ನುಳಿಯಾಲು ನಾರಾಯಣ ರೈ ಮತ್ತು ನುಳಿಯಾಲು ಸೀತಾರಾಮ ರೈಯವರಿಗೆ ನುಡಿನಮನ

0

ಅಳಿಯ ಮತ್ತು ಮಾವ ಕೃಷಿಯನ್ನು ಋಷಿಯಾಗಿಸಿಕೊಂಡವರು – ಕುಂಬ್ರ ದುರ್ಗಾಪ್ರಸಾದ್ ರೈ


ಪುತ್ತೂರು: ಇತ್ತೀಚೆಗೆ ಅಗಲಿರುವ ಪ್ರತಿಷ್ಠಿತ ನುಳಿಯಾಲು ಮನೆತನದ ಹಿರಿಯರಾದ ನುಳಿಯಾಲು ನಾರಾಯಣ ರೈ ಕೆಳಗಿನಕುಮೇರು ಮತ್ತು ನುಳಿಯಾಲು ಸೀತಾರಾಮ ರೈ ತೋಟದಮೂಲೆಯವರಿಗೆ ನುಡಿನಮನ ಕಾರ್ಯಕ್ರಮ ದ. 22 ರಂದು ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆಯಿತು.


ಮೃತರೀರ್ವರ ಬಗ್ಗೆ ನುಡಿನಮನ ಮಾಡಿದ ಕುಂಬ್ರ ದುರ್ಗಾಪ್ರಸಾದ್ ರೈಯವರು ನಾರಾಯಣ ರೈ ಕೆಳಗಿನಕುಮೇರು ರವರು ಆದರ್ಶ ಬದುಕು ನಡೆಸಿ ತನ್ನ ಸಂಸಾರಕ್ಕೆ ಅದೇ ಮಾರ್ಗವನ್ನು ಮಾಡಿಕೊಟ್ಟವರು. ಸಾರ್ಥಕ ಬದುಕಿನ‌ ಕೊಂಡಿಗಳಾಗಿ ಅವರ ಮಕ್ಕಳು‌ ಮೊಮ್ಮಕ್ಕಳು ಇಂದು ಸಮಾಜದ ವಿವಿಧ ಉನ್ನತ ಸ್ತರಗಳಲ್ಲಿ ಕಾರ್ಯನಿರ್ವಹಿಸುತ್ತಾ ಸಮಾಜದಲ್ಲಿ ಗೌರವ ಸ್ಥಾನ ಪಡೆಯುತ್ತಿದ್ದಾರೆ. ಅವರು ಕೃಷಿಯಲ್ಲಿ ಋಷಿಯಾಗಿ ಬದುಕಿದವರು. ಕೃಷಿಯನ್ನು ಪ್ರೀತಿಸಿ ಬದುಕು ಸಾಗಿಸಿದವರು’ ಎಂದರು.


ನಾರಾಯಣ ರೈಗಳ ಪ್ರೀತಿಯ ಅಳಿಯ ನುಳಿಯಾಲು ಸೀತಾರಾಮ ರೈ ತೋಟದಮೂಲೆ. ಅಳಿಯ ಕಟ್ಟಿನ ಮಾವ ಮತ್ತು ಅಳಿಯರ ಆದರ್ಶ ಉದಾಹರಣೆಯಾಗಿ ನಾರಾಯಣ ರೈ ಮತ್ತು ಸೀತಾರಾಮ ರೈ ಕಾಣಿಸಿಕೊಳ್ಳುತ್ತಾರೆ. ಈರ್ವರ ಜೀವನದಲ್ಲಿ ಕೃಷಿ ಸಾಮ್ಯತೆಯಿತ್ತು. ಶೈಕ್ಷಣಿಕ ಮತ್ತು ಸಾಮಾಜಿಕ ಮತ್ತು ರಾಜಕೀಯವಾಗಿ ಈರ್ವರೂ ಕಾಣಿಸಿಕೊಂಡವರು‌.
ಬೆಟ್ಟಂಪಾಡಿ ಸೊಸೈಟಿಯ ನಿರ್ದೇಶಕರಾಗಿ, ಮಿತ್ತಡ್ಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ, ಸಿದ್ದಿವಿನಾಯಕ ಮಂದಿರದ ಸ್ಥಾಪಕಾಧ್ಯಕ್ಷರಾಗಿ, ವಾಜಪೇಯಿಯವರ ಕಾಲದಲ್ಲಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು ಸೀತಾರಾಮ ರೈಯವರು ಬೆಟ್ಟಂಪಾಡಿ ಯ ಮಿತ್ತಡ್ಕ, ಆನಡ್ಕ, ತೋಟದಮೂಲೆ ಡೆಮ್ಮಂಗರ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಮಾಡುವಲ್ಲಿ ಅವಿರತವಾಗಿ ಹೋರಾಟ ನಡೆಸಿದವರಾಗಿದ್ದಾರೆ. ಪುತ್ತೂರಿನ ಪ್ರತಿಷ್ಠಿತ ನುಳಿಯಾಲು ಕುಟುಂಬದ ಹಿರಿಯರಾಗಿ ಈರ್ವರೂ ಮಾರ್ಗದರ್ಶನ ಮಾಡಿದವರು’ ಎಂದು ದುರ್ಗಾಪ್ರಸಾದ್ ರೈ ಹೇಳಿದರು.
ಸಭೆಯಲ್ಲಿ ನುಳಿಯಾಲು ಕುಟುಂಬಿಕರು, ಬಂಧು ಮಿತ್ರರು ಪಾಲ್ಗೊಂಡು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಮೃತರ ಮನೆಯವರು ಈ ವೇಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here