶ್ ನಾೖಕ್‌ ಅವರೂ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರಾಗಿದ್ದು ಪುರಸಭೆಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದವರು. ನೆಲ್ಲಿಕಟ್ಟೆ ವಾರ್ಡ್ ರಚನೆಗೆ ಮೊದಲು ನೆಲ್ಲಿಕಟ್ಟೆ, ಸಾಮೆತ್ತಡ್ಕ ಸೇರಿ ಡಿವಿಷನ್ ಆಗಿತ್ತು. ಆ ಸಂದರ್ಭದಲ್ಲಿ ಸಿ.ಪಿ.ಜಯರಾಮ, ಡೋಲಿ ರೇಗೋ, ಪಾಲಣ್ಣ,ಸೂತ್ರಬೆಟ್ಟು ಜಗನ್ನಾಥ ರೈ,ಎನ್. ಸುಧಾಕರ್ ಶೆಟ್ಟಿಯವರು ಪ್ರತಿನಿಧಿಸಿದ್ದರು. ವಾರ್ಡ್ ರಚನೆಯಾದ ಬಳಿಕ ಕಾಂಗ್ರೆಸ್‌ನ ಚಂದ್ರಾವತಿಯವರು ಪ್ರಥಮ ಸದಸ್ಯರಾಗಿ ಚುನಾಯಿತರಾಗಿದ್ದರು. ಆ ಬಳಿಕ ಎರಡು ಅವಧಿಗೆ ಶಕ್ತಿ ಸಿನ್ಹಾ ಅವರು ವಾರ್ಡ್‌ನ ಸದಸ್ಯರಾಗಿದ್ದರು. ಪಕ್ಕದ ವಾರ್ಡ್‌ನಿಂದ ಸತೀಶ್ ನಾೖಕ್‌ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಒಂದು ಬಾರಿ ಪುರಸಭಾ ಸದಸ್ಯರಾಗಿ ಚುನಾಯಿತರಾಗಿದ್ದರು. ಉಪಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಸತೀಶ್ ನಾೖಕ್‌ ಮತ್ತು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು ಬಾಲ್ಯದ ಸ್ನೇಹಿತರಾಗಿದ್ದು ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಒಟ್ಟಾಗಿ ಕೆಲಸ ಮಾಡಿದವರು. ಸತೀಶ್ ನಾೖಕ್‌ ಅವರು ಯುವಕಾಂಗ್ರೆಸ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದವರು. ಜಯಕರ್ನಾಟಕ ಸಂಸ್ಥಾಪಕರಾಗಿರುವ ಖ್ಯಾತ ಉದ್ಯಮಿಗಳೂ ಆಗಿದ್ದ ದಿ.ಎನ್.ಮುತ್ತಪ್ಪ ರೈ ಅವರ ಬಳಗದಲ್ಲಿಯೂ ಜೊತೆಯಾಗಿ ಗುರುತಿಸಿಕೊಂಡಿದ್ದ ಇವರು ಇದೀಗ ನಗರಸಭೆಯ ಉಪಚುನಾವಣೆಯಲ್ಲಿ ರಾಜಕೀಯ ಎದುರಾಳಿಗಳಾಗಿ ಸ್ಪರ್ಧೆಗಿಳಿಯಲಿದ್ದಾರೆಯೇ ಎನ್ನುವುದು ಕುತೂಹಲ ಸೃಷ್ಟಿಸಿದೆ. ವಾರ್ಡ್ 1ರ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಈ ಎರಡೂ ವಾರ್ಡ್‌ಗಳಲ್ಲಿಯೂ ಪುತ್ತಿಲ ಪರಿವಾರದ ಅಭ್ಯರ್ಥಿಗಳೂ ಕಣಕ್ಕಿಳಿಯುವುದು ಖಚಿತವಾಗಿದ್ದು ಅಭ್ಯರ್ಥಿಗಳ ಆಯ್ಕೆ ಇನ್ನಷ್ಟೆ ಅಂತಿಮಗೊಳ್ಳಬೇಕಿದೆ. ಒಟ್ಟಾರೆ ಎರಡೂ ವಾರ್ಡ್‌ಗಳು ರಾಜಕೀಯ ಪಕ್ಷಗಳಿಗೆ ಜಿದ್ದಾಜಿದ್ದಿನ ಕ್ಷೇತ್ರಗಳಾಗಿವೆ.
ಜೆಡಿಎಸ್ ನಡೆ?: ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಜೆಡಿಎಸ್‌ನವರ ನಡೆ ಏನು ಎನ್ನುವುದೂ ಚರ್ಚೆಯಾಗುತ್ತಿದೆ.

ನಾನು ನಿಲ್ಲುವುದಿಲ್ಲ

ನಗರಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಇವತ್ತಿನವರೆಗೆ ನನಗೆ ಗೊತ್ತಿಲ್ಲ. ಈ ಕುರಿತು ನನಗೆ ಯಾವುದೇ ಆಫರ್ ಬಂದಿಲ್ಲ. ನಾನು ನಿಲ್ಲುವುದೂ ಇಲ್ಲ.
-ಸತೀಶ್ ನಾೖಕ್‌,
ಮಾಜಿ ಪುರಸಭಾ ಸದಸ್ಯ

LEAVE A REPLY

Please enter your comment!
Please enter your name here