ಮಂಗಳೂರಿನಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಆಡಳಿತ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

0

ಸಹಕಾರಿ ಬಹಳ ಶ್ರೇಷ್ಠವಾದುದು – ಬದುಕಿನಲ್ಲಿ ಸಹಕಾರ ಅತೀ ಅಗತ್ಯ : ಒಡಿಯೂರು ಶ್ರೀ
ಸತ್ಯ ಧರ್ಮವಿದ್ದರೆ ಶ್ರೇಯಸ್ಸು ಸಾಧ್ಯ: ಸಾಧ್ವಿ ಶ್ರೀ ಮಾತಾನಂದಮಯೀ
ಸಹಕಾರಿ ಕ್ಷೇತ್ರ ವಿಕಸನ ಹೊಂದುತ್ತಿದೆ: ಡಾ| ಎಂ.ಎನ್.ಆರ್

ವಿಟ್ಲ: ಸಹಕಾರಿ ಎನ್ನುವುದು ಬಹಳ ಶ್ರೇಷ್ಠವಾದುದು. ಸಹಕಾರಿ ತತ್ವ ಧರ್ಮದ ಸಾರವಾಗಿದೆ. ಧರ್ಮವನ್ನು ಬಿಟ್ಟು ಸತ್ಯವಿಲ್ಲ. ಸಹಕಾರಿ ತತ್ವದ ಒಂದಷ್ಟು ಚಿಂತನೆಗಳು ಕಾರ್ಯರೂಪಕ್ಕೆ ಬರಬೇಕು. ಬದುಕಿನಲ್ಲಿ ಸಹಕಾರ ಅಗತ್ಯ. ಸಹಕಾರಿ ತತ್ವ ಜೀವನದ ತತ್ವ ಅದನ್ನು ಬೆಳೆಸಿಕೊಂಡು ಬರುವ ಪ್ರಯತ್ನ ನಮ್ಮದಾಗಬೇಕು. ನಮ್ಮನ್ನು ನಾವು ಬೆಳೆಸಿಕೊಳ್ಳುವಾಗ ಜಾಗೃತರಾಗಿರಬೇಕು‌. ಬದುಕು ಕಟ್ಟುವಲ್ಲಿ ನಾವೆಲ್ಲರೂ ಯಶಸ್ಸಾಗೋಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ದ ಆಡಳಿತ ಕಚೇರಿಯ ಸ್ವಂತ ಕಟ್ಟಡವನ್ನು ಮಂಗಳೂರಿನ ಪಂಪ್ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿಯಲ್ಲಿ ಉದ್ಘಾಟಿಸಿ ಆಶೀರ್ವಚನ ನೀಡಿದರು‌. ಸಹಕಾರಿ ರಂಗದಿಂದ ಸಮಾಜದ ಸಬಲೀಕರಣ ಸಾಧ್ಯ. ಸಮಾಜದ ಹಿತಕ್ಕಾಗಿ ನಾವು ಬದುಕಬೇಕು. ಸಹಕಾರಿ ತತ್ವ ಬದುಕಿನ ತತ್ವವಾಗಿದೆ. ಸಿಬ್ಬಂದಿ ವರ್ಗದವರ ಸಮರ್ಪಣಾ ಭಾವದ ಕರ್ತವ್ಯ ಸಂಸ್ಥೆಯ ಬೆಳವಣಿಗೆಗೆ ಕಾರಣವಾಗುತ್ತದೆ. ಸಂಸ್ಥೆಯಿಂದ ಉದ್ಯೋಗ ಸೃಷ್ಟಿಯಾಗುತ್ತಿರುವುದು ಸಂತಸದ ವಿಚಾರ. ಸಮಾಜದ ಹಿತವನ್ನು ಕಾಪಿಡುವಲ್ಲಿ ಎಂ.ಎನ್.ಆರ್ ರವರು ಪ್ರಯತ್ನ ಅಪಾರ. ಬದುಕಲ್ಲಿ ಒಂದಷ್ಟು ಬೆಳಕು ಕಾಣಬೇಕು ಎಂದವರು ಹೇಳಿದರು.

ಸಾಧ್ವಿ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ ‌ಜನಹಿತದ ಕಾರ್ಯಗಳು ಶ್ರೀಗಳ ಮಾರ್ಗದರ್ಶನದಿಂದ ನಡೆದಿದೆ. ಕಡಿಮೆ ಅವಧಿಯಲ್ಲಿ ಸಂಸ್ಥೆ ಶ್ರೇಯೋಭಿವೃದ್ಧಿಯನ್ನು ಕಂಡಿದೆ. ಕರ್ತವ್ಯವನ್ನು ಮಾಡಿದಾಗ ಫಲ ತನ್ನಿಂತಾನೆ ಬರುತ್ತದೆ. ಎಲ್ಲರ ಸಹಕಾರದಿಂದ ಶ್ರೇಯಸ್ಸು ಸಾಧ್ಯ. ಗ್ರಾಹಕರು ಸಂಸ್ಥೆಯ ನಾಡಿಗಳು. ಸತ್ಯ ಧರ್ಮ ಇದ್ದರೆ ಶ್ರೇಯಸ್ಸು ಸಾಧ್ಯ. ಸಂಸ್ಥೆ ಇನ್ಮಷ್ಟು ಎತ್ತರಕ್ಕೆ ಬೆಳೆಯಲಿ‌ ಎಂದರು.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ರವರು ‘ಸಹಕಾರಿ ಸಿರಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಸಂಸ್ಥೆಯ ಹುಟ್ಟಿನ ಮೊದಲೇ ಸ್ವಾಮೀಜಿಯೊಂದಿಗಿನ ಬಾಂಧವ್ಯವಿದೆ. ಸಂಸ್ಥೆ ಇಂದು ಎಲ್ಲರ ಜನಮನ ಸೇರಿದೆ. ಸಹಕಾರಿ ಬ್ಯಾಂಕ್ ಗಳು ಬೆಳೆಯಲು ವಾಣಿಜ್ಯ ಬ್ಯಾಂಕ್ ಕಾರಣವಾಗಿದೆ. ನಮ್ಮ ಕರಾವಳಿಯಲ್ಲಿ ಹುಟ್ಟಿದ ವಾಣಿಜ್ಯ ಬ್ಯಾಂಕ್ ಗಳು ಯಾವುದೂ ಇಂದಿಲ್ಲಿ ಉಳಿದಿಲ್ಲ, ಎಲ್ಲವೂ ಇತರ ಬ್ಯಾಂಕ್ ಗಳೊಂದಿಗೆ ವಿಲೀನವಾಗಿದೆ. ಸಹಕಾರಿ ಕ್ಷೇತ್ರ ವಿಕಸನ ಹೊಂದುತ್ತಿದೆ. ಸಹಕಾರಿ ಕ್ಷೇತ್ರ ಬೆಳೆದಿದೆ. ಸಹಕಾರಿಯನ್ನು ಬೆಳೆಸುವಲ್ಲಿ ಎಲ್ಲರ ಸಹಕಾರ ಅಗತ್ಯ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯೂ ಒಂದು ಮಾದರಿ ಸಹಕಾರಿಯಾಗಿದೆ. ಸ್ವಾಮೀಜಿಯವರು ಕೈ ಹಾಕಿದ ಪ್ರತಿಯೊಂದು ಕಾರ್ಯಗಳು ಯಶಸ್ವಿಯಾಗುತ್ತದೆ. ಪ್ರಾದೇಶಿಕ ಜನರ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳು ಪೂರಕವಾಗಿದೆ ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕುಡ್ಗಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ. ನಂಜನಗೌಡ, ಮಂಗಳೂರು ಮಹನಗರಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಕೆ.ಎಂ.ಎಫ್. ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಮಂಗಳೂರು ರೋಹನ್ ಕಾರ್ಪೊರೇಶ್ ನ ಆಡಳಿತ ನಿರ್ದೇಶಕ ರೋಹನ್ ಮಾಂತೆರೋ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಎಸ್.ಕೆ.ಮಂಜುನಾಥ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ನಿರ್ದೇಶಕಿ ಭಾರತಿ ಜಿ. ಭಟ್ ,ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ‌. ಪಾಟೀಲ್, ಲೋಟಸ್ ಪ್ರಾಪರ್ಟೀಸ್ ನ ಪಾಲುದಾರ ಜಿತೇಂದ್ರ ಕೊಟ್ಟಾರಿ, ಮಂಗಳೂರು‌ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಸಂದೀಪ್ ಗರೋಡಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ರವರಿಗೆ ‘ಸಹಕಾರಿ ಸಿರಿ’ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅನಿಲ್ ಲೋಬೊ, ದಿವಾಕರ ಶೆಟ್ಟಿ ಕಾಪು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ದ ಅಧ್ಯಕ್ಷರಾದ ಎ. ಸುರೇಶ್ ರೈ ರವರನ್ನು ಗೌರವಿಸಲಾಯಿತು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ದ ಅಧ್ಯಕ್ಷ ಎ. ಸುರೇಶ್ ರೈ ಸ್ವಾಗತಿಸಿದರು. ನವನೀತ ಶೆಟ್ಟಿ ಕದ್ರಿ ಸನ್ಮಾನಿತರ ಪರಿಚಯ ಮಾಡಿದರು. ಲೊಕೇಶ್ ರೈ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ. ದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ವಂದಿಸಿದರು.

LEAVE A REPLY

Please enter your comment!
Please enter your name here