ವಿಟ್ಲ: ಡಾಮರು ಕಳ್ಳತನದ ಜಾಲವನ್ನು ಪತ್ತೆ ಹಚ್ಚಿದ ಪೋಲೀಸರ ತಂಡ ಲಕ್ಷಾಂತರ ರೂ ಮೌಲ್ಯದ ಸೊತ್ತುಗಳ ಸಹಿತ ಬಂಧಿಸಿರುವ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ನಡೆದಿತ್ತು.
ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಅಕ್ರಮವಾಗಿ ಡಾಮರು ಕಳ್ಳತನ ನಡೆಯುತ್ತಿದ್ದ ಬಗ್ಗೆ ಮಾಹಿತಿ ಅರಿತ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಮಂಜುನಾಥ್.ಟಿ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯಕುಮಾರ್ ಶೆಟ್ಟಿ, ಸುಧಾಕರ್ ಶೆಟ್ಟಿ, ಮಹಮ್ಮದ್ ಇಮ್ರಾನ್, ಅಶ್ರಫ್ ಎಮ್, ವೀರೇಂದ್ರ ಎಸ್. ಆರ್,ಮಾದಸ್ವಾಮಿ,ಪ್ರಭಾಕರನ್, ನವೀನ್ ಕುಮಾರ್ ಎಂ.ಜಿ, ಮಹಮ್ಮದ್ ನಿಸಾರ್, ಮಹಮ್ಮದ್ ಸಿಯಾಬುದ್ದೀನ್ ಬಂಧಿತ ಆರೋಪಿಗಳು.
ಬಂಧಿತರಿಂದ 64 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಡಾಮರು , 6 ಟ್ಯಾಂಕರ್ ಲಾರಿ (AP03X6149, KL43C3968, KA19AC4077, KA19AC8686, KA19AA7342, KA19AD6595) ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ತೂಕ ಮಾಪನ, ಡಾಮರು ಬಿಸಿಮಾಡಲು ಉಪಯೋಗಿಸಿದ ಗ್ಯಾಸ್ ಸಿಲಿಂಡರ್, ಡಾಂಬರ್ ತುಂಬಿಸುವ ಕಬ್ಬಿಣದ ಟ್ಯಾಂಕ್, 9 ಮೊಬೈಲ್,ಹೀಗೆ ಅನೇಕ ಸೊತ್ತುಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಕಡೇಶಿವಾಲಯದ ಅಮೈ ಎಂಬಲ್ಲಿ ಜಾಗವೊಂದನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿ ಅಕ್ರಮ ವ್ಯವಹಾರ ನಡೆಸಲಾಗುತ್ತಿತ್ತು.
ಮಂಗಳೂರಿನಿಂದ ಎಂಆರ್‌ಪಿಎಲ್ ಸಂಸ್ಥೆಯಿಂದ ಡಾಮಾರು ಲೋಡ್ ಮಾಡಿಕೊಂಡು ಬರುವ ಲಾರಿಗಳು ಅಮೈಗೆ ಬರುತ್ತದೆ. ಅಲ್ಲಿ ಡಾಮಾರು ಕಳ್ಳತನ ಮಾಡಿ ಅಕ್ರಮವಾಗಿ ಬೇರೆ ಲಾರಿಗಳಿಗೆ ವರ್ಗಾವಣೆ ಮಾಡಿ ಮಾರಾಟ ಮಾಡುವ ಬಗ್ಗೆ ಬಂದ ಮಾಹಿತಿ ಆಧಾರದಲ್ಲಿ ಪೋಲೀಸರು ದಾಳಿ ನಡೆಸಿದ್ದರು. ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಉಡುಪಿಯ ವಿಜಯಕುಮಾರ್ ಶೆಟ್ಟಿ ಎಂಬವರ ಸೂಚನೆಯಂತೆ, ಬಂಟ್ವಾಳ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ ಅಲಿಯಾಸ್ ಸುಧಾಕರ ಕೊಟ್ಟಾರಿ ಎಂಬವರೊಂದಿಗೆ ಸೇರಿ ಈ ಕೃತ್ಯ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಳವು ,ಮೋಸ ವಂಚನೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು
ತಿಳಿಸಿದ್ದಾರೆ