ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ 12 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಬೆಂಬಲಿತರು 10 ಸ್ಥಾನಗಳಲ್ಲೂ ಸೋಲನುಭವಿಸಲು ಬಿಜೆಪಿ ಬೆಂಬಲಿತರ ಅಪಪ್ರಚಾರವೇ ಕಾರಣ ಎಂದು ಹಾಲಿ ಅಧ್ಯಕ್ಷರು, ಕಾಂಗ್ರೆಸ್ ಬೆಂಬಲಿತ ವಿಜೇತ ಸದಸ್ಯ ವಿ ಬಾಬು ಶೆಟ್ಟಿ ತಿಳಿಸಿದ್ದಾರೆ.
ಸಂಸ್ಥೆಯ ವಿರುದ್ಧ, ಅಧ್ಯಕ್ಷರ ಮತ್ತು ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸಿದ ಬಿಜೆಪಿ ಬೆಂಬಲಿತರು ಸಾಲ ಮನ್ನಾದ ವಿಚಾರದಲ್ಲಿ ಶುದ್ದ ಸುಳ್ಳುಗಳನ್ನು ಜನರೆಡೆಯಲ್ಲಿ ಬಿತ್ತಿ ಅದರಿಂದ ಲಾಭ ಮಾಡಿಕೊಂಡಿದ್ದಾರೆ.
ನಮ್ಮ ಸಂಘದ 401 ಮಂದಿ ಸದಸ್ಯರಿಗೆ ಸಾಲ ಮನ್ನಾ ಆಗಿದ್ದು 249 ಜನರಿಗೆ ಬಾಕಿ ಇದೆ. 249 ಮಂದಿಗೆ ಸಾಲ ಮನ್ನಾ ಯೋಜನೆಯ ಹಣ ಬಾರದಿರುವುದಕ್ಕೆ ನಮ್ಮ ಸಂಘ ಕಾರಣವಲ್ಲ ಎಂಬುವುದು ಎಲ್ಲರಿಗೂ ತಿಳಿದಿದೆ, ಸಾಲ ಮನ್ನಾ ಬಾಕಿ ವಿಚಾರದಲ್ಲಿ ನಾನು ಸದಸ್ಯರ ಪರವಾಗಿ ಹಲವು ಹೋರಾಟಗಳನ್ನು ನಡೆಸಿರುವ ನಾನು, ಈಗಾಗಲೇ ಹೈಕೋರ್ಟ್ ಮೊರೆ ಹೋಗಿದ್ದೇನೆ, ಆದರೂ ಬಿಜೆಪಿಯವರು ಈ ವಿಚಾರದಲ್ಲಿ ಅಪಪ್ರಚಾರ ನಡೆಸುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಅಭ್ಯರ್ಥಿ ಕುಶಾಲಪ್ಪ ಗೌಡರವರು ಐದು ಮತಗಳಿಂದ ಗೆದ್ದಿರುವ ಬಗ್ಗೆ ಘೋಷಣೆಯಾದ ಬಳಿಕ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಸ್ಥಳಕ್ಕೆ ಬಂದು ಮರು ಎಣಿಕೆಗೆ ಆಗ್ರಹಿಸಿ ಮರು ಎಣಿಕೆ ಮಾಡುವಂತೆ ಮಾಡಿದ್ದಾರೆ. ಮರು ಎಣಿಕೆಯಲ್ಲಿ ಕುಶಾಲಪ್ಪ ಗೌಡರು ನಾಲ್ಕು ಮತಗಳಿಂದ ಸೋತಿದ್ದಾರೆ. ಮರು ಎಣಿಕೆಯಲ್ಲಿ ನಮಗೆ ಅನುಮಾನ ಇದೆ. ಒಟ್ಟಾರೆಯಾಗಿ ಇದು ನಮ್ಮ ಸೋಲಲ್ಲ, ಅಪಪ್ರಚಾರಕ್ಕೆ ಸಂದ ಗೆಲುವು ಎಂದು ವಿ ಬಾಬು ಶೆಟ್ಟಿ ತಿಳಿಸಿದ್ದಾರೆ.