ಖಾತೆಗಳಿಗೆ ಜಮೆಯಾಗುತ್ತಿದೆ ಹವಾಮಾನಾಧಾರಿತ ಬೆಳೆ ವಿಮೆ-ಸಂಕಷ್ಟದಲ್ಲಿದ್ದ ರೈತರ ಮೊಗದಲ್ಲಿ ಸಂತಸದ ನಗೆ

0

ಪುತ್ತೂರು:ರೈತರ ಪಾಲಿಗೆ ವರದಾನವಾಗಿರುವ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2022ನೇ ಸಾಲಿನಲ್ಲಿ ಮಂಜೂರಾಗಿರುವ ವಿಮಾ ಮೊತ್ತ ರೈತರ ಖಾತೆಗಳಿಗೆ ಜಮೆಯಾಗುತ್ತಿದೆ.ಇಲಾಖೆ ಮಾಹಿತಿ ಪ್ರಕಾರ ದ.19ರವರೆಗೆ ಪುತ್ತೂರು ತಾಲೂಕಿನಲ್ಲಿ ಅಡಿಕೆ ಬೆಳೆಗೆ ಸಂಬಂಧಿಸಿ 71 ಕೋಟಿ ರೂ ಹಾಗೂ ಕಾಳುಮೆಣಸು ಬೆಳೆಗೆ 9 ಕೋಟಿ ರೂ.ಹಣ ರೈತರ ಖಾತೆಗಳಿಗೆ ಜಮೆಯಾಗಿದೆ.ವಿಮಾ ಕಂತು ಪಾವತಿಸಿದ ಬಾಕಿ ರೈತರ ಖಾತೆಗಳಿಗೆ ಇನ್ನೊಂದು ವಾರದಲ್ಲಿ ವಿಮಾ ಮೊತ್ತ ಪಾವತಿಯಾಗಲಿದೆ.


ರೈತರು ತಾವು ಬೆಳೆದ ವಿವಿಧ ರೀತಿಯ ಬೆಳೆಗಳಿಗೆ ವಿಮೆ ಮಾಡುವ ಅವಕಾಶ ಯೋಜನೆಯಲ್ಲಿದ್ದು ರೈತರು ತಾವು ಬೆಳೆಯುವ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಪ್ರೀಮಿಯಂ ಪಾವತಿಸುವ ಮೂಲಕ, ಬೆಳೆ ನಷ್ಟಕ್ಕೆ ಇನ್ಶೂರೆನ್ಸ್ ಕಂಪೆನಿಯಿಂದ ವಿಮಾ ಮೊತ್ತ ಪಡೆಯಬಹುದು.ಪುತ್ತೂರು ತಾಲೂಕಿನಲ್ಲಿ 16,853 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಹಾಗೂ 5,578 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆ ಬೆಳೆಯಲಾಗುತ್ತಿದೆ.ಕಡಬ ತಾಲೂಕಿನಲ್ಲಿ 16019 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಹಾಗೂ 3993 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆ ಬೆಳೆಯಲಾಗುತ್ತದೆ.


ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಕೊಡುವ ನಿಟ್ಟಿನಲ್ಲಿ 2023-24ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದೆ.ಈ ಸಾಲಿನಲ್ಲಿ ಸದರಿ ಯೋಜನೆಯಡಿ ನೋಂದಾವಣೆಗೊಳ್ಳಲು ಬೆಳೆ ವಿಮೆ ಮಾಡಿಸಲಾಗುವ ಬೆಳೆಯು ರೈತರ ಸರ್ವೆ ನಂಬರ್‌ನಲ್ಲಿ ಬೆಳೆ ಸಮೀಕ್ಷೆಯಡಿ ನಮೂದಾಗಿರುವುದು ಕಡ್ಡಾಯಗೊಳಿಸಲಾಗಿದೆ.ಬೆಳೆ ಸಮೀಕ್ಷೆಯಡಿ ವಿಮೆ ಮಾಡಿಸಲಾಗುವ ಬೆಳೆಯು ನಮೂದಾಗದಿದ್ದ ಪಕ್ಷದಲ್ಲಿ, ಸೆ.15ರೊಳಗೆ ಬೆಳೆ ಸಮೀಕ್ಷೆ ಮಾಡಿ ಬೆಳೆ ನಮೂದಿಸಲಾಗುವುದೆಂದು ರೈತರಿಂದ ಮುಚ್ಚಳಿಕೆ ಪಡೆದು ಈ ಯೋಜನೆಯಡಿ ರೈತರನ್ನು ನೋಂದಾಯಿಸಲಾಗಿತ್ತು.
ರೈತರು ತಾವೇ ಖುದ್ದಾಗಿ ಅಥವಾ ಬೆಳೆ ಸಮೀಕ್ಷೆ ಕೈಗೊಳ್ಳಲು ತಮ್ಮ ಗ್ರಾಮಕ್ಕೆ ನಿಯೋಜಿತರಾಗಿರುವ ಖಾಸಗಿ ವ್ಯಕ್ತಿಗಳ ಮುಖಾಂತರ ಸೆ.15ರೊಳಗೆ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಕೈಗೊಂಡು ವಿಮೆ ಮಾಡಿಸಿರುವ ಬೆಳೆಯನ್ನು ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಳ್ಳಲು ಕೋರಲಾಗಿತ್ತು.
2022-23ನೇ ಸಾಲಿನಲ್ಲಿ ಅಡಿಕೆ ಬೆಳೆಗೆ ಪ್ರತೀ ಹೆಕ್ಟೇರ್‌ಗೆ ರೂ.6425 ವಿಮಾ ಕಂತು ಹಾಗೂ ಕಾಳುಮೆಣಸಿಗೆ ರೂ.2,350 ವಿಮಾ ಕಂತನ್ನು ರೈತರು ಪಾವತಿ ಮಾಡಿದ್ದರು.ಪುತ್ತೂರು ತಾಲೂಕಿನ 23 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 25554 ಸರ್ವೆ ನಂಬರ್‌ಗಳಲ್ಲಿ ಮತ್ತು ಕಡಬ ತಾಲೂಕಿನ 22 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 22706 ಸರ್ವೆ ನಂಬರ್‌ಗಳಲ್ಲಿನ ಕೃಷಿಗೆ ಸಂಬಂಧಿಸಿ ವಿಮಾ ಕಂತು ಪಾವತಿಯಾಗಿತ್ತು.ಅಡಿಕೆ ಬೆಳೆಗೆ ಗರಿಷ್ಠ 1,28,000 ಹಾಗೂ ಕಾಳುಮೆಣಸು ಬೆಳೆಗೆ ಗರಿಷ್ಠ ರೂ.47,000ದವರೆಗೆ ವಿಮಾ ಮೊತ್ತ ರೈತರಿಗೆ ಪಾವತಿಯಾಗುತ್ತಿದೆ.2022ರ ಜುಲೈ 1ರಿಂದ 2023ರ ಜೂನ್‌ವರೆಗೆ ಬಿದ್ದ ಮಳೆಯ ಆಧಾರದಲ್ಲಿ ಇದೀಗ ರೈತರ ಖಾತೆಗಳಿಗೆ ವಿಮಾ ಕಂತು ಜಮೆಯಾಗುತ್ತಿದೆ.


ಸತತ 4 ವರ್ಷಗಳಿಂದ ದ.ಕ. ಪ್ರಥಮ:
ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿಯಲ್ಲಿ ದ.ಕ.ಜಿಲ್ಲೆ ಸತತ ನಾಲ್ಕು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿದೆ.ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ಕಾಳುಮೆಣಸಿಗೆ ಬೆಳೆ ವಿಮೆ ಘೋಷಿಸಲಾಗಿತ್ತು.ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ ರೂ.6,475 ಹಾಗೂ ಕಾಳುಮೆಣಸಿಗೆ ರೂ.2,350 ಮೊತ್ತ ನಿಗದಿಪಡಿಸಲಾಗಿತ್ತು.ಸಾಮಾನ್ಯವಾಗಿ ಜುಲೈನಲ್ಲಿ ಘೋಷಣೆಯಾಗುತ್ತಿದ್ದ ಬೆಳೆ ವಿಮೆ ಈ ಬಾರಿ ಆಗಸ್ಟ್ನಲ್ಲಿ ಘೋಷಣೆಯಾಗಿತ್ತು.ಅಡಿಕೆಗೆ ಒಂದು ಹೆಕ್ಟೇರ್‌ಗೆ ಗರಿಷ್ಠ ರೂ.1.28 ಲಕ್ಷ ಹಾಗೂ ಕಾಳುಮೆಣಸಿಗೆ ಗರಿಷ್ಠ ರೂ.46 ಸಾವಿರ ಪಡೆಯಲು ಅವಕಾಶ ನೀಡಲಾಗಿದೆ.ಇದನ್ನು ಆಧರಿಸಿ, ವಿಮಾ ಕಂಪನಿ ಕಂತಿನ ಮೊತ್ತವನ್ನು ನಿಗದಿಪಡಿಸುತ್ತದೆ.ಇದರಲ್ಲಿ ಶೇ.5ರಷ್ಟು ಮೊತ್ತದ ವಿಮಾಕಂತನ್ನು ರೈತರು ಪಾವತಿಸುತ್ತಾರೆ.ಇದೇ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ.2016-17ರಿಂದ 2018-19ರವರೆಗೆ ರೈತರ ಸಂಖ್ಯೆಯನ್ನು ಆಧರಿಸಿ, ವಿಮೆಯನ್ನು ಲೆಕ್ಕ ಹಾಕಲಾಗುತ್ತಿತ್ತು.2019-20ರಿಂದ ಸರ್ವೆಸಂಖ್ಯೆ ಆಧರಿಸಿ ಪ್ರತಿ ಸರ್ವೆಸಂಖ್ಯೆಯನ್ನು ಒಂದು ಪ್ರಕರಣ ಎಂದು ಪರಿಗಣಿಸಲಾಗುತ್ತಿತ್ತು.2023-24ನೇ ಸಾಲಿನಲ್ಲಿ ಪುನಃ ಹಿಂದಿನಂತೆ ಒಬ್ಬ ರೈತ ಎಷ್ಟೇ ಸರ್ವೆ ಸಂಖ್ಯೆ ಹೊಂದಿದ್ದರೂ, ಅದನ್ನು ಒಬ್ಬ ರೈತನ ಲೆಕ್ಕದಲ್ಲಿ ಪರಿಗಣಿಸಲಾಗುತ್ತಿದೆ.ಈ ಬಾರಿ ಜಿಲ್ಲೆಯಲ್ಲಿ ಅಡಿಕೆಗೆ 72,915 ರೈತರು(ಒಟ್ಟು ರೂ.27.79 ಕೋಟಿ), ಕಾಳುಮೆಣಸಿಗೆ 21,055 ರೈತರು(ಒಟ್ಟು ರೂ.2.78 ಕೋಟಿ) ಮೊತ್ತದ ವಿಮೆ ಕಂತು ಪಾವತಿಸಿದ್ದಾರೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯಿಂದ ಮಾಹಿತಿ ಲಭಿಸಿದೆ.

ಪುತ್ತೂರು ತಾಲೂಕಿನಲ್ಲಿ 6509 ಹೆಕ್ಟೇರ್ ಪ್ರದೇಶದ 21813 ಸರ್ವೆನಂಬರ್‌ಗಳ ಅಡಿಕೆ ಬೆಳೆಗೆ 71,15,55095 ರೂ ಮತ್ತು 2292 ಹೆಕ್ಟೇರ್ ಪ್ರದೇಶದ 7783 ಸರ್ವೆ ನಂಬರ್‌ಗಳ ಕಾಳುಮೆಣಸು ಬೆಳೆಗೆ 9,58,84,657 ರೂ. ವಿಮಾ ಕಂತು ಪಾವತಿಯಾಗಿದೆ.345 ಸರ್ವೆ ನಂಬರ್‌ಗಳ ಅಡಿಕೆ ಬೆಳೆಯ 1,28,42,972 ರೂ. ಹಾಗೂ 143 ಸರ್ವೆ ನಂಬರ್‌ಗಳ ಕಾಳುಮೆಣಸು ಬೆಳೆಯ 16,89,639 ರೂ.ತಾಂತ್ರಿಕ ಕಾರಣಗಳಿಂದ ಪಾವತಿಯಾಗದೆ ಉಳಿದಿದೆ.ಕಡಬ ತಾಲೂಕಿನಲ್ಲಿ 6310 ಹೆಕ್ಟೇರ್ ಪ್ರದೇಶದ 22375 ಸರ್ವೆ ನಂಬರ್‌ಗಳ ಅಡಿಕೆ ಬೆಳೆಗೆ 57,65,32,794 ರೂ. ಮತ್ತು 1189 ಹೆಕ್ಟೇರ್ ಪ್ರದೇಶದ 4531 ಸರ್ವೆ ನಂಬರ್‌ಗಳ ಕಾಳುಮೆಣಸು ಬೆಳೆಗೆ 4,84,71,962 ರೂ. ವಿಮಾ ಕಂತು ಪಾವತಿಯಾಗಿದೆ.ಈ ಪೈಕಿ 477 ಸರ್ವೆ ನಂಬರ್‌ಗಳ 1,25,65,519 ರೂ. ಹಾಗೂ 48 ಸರ್ವೆ ನಂಬರ್‌ಗಳ 4,83.607 ರೂ. ತಾಂತ್ರಿಕ ಕಾರಣಗಳಿಂದ ಪಾವತಿಯಾಗದೆ ಉಳಿದಿದೆ.

ಹವಾಮಾನ ಆಧಾರಿತ ಬೆಳೆ ವಿಮೆಯು ಪುತ್ತೂರು ತಾಲೂಕಿನ ಕೃಷಿಕರಿಗೆ ಸಿಕ್ಕಿರಲಿಲ್ಲ.ಈ ಬಗ್ಗೆ ಈ ಭಾಗದ ಕೃಷಿಕರು ನನ್ನ ಗಮನಕ್ಕೆ ತಂದಿದ್ದರು.ಕಳೆದ ಅಧಿವೇಶನದಲ್ಲಿ ಈ ವಿಚಾರವನ್ನು ಸಚಿವರ ಗಮನಕ್ಕೆ ತಂದು ಕೂಡಲೇ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದೆ.ಒಂದು ವಾರದೊಳಗೆ ವಿಮಾ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದರು.ಅದರಂತೆ ಡಿ.19ರಂದು ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೃಷಿಕರ ಖಾತೆಗೆ ವಿಮಾಮೊತ್ತ ಪಾವತಿಯಾಗಿದೆ.ಕೃಷಿಕರಲ್ಲಿ ಸಂತಸದ ಅಲೆ ಇದೆ.ಕೃಷಿಕರು ಸಮೃದ್ದರಾದರೆ ಎಲ್ಲರಿಗೂ ಸಂತೋಷ.ಅಡಿಕೆ ಎಲೆ ಚುಕ್ಕಿ ರೋಗಕ್ಕೂ ಸರಕಾರ ಪರಿಹಾರ ಕೊಡಬೇಕೆಂದು ಮನವಿ ಮಾಡಿದ್ದೇನೆ.ಮುಂದಿನ ದಿನಗಳಲ್ಲಿ ರಾಜ್ಯ ಸರಕಾರ ಪರಿಹಾರ ನೀಡಬಹುದು ಅಥವಾ ಎಲೆ ಚುಕ್ಕಿ ರೋಗಕ್ಕೆ ಔಷಧಿಯನ್ನಾದರೂ ಕಂಡು ಹಿಡಿಯಬಹುದು ಎಂಬ ವಿಶ್ವಾಸ ನನಗಿದೆ-
ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಸಂಬಂಽಸಿ ಡಿ.19ರಂದು ಪುತ್ತೂರು ತಾಲೂಕಿನ ಕೃಷಿಕರ ಖಾತೆಗೆ ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆ ವಿಮೆ ಜಮೆ ಆಗಿದ್ದು ತಾಂತ್ರಿಕ ತೊಂದರೆ ನಿವಾರಣೆಯಾಗಿದೆ.ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಬೆಳೆ ವಿಮಾ ಸೌಲಭ್ಯವಿದ್ದು, ಕಳೆದ 3 ವರ್ಷದಿಂದ ಗರಿಷ್ಟ ವಿಮೆ ಸೌಲಭ್ಯ ಸಿಗುತ್ತಿದೆ.ಈ ಬಾರಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಬರುವುದು ತಾಂತ್ರಿಕ ತೊಂದರೆಯಿಂದ ತಡವಾಗಿತ್ತು.ಇದೀಗ ತಾಂತ್ರಿಕ ತೊಂದರೆ ನಿವಾರಣೆಯಾಗಿ ಕೃಷಿಕರ ಖಾತೆಗೆ ವಿಮಾಮೊತ್ತ ಜಮೆ ಆಗಿದೆ-
ಸಂಜೀವ ಮಠಂದೂರು ಮಾಜಿ ಶಾಸಕರು,ಪುತ್ತೂರು

LEAVE A REPLY

Please enter your comment!
Please enter your name here