ಅರುಣ್ ಪುತ್ತಿಲರನ್ನು ಒಪ್ಪಿಕೊಳ್ಳುವುದು ಭಾಜಪಕ್ಕಿರುವ ಅವಕಾಶ ಹಾಗೂ ಬುದ್ಧಿವಂತಿಕೆ!

0

ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಧಾರ್ಮಿಕವಾಗಿ ಜನರ ಭಾವನೆಗಳನ್ನು ಸಮ್ಮೋಹನಗೊಳಿಸಿದೆ. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಭಕ್ತಿಯಷ್ಟೇ ಅಲ್ಲದೆ ಅರುಣ್ ಕುಮಾರ್ ಪುತ್ತಿಲ ಅವರ ನಾಯಕತ್ವವೂ ಮತ್ತೊಮ್ಮೆ ಕಂಗೊಳಿಸಿದೆ. ವಿಧಾನಸಭಾ ಚುನಾವಣೆಯ ನಂತರದ ದಿನಗಳಲ್ಲೂ ಅವರ ಜನಪ್ರಿಯತೆ ಕುಂದಿಲ್ಲ ಎಂಬುದು ದೃಢಪಟ್ಟಿದೆ.

ಸೂಕ್ಷ್ಮವಾಗಿ ಗಮನಿಸಿದರೆ, ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಕೇವಲ ಧಾರ್ಮಿಕ ಸಮಾವೇಶವಾಗಿರದೆ ಪುತ್ತಿಲ ಪರಿವಾರದ ಶಕ್ತಿಪ್ರದರ್ಶನವೂ ಹೌದು! ಹಾಗಾಗಿ, ಮುಂದಿನ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಉಳಿದಿರುವಾಗ ಪುತ್ತಿಲ ಪರಿವಾರದ ಸಿದ್ಧತೆಯೂ ಭರ್ಜರಿಯಾಗೇ ಆರಂಭವಾದಂತಾಗಿದೆ. ಎಲ್ಲೂ ಇದುವರೆಗೂ ತಾನು ಲೋಕಸಭೆಗೆ ಪಕ್ಷೇತರನಾಗಿಯಾದರೂ ಸ್ಪರ್ಧಿಸುತ್ತೇನೆ ಎಂದು ಪುತ್ತಿಲ ಅವರು ಘೋಷಿಸಿಲ್ಲ, ಹಾಗೆಂದು ಸ್ಪರ್ಧಿಸುವುದಿಲ್ಲ ಎಂದೂ ಹೇಳಿಲ್ಲ! ಹಾಗಾಗಿ ಅರುಣ್ ಕುಮಾರ್ ಪುತ್ತಿಲ ಇದೀಗ ದಕ್ಷಿಣ ಕನ್ನಡದ ಕುತೂಹಲದ ಕೇಂದ್ರಬಿಂದುವಾಗಿಯೇ ಇದ್ದಾರೆ!

ಹಿಂದಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪುತ್ತಿಲರನ್ನು ಭಾಜಪದ ಹಿರಿಯರು, ಸ್ಥಳೀಯ ಸಂಘಟಕರು ನಿರ್ಲಕ್ಷಿಸಿದ್ದರ ಹಿಂದೆ ’ಭಾಜಪ ಪುತ್ತೂರಿನಲ್ಲಿ ಸೋಲುವುದುಂಟಾ, ಕರೆಂಟು ಕಂಬ ನಿಂತರೂ ಗೆಲುವು ನಮ್ಮದೇ’ ಎಂಬ ಅತಿಯಾದ ಆತ್ಮವಿಶ್ವಾಸವಿತ್ತು. ಆದರೆ ಯಾವಾಗ ಪುತ್ತಿಲ ಅಲ್ಪಮತದಿಂದ ಸೋತು ಭಾಜಪ ಮೂರನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತೋ, ಪಕ್ಷೇತರ ನಾಯಕನ ನೈಜ ಜನಪ್ರಿಯತೆ ಆಗಲೇ ಅನಾವರಣಗೊಂಡಿತ್ತು. ಹಾಗೆ ನೋಡಿದರೆ, ಆ ಚುನಾವಣೆಯಲ್ಲಿ ಪುತ್ತಿಲರು ಸೋತದ್ದೇ ಅವರೆಡೆಗಿನ ಜನಮನ ಭಾವನೆಗಳು ಹೆಚ್ಚು ಸಾಂದ್ರೀಕರಣಗೊಳ್ಳುವಲ್ಲಿ ಕಾರಣವಾಗಿದೆ. ಚುನಾವಣಾ ಸೋಲೆಂಬುದು ಪುತ್ತೂರಿನಲ್ಲಷ್ಟೇ ಇದ್ದ ಅವರ ಪ್ರಸಿದ್ಧಿಯನ್ನು ಜಿಲ್ಲೆಗೂ ಮೀರಿ ಹಬ್ಬಿಸಿಬಿಟ್ಟಿದೆ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅರುಣ್ ಪುತ್ತಿಲ ಅವರ ಸ್ಪರ್ಧೆ ಅವರ ವೈಯಕ್ತಿಕ ನಿರ್ಣಯಕ್ಕಿಂತಲೂ, ಬಹುತೇಕ ಅಭಿಮಾನಿಗಳ ಆಯ್ಕೆಯೇ ಆಗಿತ್ತು. ಹಾಗಾಗಿಯೇ, ಆ ಸಂದರ್ಭದಲ್ಲಿ ಭಾಜಪದ ವತಿಯಿಂದ ತೀವ್ರತರವಾಗಿ ಮಾಡಲಾಗುತ್ತಿದ್ದ ಟೀಕೆಗಳು ಅರುಣ್ ಪುತ್ತಿಲ ಅವರ ಮೇಲೆ ಪರಿಣಾಮ ಮಾಡಿದ್ದಕ್ಕಿಂತಲೂ ಹಿಂದೂಪರ ಕಾರ್ಯಕರ್ತರ ಮೇಲೆ ಮಾಡಿದ್ದೇ ಹೆಚ್ಚು! ಪುತ್ತಿಲರನ್ನು ಟೀಕಿಸುತ್ತಾ ಟೀಕಿಸುತ್ತಾ ಪುತ್ತೂರಿನಲ್ಲಿ ಭಾಜಪ ಒಂದೊಂದೇ ಚಪ್ಪಡಿ ಕಲ್ಲನ್ನು ತನ್ನ ಮೇಲೆಳೆದುಕೊಳ್ಳುತ್ತಾ ಬಂದಿತ್ತು. ಅಕಸ್ಮಾತ್ ಚುನಾವಣಾ ಸಂದರ್ಭದಲ್ಲಿ ’ಅರುಣ್ ಪುತ್ತಿಲ ನಮ್ಮವರೇ, ಏನೋ ತಪ್ಪು ಗ್ರಹಿಕೆಯಿಂದ ಚುನಾವಣೆ ಸ್ಪರ್ಧಿಸಿದ್ದಾರೆ, ಮುಂದಿನ ದಿನಗಳಲ್ಲಿ ನಮ್ಮ ಜತೆ ಸೇರಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದೇ ಭಾಜಪದವರು ಹೇಳುತ್ತಾ ಬರುತ್ತಿದ್ದರೆ ಗೆಲುವು ಸಾಧ್ಯವಾಗದಿದ್ದರೂ, ಹೀನಾಯ ಸೋಲಾಗುವುದನ್ನು ತಪ್ಪಿಸಿಕೊಳ್ಳಬಹುದಿತ್ತು!

ಈಗ ಮತ್ತೆ ಲೋಕಸಭಾ ಚುನಾವಣೆ ಎದುರಾಗುತ್ತಿದೆ. ಸದ್ಯದಲ್ಲೇ ಅರುಣ್ ಪುತ್ತಿಲ ಅವರ ಸ್ಪರ್ಧೆಯೂ ಬಹುತೇಕ ನಿರ್ಣಯವಾಗುವ ಸಂಭವವಿದೆ. ಈಗಾಗಲೇ ವಿಧಾನಸಭೆ ಸೋತ ನೋವು ಪುತ್ತಿಲರಿಗಿಂತಲೂ ಹೆಚ್ಚಾಗಿ ಹಿಂದೂ ಪರ ಕಾರ್ಯಕರ್ತರಲ್ಲಿದೆ. ಜತೆಗೆ, ಹಿಂದೂ ಸಮಾಜಕ್ಕಾಗಿ ಅವಿರತವಾಗಿ ದುಡಿಯುತ್ತಿರುವ ಪುತ್ತಿಲರಿಗೆ, ಸ್ಥಳೀಯರಿಂದಾಗಿಯೇ ಅನ್ಯಾಯವಾಗಿದೆ ಎಂಬ ಭಾವನೆ ಅನೇಕ ಜನಸಾಮಾನ್ಯರಲ್ಲೂ ಇದೆ. ಆದ್ದರಿಂದ ಹೇಗಾದರೂ ಮಾಡಿ ಪುತ್ತಿಲರನ್ನು ಗೆಲ್ಲಿಸದೆ ವಿರಮಿಸಲಾರೆವು ಎಂಬ ಸಂಕಲ್ಪ ಹಿಂದೂ ಕಾರ್ಯಕರ್ತರ ಅಂತರಂಗದಲ್ಲಿ ಮನೆ ಮಾಡಿದಂತಿದೆ. ಹಾಗಾಗಿಯೇ ವಿಟ್ಲದಲ್ಲಿ ನಡೆದ ಶನಿಪೂಜೆ, ಪುತ್ತೂರಿನ ಶ್ರೀನಿವಾಸ ಕಲ್ಯಾಣದಂತಹ ವೈವಿಧ್ಯಮಯವಾದ ಸಂಘಟನಾಚಾತುರ್ಯ ಅನಾವರಣಗಳಾಗುತ್ತಿವೆ. ಈಗಲೂ ಭಾಜಪದ ಹಿರಿಯರು, ಸಂಘಪರಿವಾರದ ಧುರೀಣರು ಎಚ್ಚೆತ್ತುಕೊಳ್ಳದೆ, ’ನಿರ್ಲಕ್ಷ್ಯ’ ಹಾಗೂ ’ಟೀಕೆ’ ಎರಡನ್ನೇ ಅಸ್ತ್ರ ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ ಮತ್ತೊಮ್ಮೆ ಎಡವಿಬೀಳುವ ಎಲ್ಲಾ ಸಾಧ್ಯತೆಗಳಿವೆ.

ಸದ್ಯಕ್ಕಂತೂ ಅರುಣ್ ಕುಮಾರ್ ಪುತ್ತಿಲ ದಕ್ಷಿಣ ಕನ್ನಡ ಲೋಕಸಭಾ ಸ್ಥಾನಕ್ಕೆ ಭಾಜಪದ ಮುಂದಿರುವ ಅರ್ಹ ಆಯ್ಕೆ. ಈಗಿನ ರಾಜಕೀಯ ವಾತಾವರಣವನ್ನು ಅವಲೋಕಿಸುವಾಗ ಪುತ್ತಿಲರಿಗೆ ಅವಕಾಶ ಕೊಟ್ಟರೆ ಭಾಜಪಕ್ಕೆ ಗೆಲುವು ದಕ್ಕುವ ಸಾಧ್ಯತೆ ಹೆಚ್ಚು ಎಂಬಂತಿದೆ. ಹೀಗಿರುವಾಗ, ಭಾಜಪದಿಂದ ಬೇರೆ ಅಭ್ಯರ್ಥಿಯನ್ನು ನಿಲ್ಲಿಸಿ, ಮೋದಿ ಫ್ಯಾಕ್ಟರ್ ಕೆಲಸ ಮಾಡುತ್ತದೆ ಅಂತ ಗಟ್ಟಿಕೂರುವುದು ಅತಿಯಾದ ಆತ್ಮವಿಶ್ವಾಸ ಎನಿಸೀತು. ಯಾಕೆಂದರೆ ಅರುಣ್ ಕುಮಾರ್ ಪುತ್ತಿಲರನ್ನು ’ಮೋದಿ ವಿರೋಧಿ’ ಎಂದು ಬಿಂಬಿಸಲು ಸಾಧ್ಯವೇ ಇಲ್ಲದಷ್ಟು ಅವರು ಮೋದೀಜಿ ಅಭಿಮಾನಿಯಾಗಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವತಃ ಭಾಜಪದವರು ಮೋದಿಜಿಯವರನ್ನು ಗೌರವಿಸುವುದಕ್ಕಿಂತ ಹೆಚ್ಚು ಪುತ್ತಿಲರು ಆರಾಧಿಸುತ್ತಿದ್ದಾರೆ. ಹಾಗಾಗಿ ಪಕ್ಷೇತರನಾಗಿ ಪುತ್ತಿಲ ಸ್ಪರ್ಧಿಸಿದರೆ, ’ಅವರಿಗೆ ಮತ ಹಾಕಬೇಡಿ, ಅದು ಮೋದೀಜಿಗೆ ಮಾಡುವ ಅನ್ಯಾಯವಾಗುತ್ತದೆ’ ಎಂದು ಪ್ರಚಾರ ಮಾಡುವುದಕ್ಕೂ ಸಾಧ್ಯವಿಲ್ಲ! ಪುತ್ತಿಲರು ಭಾಜಪದಲ್ಲಾದರೂ ಗೆಲ್ಲಲಿ, ಪಕ್ಷೇತರನಾಗಿಯಾದರೂ ಗೆಲ್ಲಲಿ ಅವರ ಬೆಂಬಲ ಹೇಗೂ ಮೋದೀಜಿಯವರಿಗೆ ಇದ್ದೇ ಇರುತ್ತದೆ ಎಂಬುದು ಹಿಂದೂ ಸಮಾಜ ಹಾಗೂ ಭಾಜಪದ ಮತದಾರರಿಗೂ ಅರಿವಿದೆ ಮತ್ತು ಮಧ್ಯರಾತ್ರಿಯೂ ಜನಸೇವೆಗಾಗಿ ಎದ್ದುಬರುವ ಪುತ್ತಿಲರ ಸಹಜಸ್ವಭಾವ ಈ ಭಾಗದ ಮತದಾರ ಬಂಧುಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಅದರಲ್ಲೂ ಹಿಂದೂ ಕಾರ್ಯಕರ್ತರಿಗೆ ಅನ್ಯಾಯಗಳಾದಾಗ ಹಗಲು – ರಾತ್ರಿಗಳನ್ನೂ ಲೆಕ್ಕಿಸದೆ ಸ್ಪಂದಿಸುವ ಮನೋಭಾವ ಪುತ್ತಿಲರನ್ನು ಹೀರೋ ಆಗಿಸುತ್ತಿದೆ.

ಇನ್ನು, ’ಪುತ್ತಿಲರಿಗೆ ಮತ ಹಾಕಿದರೆ ಅವರೂ ಗೆಲ್ಲುವುದಿಲ್ಲ, ಭಾಜಪವೂ ಗೆಲ್ಲುವುದಿಲ್ಲ, ಕಾಂಗ್ರೆಸ್ ಗೆಲ್ಲುತ್ತದೆ. ಹಾಗಾಗಿ ಭಾಜಪಕ್ಕೇ ಮತ ನೀಡಿ’ ಎನ್ನುವ ಮಾತುಗಳೂ ಈ ಬಾರಿ ಹೆಚ್ಚು ಉಪಯೋಗಕಾರಿ ಎನಿಸುವುದು ಅನುಮಾನ. ಯಾಕೆಂದರೆ ವಿಧಾನಸಭಾ ಚುನಾವಣೆಯಲ್ಲಿ ಇದೇ ಮಾತುಗಳನ್ನಾಡಿ ಒಂದಷ್ಟು ಮತ ಉಳಿಸುವಲ್ಲಿ ಭಾಜಪ ಯಶಸ್ವಿಯಾಗಿತ್ತು. ಭಾಜಪ ತಂಡ ಹೇಳಿದ ರೀತಿಯಲ್ಲಿ ಪುತ್ತಿಲರು ಗೆಲ್ಲಲಿಲ್ಲ, ಕಾಂಗ್ರೆಸ್ ಲಾಭ ಪಡೆಯಿತು ಅನ್ನುವುದು ನಿಜ, ಆದರೆ ಈ ಫಲಿತಾಂಶದಿಂದ ಬೇಸರವಾದದ್ದು ಭಾಜಪಕ್ಕೆ ಮತ ಹಾಕಿದವರಿಗೇ ವಿನಃ ಪುತ್ತಿಲರಿಗೆ ಜೈ ಎಂದವರಿಗಲ್ಲ! ಹಾಗಾಗಿ ಈ ಬಾರಿ ಎಲ್ಲರೂ ಗಟ್ಟಿ ಮನಸು ಮಾಡಿ ನಮ್ಮ ಅಭ್ಯರ್ಥಿ ಅರುಣ್ ಪುತ್ತಿಲ’ ಎಂದು ಕುಳಿತರೆ ಭಾಜಪಕ್ಕೆ ತೀವ್ರ ಇರಿಸುಮುರುಸಾದೀತು. ಜತೆಗೆ ’ಪುತ್ತಿಲರಿಗೆ ಮತ ಹಾಕಿದರೆ ಕಾಂಗ್ರೆಸ್ ಗೆಲ್ಲುತ್ತದೆ’ ಎಂಬ ಮಾತುಗಳನ್ನಾಡಿದರೆ ಪುತ್ತಿಲರ ಮುಂದೆ ಭಾಜಪಕ್ಕೆ ಗೆಲುವು ಸಾಧ್ಯವಿಲ್ಲ ಎಂಬುದನ್ನು ಭಾಜಪದವರೇ ಒಪ್ಪಿಕೊಂಡಂತಾಗುತ್ತದೆ! ಆಗ ನೈತಿಕವಾಗಿ ಚುನಾವಣೆಯ ಮೊದಲೇ ಸೋಲೊಪ್ಪಿದಂತಾಗುತ್ತದೆ!

ಈ ಎಲ್ಲದರ ಮಧ್ಯೆ ’ನಮ್ಮನ್ನು ಕೇವಲ ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ನಮ್ಮ ಮಾತಿಗೆ ಗೌರವವಿಲ್ಲ’ ಎಂಬ ಭಾವನೆ ಹಿಂದೂಪರ ಕಾರ್ಯಕರ್ತರಲ್ಲಿ ವಿಧಾನಸಭಾ ಚುನಾವಣೆಯಾದಿಯಾಗಿ ಮನೆಮಾಡಿದೆ. ಎದುರಿನಿಂದ ಭಾಜಪಕ್ಕೆ ಬೆಂಬಲ ಸೂಚಿಸುವವರೂ ಮತ ನೀಡುವಾಗ ಪುತ್ತಿಲ ಪರಿವಾರದವರೆನಿಸಿಬಿಡುತ್ತಾರೆ! ಹಾಗಾಗಿ ಸದ್ಯ ಎದುರಾಗಲಿರುವ ಲೋಕಸಭಾ ಚುನಾವಣೆ, ಭಾಜಪಕ್ಕೆ ತನ್ನ ಕಾರ್ಯಕರ್ತರ ಪ್ರೀತಿಯನ್ನು ಮರಳಿ ಪಡೆಯುವುದಕ್ಕೂ ದೊರಕುವ ಸದವಕಾಶವೆನಿಸಲಿದೆ. ಅರುಣ್ ಪುತ್ತಿಲ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದರೆ ’ನಮ್ಮದು ಕಾರ್ಯಕರ್ತರ ಪಕ್ಷ’ ಎಂಬ ತನ್ನ ಪಾರಂಪರಿಕ ಹೇಳಿಕೆಯನ್ನು ಕಾರ್ಯರೂಪದಲ್ಲಿ ಸಮರ್ಥಿಸಿದಂತೆಯೂ ಆಗುತ್ತದೆ. ಕಾರ್ಯಕರ್ತರೆಲ್ಲ ಅತ್ಯುತ್ಸಾಹದಿಂದ ಕಾರ್ಯನಿರ್ವಹಿಸುವ ಸಾಧ್ಯತೆ ಇರುವುದರಿಂದ ಸಲೀಸಾಗಿ ಸಂಘಟನೆಯೂ ಆದಂತಾಗುತ್ತದೆ. ಸುಲಭಕ್ಕೆ ಇಂತಹ ಅವಕಾಶ ಮತ್ತೆ ಮತ್ತೆ ದೊರಕುವುದು ಕಷ್ಟ. ಹಾಗೆಂದು ಪುನಃ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡು ಮುಂದುವರೆದರೆ ವಿಧಾನಸಭಾ ಚುನಾವಣೆಗಿಂತಲೂ ಹೆಚ್ಚಿನ ವಿರೋಧವನ್ನು ಹಿಂದೂಪರ ಕಾರ್ಯಕರ್ತರಿಂದ ಎದುರಿಸಬೇಕಾಗಿ ಬರುವಂತಹ ಸಂದರ್ಭ ಸೃಷ್ಟಿಯಾದರೂ ಅಚ್ಚರಿಯಿಲ್ಲ. ’ನಮ್ಮ ಭಾವನೆಗೆ ಬೆಲೆಕೊಡದಲ್ಲಿ ನಾವೇಕೆ ಬೆವರು ಸುರಿಸಬೇಕು’ ಎಂದು ಭಾಜಪ ಕಾರ್ಯಕರ್ತರೆಲ್ಲ ಸೇರಿ ಪುತ್ತಿಲರನ್ನು ಎತ್ತಿನಿಲ್ಲಿಸುವ ಸಾಧ್ಯತೆ ಬಹಳಷ್ಟಿದೆ. ಅಷ್ಟಕ್ಕೂ, ಭಾಜಪದ ಇನ್ಯಾರೋ ಅಭ್ಯರ್ಥಿಯನ್ನು ಗೆಲ್ಲಿಸುವುದು ಅಥವ ಅರುಣ್ ಪುತ್ತಿಲರನ್ನು ಗೆಲ್ಲಿಸುವುದು ಇವೆರಡೂ ಕೂಡ ಅಂತಿಮವಾಗಿ ಮೋದಿಜಿಯವರ ಪರವಾದ ನಡೆಯೇ ಆಗುತ್ತದೆಂಬ ಸ್ಪಷ್ಟ ಕಲ್ಪನೆ ಹಿಂದೂಪರ ಕಾರ್ಯಕರ್ತರಲ್ಲಿದೆ.

ಹಾಗೆಂದು ಭಾಜಪಕ್ಕೆ ಅರುಣ್ ಪುತ್ತಿಲರನ್ನು ಹೊರತುಪಡಿಸಿದರೆ ಬೇರೆ ಸಾಧ್ಯತೆಯೇ ಇಲ್ಲ ಎಂಬುದು ವಾದವಲ್ಲ. ಪುತ್ತಿಲರ ಹೊರತಾಗಿಯೂ ಭಾಜಪ ದಕ್ಷಿಣ ಕನ್ನಡದಲ್ಲಿ ಜಯಗಳಿಸಲೂಬಹುದು. ಆದರೆ ಪುತ್ತಿಲರು ಅಭ್ಯರ್ಥಿಯಾಗಿದ್ದರೆ ದೊರಕಬಹುದಾದಷ್ಟು ಸುಲಭಕ್ಕೆ ಜನಬೆಂಬಲ ಸಿಗುತ್ತದೆಯೇ?, ಕಾರ್ಯಕರ್ತರೆಲ್ಲ ಮುನಿಸಿಕೊಂಡರೆ ಸಂಘಟನೆ ಸುಲಲಿತವಾಗುತ್ತದೆಯೇ? ಜತೆಗೆ, ದೊಡ್ಡ ಸಂಖ್ಯೆಯ ಹಿಂದೂಪರ ಕಾರ್ಯಕರ್ತರು ಪುತ್ತಿಲರೇ ಬೇಕೆನ್ನುತ್ತಿರುವಾಗ ಅನ್ಯ ವ್ಯಕ್ತಿಯನ್ನು ನಿಲ್ಲಿಸಿ ಗೆಲುವು ಕಂಡರೂ ಅದು ಕಂದಕವನ್ನೇ ಸೃಷ್ಟಿಸುತ್ತದೆಯಲ್ಲದೆ ಪರಿಹಾರ ಒದಗಿಸುವುದಕ್ಕೆ ಸಾಧ್ಯವಿದೆಯೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕಷ್ಟ. ಹೌದು, ಅರುಣ್ ಪುತ್ತಿಲ ಅವರು ಪಕ್ಷೇತರನಾಗಿ ಸ್ಪರ್ಧಿಸಿದರೆ, ಪುತ್ತೂರಿನಲ್ಲಿ ಜನಭಾವನೆ ಮಿಳಿತವಾದಂತೆ ದಕ್ಷಿಣ ಕನ್ನಡದ ಬೇರೆ ಬೇರೆ ಭಾಗಗಳಲ್ಲಿ ಸಾಧ್ಯವಾದೀತೇ ಎಂಬ ಸಂದೇಹ ಖಂಡಿತವಾಗಿಯೂ ಇದೆ. ಆದರೆ ಆ ಬಗೆಗೆ ಪ್ರಯತ್ನಗಳಾಗಿರುವುದು, ಜಿಲ್ಲೆಯಾದ್ಯಂತ ಅರುಣ್ ಪುತ್ತಿಲ ಹೆಸರು ಮಾಡುತ್ತಿರುವುದಂತೂ ಹೌದು. ಹಾಗಾಗಿ ಪುತ್ತಿಲರ ಬಗೆಗಿನ ಪುತ್ತೂರಿನ ಅಲೆ ಸುತ್ತಲಿನ ಊರುಗಳಲ್ಲಿ ಅಂತರ್ಗಾಮಿಗಾಗಿ ಚಲಿಸಿ ಕೆಲಸ ಮಾಡುವ ಸಾಧ್ಯತೆಯಂತೂ ಮುಕ್ತವಾಗಿದೆ. ಹೀಗಿರುವಾಗ ಪುತ್ತಿಲರನ್ನು ನಿರ್ಲಕ್ಷಿಸಿ ಮುಂದುವರೆಯುವುದು ಭಾಜಪ ತೆಗೆದುಕೊಳ್ಳಬಹುದಾದ ಈ ಹೊತ್ತಿನ ಅಪಾಯಕಾರಿ ನಿರ್ಣಯ ಎನಿಸೀತು.

ಇವೆಲ್ಲದರ ಮಧ್ಯೆ ಒಂದಂತೂ ಸ್ಪಷ್ಟ. ವಿಧಾನಸಭೆಯಂತೆ ಲೋಕಸಭೆಗೂ ಪಕ್ಷೇತರನಾಗಿ ಸ್ಪರ್ಧಿಸಿ, ಅಕಸ್ಮಾತ್ ಸೋತರೆ ಪುತ್ತಿಲರ ವ್ಯಕ್ತಿತ್ವಕ್ಕೇನೂ ಧಕ್ಕೆಯಾಗುವುದಿಲ್ಲ. ಅವರು ಕಳೆದುಕೊಳ್ಳುವಂಥದ್ದೇನೂ ಇಲ್ಲ. ಆದರೆ ಭಾಜಪ ಸೋತರೆ ಎದುರಾಗುವ ನಾಚಿಕೆಗೇಡು ಅಷ್ಟಿಷ್ಟಲ್ಲ. ಹಿಂಬಾಲಕರಿಂದ, ಹೊಗಳುಭಟರಿಂದ ಮೆರೆಯುವ ಎಷ್ಟೋ ಮಂದಿ ನಾಯಕರು ಚುನಾವಣೆಯಲ್ಲಿ ಸೋತಾಗ ಏಕಾಂಗಿಯಾಗಿ ತಲೆತಗ್ಗಿಸಿ ಹೋಗುವುದನ್ನು ಈ ಸಮಾಜ ಕಂಡಿದೆ. ಆದರೆ ಸೋತ ನಂತರವೂ ನೂರಾರು ಜನರೊಂದಿಗೆ ಹೆಜ್ಜೆಹಾಕುತ್ತಿರುವ, ಸಾವಿರಾರು ಜನರನ್ನು ಸಂಘಟಿಸುತ್ತಿರುವ ನಾಯಕ, ಈ ಭಾಗದಲ್ಲಿ ಸದ್ಯಕ್ಕೆ ಅರುಣ್ ಕುಮಾರ್ ಪುತ್ತಿಲ ಮಾತ್ರ! ಹಾಗಾಗಿ ಮತ್ತೆ ರಾಡಿ ಎಬ್ಬಿಸುವ ಬದಲು, ಸಂಘ ಪರಿವಾರದ ಹಿರಿಯರು ಹಾಗೂ ಭಾಜಪದ ನಿರ್ಣಾಯಕ ವ್ಯಕ್ತಿಗಳು ’ಪುತ್ತಿಲರೆದುರು ನಾವು ತಲೆ ಬಾಗುವುದೇ?’ ಎಂಬ ಬಿಗುಮಾನ, ದೊಡ್ಡಸ್ತಿಕೆ ಬಿಟ್ಟು ’ಪುತ್ತಿಲ ನಮ್ಮವರೇ’ ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೆ ಹಿರಿಯರು ನಿಜಾರ್ಥದಲ್ಲಿ ದೊಡ್ಡವರೆನಿಸುತ್ತಾರೆ. ಪಕ್ಷ ಹಿಂದೆಂದಿಗಿಂತಲೂ ಈ ಭಾಗದಲ್ಲಿ ಪ್ರಬಲವಾಗುವ ಸಂಭವವಿದೆ.
ಕಮಲದ ಹೂವು ಅರಳುವುದು ಕೆಸರಿನಲ್ಲಿಯೇ, ಹಾಗೆಂದು ಕೆಸರೆರಚಿದಲ್ಲೆಲ್ಲಾ ಕಮಲ ಅರಳುವುದಿಲ್ಲ!

                        ರಾಕೇಶ ಕುಮಾರ್ ಕಮ್ಮಜೆ

LEAVE A REPLY

Please enter your comment!
Please enter your name here