ಪುತ್ತೂರು : ಪುತ್ತಿಲ ಪರಿವಾರ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರ ಮಾರು ಗದ್ದೆಯಲ್ಲಿ ಡಿ.24 ಮತ್ತು 25 ರಂದು ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಸನಾತನ ಸಮಾಗಮ ಕಾರ್ಯಕ್ರಮ ನಡೆಯುವುದು ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮತ್ತು ಸ್ವಾಗತ ಸಮಿತಿಯ ಸಂಚಾಲಕ ಪ್ರಸನ್ನಕುಮಾರ್ ಮಾರ್ತ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಇದೇ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುವುದು. ಡಿ.24ರಂದು ಬೆಳಿಗ್ಗೆ 6.30ರಿಂದ ಭಜನಾ ಕಾರ್ಯಕ್ರಮ. ಸಂಜೆ 4ಗಂಟೆಗೆ ನಗರದ ಬೊಳುವಾರಿನಲ್ಲಿ ಶ್ರೀದೇವಿ,ಭೂದೇವಿ ಸಹಿತ ಶ್ರೀನಿವಾಸ ದೇವರನ್ನು ಭಕ್ತಿಪೂರ್ವಕ ಸ್ವಾಗತಿಸಿ, ಬಳಿಕ ಅಲ್ಲಿಂದ ಮಹಾಲಿಂಗೇಶ್ವರ ದೇವಳದ ಗದ್ದೆ ತನಕ ಪುಷ್ಪವೃಷ್ಠಿ, ವಿದ್ವಾಂಸರ ವೇದಪಠಣ,ಶಂಕನಾದ, ಚೆಂಡೆವಾದ್ಯಗಳ ಪೋಷದೊಂದಿಗೆ ಶ್ರೀ ದೇವರ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಸಂಜೆ 5.30ಕ್ಕೆ ದ.ಕ.ಮತ್ತು ಉಡುಪಿ ಜಿಲ್ಲೆಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಸನಾತನ ಸಮಾಗಮ ಕಾರ್ಯಕ್ರಮ ನೆಡೆಯಲಿದೆ. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ,ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ,ಆನೆಗುಂಡಿ ಮಹಾಸಂಸ್ಥಾನಂ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ, ಚಿತ್ರಾಪುರ ಮಠದ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಮಂಗಳೂರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಧರ್ಮಪಾಲನಾಥ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಅರೆಮಾದೇನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ, ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ, ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕನ್ಯಾನ ಕಣಿಯೂರು ಕ್ಷೇತ್ರದ ಮಹಾಬಲ ಸ್ವಾಮೀಜಿ, ಕನ್ಯಾಡಿ ಮಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,ವಿಟ್ಲ ಯೋಗೀಶ್ವರ ಮಠದ ರಾಜಗುರು ಯೋಗಿ ಶ್ರದ್ಧಾನಾಥ ಜೀ, ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಕೃಷ್ಣ ಗುರೂಜಿ ಭಾಗವಹಿಸುವರು. ಬಳಿಕ ರಾಜ್ಯದ ಪ್ರತಿಷ್ಠಿತ ತಂಡಗಳಿಂದ ಸಾಂಸ್ಕೃತಿ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯುವುದು ಎಂದು ಅವರು ತಿಳಿಸಿದರು.
ಡಿ.25ರಂದು ಬೆಳಿಗ್ಗೆ 6ಗಂಟೆಗೆ ಸುಪ್ರಭಾತ ಪೂಜೆ ಆರಂಭಗೊಳ್ಳುವುದು.ಅಪರಾಹ್ನ ಗಂಟೆ 2ರಿಂದ ಭಜನೋತ್ಸವ ನಡೆಯಲಿದೆ.ಸಂಜೆ 6ಗಂಟೆಗೆ ವೈಭವದ ಕಲ್ಯಾಣೋತ್ಸವ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸುಮಾರು 50 ಸಾವಿರ ಮಂದಿಗೆ ಲಡ್ಡು ಪ್ರಸಾದ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಹೊರೆಕಾಣಿಕೆ ಸಮರ್ಪಣೆ
ಡಿ.23ರಂದು ಗ್ರಾಮ ಮಟ್ಟಗಳಲ್ಲಿ ಹೊರೆಕಾಣಿಕೆ ಸಂಗ್ರಹಿಸಿ, ಸಂಜೆ 5 ಗಂಟೆಗೆ ನಗರದ ದರ್ಬೆ ಯಿಂದ ಮಹಾಲಿಂಗೇಶ್ವರ ದೇವಳ ಗದ್ದೆ ತನಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದ ಸ್ವಾಗತ ಸಮಿತಿಯ ಸಂಚಾಲಕ ಪ್ರಸನ್ನಕುಮಾರ್ ಮಾರ್ತ ಅವರು ಕಾರ್ಯಕ್ರಮಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ನೀಡಿ ಅನ್ನದಾನಕ್ಕೆ ಸಹಕರಿಸುವಂತೆ ವರ್ತಕರಲ್ಲಿ ಮನವಿ ಮಾಡಿಕೊಂಡರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್ ಬನ್ನೂರು, ಸ್ವಯಂ ಸೇವಕ ಸಮಿತಿಯ ಸಂಚಾಲಕ ಅನಿಲ್ ತೆಂಕಿಲ, ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಸಂಚಾಲಕ ನವೀನ್ ರೈ ಪಂಜಳ, ಕಾರ್ಯದರ್ಶಿ ಪ್ರಜ್ವಲ್ ಘಾಟೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.