ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯ ಶ್ರೀಮದ್ಭಾಗವತದಿಂದ ಸಾಧ್ಯ : ಒಡಿಯೂರು ಶ್ರೀ
ವಿಟ್ಲ: ರಾಗ ದ್ವೇಷವನ್ನು ದೂರ ಮಾಡಿ ಪ್ರೀತಿ ಭಾವವನ್ನು ತುಂಬಿಕೊಳ್ಳುವ ಕಾರ್ಯವಾಗಬೇಕು. ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿಪಡಿಸುವ ಕಾರ್ಯವನ್ನು ಶ್ರೀಮದ್ಭಾಗವತ ಮಾಡುತ್ತದೆ. ಗೊಂದಲಗಳಿಗೆ ಪರಿಹಾರ ನೀಡುವ ಬದುಕಿನ ಕತ್ತಲನ್ನು ದೂರ ಮಾಡುವ ಕಾರ್ಯ ಗುರು ತತ್ವದ ಮೂಲಕ ನಡಯಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಡಿ.20ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ದತ್ತ ಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹದ ಸಮಾರಂಭವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.ಹೃದಯವನ್ನು ಗೆಲ್ಲುವ ಜತೆಗೆ ಬದುಕನ್ನು ಸರಿದಾರಿಯಲ್ಲಿ ಶ್ರೀಮದ್ಭಾಗವತ ಸಾಗಿಸುತ್ತದೆ. ಭಾಗವತವು ಬದುಕಿನ ಕತ್ತಲನ್ನು ದೂರ ಮಾಡಲು ಸಾಧ್ಯವಾಗುತ್ತದೆ. ಮನಸ್ಸಿಗೆ ಸದ್ವಿಚಾರಗಳನ್ನು ನೀಡಿದಾಗ ಉತ್ತಮ ಹಾದಿಯಲ್ಲಿ ನಡೆಯಲು ಸಾಧ್ಯ ಎಂದರವರು ಹೇಳಿದರು.ಸಾಧ್ವೀ ಶ್ರೀ ಮಾತಾನಂದಮಯೀ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಹಿರಣ್ಯ ವೆಂಕಟೇಶ್ವರ ಭಟ್ ಪ್ರವಚನ ನೀಡಿದರು. ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಅಮೇರಿಕಾದ ಉದ್ಯಮಿ ಆನಂದ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಶವಂತ ವಿಟ್ಲ ಸ್ವಾಗತಿಸಿ, ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಸಂತೋಷ್ ಭಂಡಾರಿ ವಂದಿಸಿದರು.
ವೈದ್ಧಿಕ – ಸಾಂಸ್ಕೃತಿಕ ಕಾರ್ಯಕ್ರಮ:
ಡಿ. 20ರಂದು ಬೆಳಗ್ಗೆ ಘಂಟೆ 9.00ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭಗೊಂಡಿತು. ಘಂಟೆ 9.30ರಿಂದ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದತ್ತಮಾಲಾಧಾರಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಬಳಿಕ ಮಹಾಸಂತರ್ಪಣೆ ನಡೆಯಿತು.
ಅಪರಾಹ್ನ 2.00ಘಂಟೆಗೆ ‘ಆದಿನಾರಾಯಣ ದರ್ಶನ’ ಯಕ್ಷಗಾನ ತಾಳಮದ್ದಳೆ ನಡೆಯಿತು.ಸಂಜೆ ಶ್ರೀ ದತ್ತಾಂಜನೇಯ ದೇವರ ಪಲ್ಲಕ್ಕಿ ಉತ್ಸವ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ. ಸಾಯಂಕಾಲ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ರಾಜಾಂಗಣದ ಮುಂಭಾಗದಲ್ಲಿ ‘ಭಾರತ ಜನನಿ’ ಯಕ್ಷಗಾನ ಬಯಲಾಟ ನಡೆಯಿತು.