ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ – ಅಧ್ಯಕ್ಷರಾಗಿ ಶಶಿಧರ ರಾವ್ ಬೊಳಿಕ್ಕಲ, ಉಪಾಧ್ಯಕ್ಷರಾಗಿ ಕೃಷ್ಣಕುಮಾರ್ ರೈ ಅವಿರೋಧ ಆಯ್ಕೆ

0

ಪುತ್ತೂರು: ಪ್ರತಿಷ್ಠಿತ ಸಹಕಾರ ಸಂಸ್ಥೆಯಾಗಿರುವ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಶಶಿಧರ ರಾವ್ ಬೊಳಿಕ್ಕಲರವರು ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಆಯ್ಕೆಯಾಗಿದ್ದಾರೆ. ದ.28ರಂದು ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಈ ಅವಿರೋಧ ಆಯ್ಕೆ ನಡೆಯಿತು. ಚುನಾವಣಾ ರಿಟರ್ನಿಂಗ್ ಅಧಿಕಾರಿ ಶೋಭಾ ಎನ್.ಎಸ್‌ರವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.


ಶಶಿಧರ ರಾವ್ ಬೊಳಿಕ್ಕಲ
ಕೆಯ್ಯೂರು ಗ್ರಾಮದ ಬೊಳಿಕ್ಕಳ ದಿ.ಆನಂದ ರಾವ್ ಮತ್ತು ದಿ.ಲೀಲಾವತಿಯವರ ಪುತ್ರರಾಗಿರುವ ಶಶಿಧರ ರಾವ್ ಬೊಳಿಕ್ಕಲರವರು ವಕೀಲರಾಗಿ, ಪ್ರಗತಿಪರ ಕೃಷಿಕರಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳು ಸೇರಿದಂತೆ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸಿದ ಓರ್ವ ಹಿರಿಯ ಸಹಕಾರಿಯಾಗಿದ್ದಾರೆ. ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ 1987 ರಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಇವರು 2004 ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸತತ 20 ವರ್ಷಗಳ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ 21ನೇ ವರ್ಷದ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಸಹಕಾರಿ ಕ್ಷೇತ್ರವಲ್ಲದೆ ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ ಇವರು ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಲ್ಲಾಳರ ಕಾಲದಲ್ಲಿ ನಿಂತು ಹೋಗಿದ್ದ ಶ್ರೀಕ್ಷೇತ್ರದ ಜಾತ್ರೋತ್ಸವವನ್ನು ಮತ್ತೆ ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇದಲ್ಲದೆ ಕೆಯ್ಯೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 10 ವರ್ಷಗಳ ಕಾಲ ಕ್ರಿಮಿನಲ್ ಲಾಯರ್ ಆಗಿಯೂ ಸೇವೆ ಸಲ್ಲಿಸಿದ್ದ ಶಶಿಧರ ರಾವ್ ಬೊಳಿಕ್ಕಲರವರು ಹತ್ತು ಹಲವು ಸಂಘ ಸಂಸ್ಥೆಗಳ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅಧ್ಯಕ್ಷತೆಯಲ್ಲಿ ಸಹಕಾರ ಸಂಘದ ಅಡಿಯಲ್ಲಿ ತಿಂಗಳಾಡಿಯಲ್ಲಿ ಸಹಕಾರಿ ಮಾರ್ಟ್ ಆರಂಭಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು
ಕೆದಂಬಾಡಿ ಗ್ರಾಮದ ಕೆದಂಬಾಡಿಗುತ್ತು ಶ್ರೀಧರ ರೈ ಮತ್ತು ಪದ್ಮಾವತಿ ರೈಯವರ ಪುತ್ರರಾಗಿರುವ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತುರವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಓರ್ವ ಯುವ ಸಹಕಾರಿಯಾಗಿದ್ದಾರೆ. ಸಹಕಾರ ಭಾರತಿಯ ತಾಲೂಕು ಅಧ್ಯಕ್ಷರಾಗಿರುವ ಇವರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ 2004ರಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು ಇದೀಗ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟಿಎಪಿಸಿಎಂಸ್‌ನ ಉಪಾಧ್ಯಕ್ಷರಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸತತ 32 ವರ್ಷಗಳ ಕಾಲ ನಷ್ಟದಲ್ಲಿದ್ದ ಟಿಎಪಿಸಿಎಂಎಸ್ ಅನ್ನು ಲಾಭದತ್ತ ಕೊಂಡೊಯ್ದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇದಲ್ಲದೆ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿಯಾಗಿ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಕೊರೋನ ಸಂಕಷ್ಟ ಕಾಲದಲ್ಲಿ ಸಹಕಾರಿ ಸಂಘಗಳ ಮೂಲಕ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಎಸ್.ಬಿ.ಜಯರಾಮ ರೈ, ಜನಾರ್ದನ ರೈ ಕೋಡಂಕೀರಿ, ತಾರಾನಾಥ ಕಂಪ, ಸೀತಾರಾಮ ಗೌಡ ಇದ್ಯಪೆ, ಪ್ರವೀಣ್, ಸಂತೋಷ್ ಕುಮಾರ್ ರೈ ಕೋರಂಗ, ಲೋಕೇಶ್ ಬಿ, ರಿತೀಶ್ ಎಂ, ಪುಷ್ಪಲತಾ ಜೆ.ರೈ, ಜಯಂತಿ ಉಪಸ್ಥಿತರಿದ್ದರು. ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು ಮಾತನಾಡಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಸದಾ ಜೊತೆಯಾಗಿರುತ್ತೇವೆ, ಸಂಘದ ಅಭಿವೃದ್ಧಿಯೊಂದಿಗೆ ಸದಸ್ಯರಿಗೆ ಉತ್ತಮ ಸೇವೆ ನೀಡುವುದೇ ನಮ್ಮೆಲ್ಲರ ಗುರಿ ಮತ್ತು ಉದ್ದೇಶವಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ನ ಪ್ರತಿನಿಧಿಯಾಗಿ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಆಗಮಿಸಿದ್ದರು. ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ ಕುಮಾರ್ ರೈ ದೇರ್ಲ ಸ್ವಾಗತಿಸಿದರು. ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ಶರತ್ ವಂದಿಸಿದರು. ಸಿಬ್ಬಂದಿಗಳಾದ ಸೂರಜ್ ಕುಮಾರ್, ಪ್ರೀತಮ್, ಕೌಶಲ್ಯ, ಭವ್ಯ, ದುರ್ಗಾಕಿರಣ್, ಐತ್ತಪ್ಪ ನಾಯ್ಕ, ಪ್ರದೀಪ್, ಚರಣ್‌ರಾಜ್, ಕೊರಗಪ್ಪ ಪೂಜಾರಿ ಸಹಕರಿಸಿದ್ದರು.

ಅಭಿನಂದನೆ ಸಲ್ಲಿಕೆ
ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಈ ಸಂದರ್ಭದಲ್ಲಿ ಸಹಕಾರ ಸಂಘ ಹಾಗೂ ಇತರರಿಂದ ಅಭಿನಂದನೆ ಸಲ್ಲಿಕೆ ಮಾಡಲಾಯಿತು. ಹೂ ಹಾರ ಹಾಕಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಕೆಯ್ಯೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಆಳ್ವ ಇಳಂತಾಜೆ, ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಜಯರಾಮ ರೈ ಬಾಲಯ, ಮಾಜಿ ನಿರ್ದೇಶಕಿ ಲೀಲಾವತಿ ರೈ ಕೋಡಂಬು, ಅಮರ್ ರೈ, ಮಾಜಿ ನಿರ್ದೇಶಕ ಸೂರ್ಯಪ್ರಸನ್ನ ರೈ ಎಂಡೆಸಾಗು, ಶಿವರಾಮ ರೈ ಕಜೆ ಸೇರಿದಂತೆ ಹಲವು ಮಂದಿ ನೂತನ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ ಹಾಗೂ ಉಪಾಧ್ಯಕ್ಷ ಕೃಷ್ಣಕುಮಾರ್ ರೈಯವರನ್ನು ಅಭಿನಂದಿಸಿದರು.

ಆಡಳಿತ ಚುಕ್ಕಾಣಿ ಹಿಡಿದ ಸಹಕಾರ ಭಾರತಿ ಬೆಂಬಲಿತರು
ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 12 ಮಂದಿ ನಿರ್ದೇಶಕರ ಆಯ್ಕೆಗೆ ಬಿಜೆಪಿ ಬೆಂಬಲಿತ 9 ಮತ್ತು ಪುತ್ತಿಲ ಪರಿವಾರ ಬೆಂಬಲಿತ 3 ಮಂದಿ ಒಟ್ಟು ಸೇರಿ ಸಹಕಾರ ಭಾರತಿಯಡಿ ಸ್ಪರ್ಧೆ ನಡೆಸಿದ್ದರು. ಇದರಲ್ಲಿ 12 ಮಂದಿಯೂ ಗೆಲುವು ಸಾಧಿಸುವ ಮೂಲಕ ಸಹಕಾರ ಭಾರತಿಯ ಬೆಂಬಲಿತರು ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇದೀಗ ಸಹಕಾರ ಭಾರತಿಯ 12 ಮಂದಿ ನಿರ್ದೇಶಕರಲ್ಲಿ ಶಶಿಧರ ರಾವ್ ಬೊಳಿಕ್ಕಲ ಅಧ್ಯಕ್ಷರಾಗಿ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಆಡಳಿತ ಚುಕ್ಕಾಣಿಯನ್ನು ಸಹಕಾರ ಭಾರತಿ ಬೆಂಬಲಿತರು ಮತ್ತೊಮ್ಮೆ ಪಡೆದುಕೊಂಡಿದ್ದಾರೆ.

‘ಸಹಕಾರ ಭಾರತಿಯಡಿ ಸ್ಪರ್ಧಿಸಿ ಎಲ್ಲರ ಸಹಕಾರದೊಂದಿಗೆ ಮತ್ತೊಮ್ಮೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎನ್ನುವ ಉದ್ದೇಶವಿದೆ. ಕೆಯ್ಯೂರಿನಲ್ಲಿಯೂ ಸಹಕಾರಿ ಮಾರ್ಟ್ ಮಾಡಬೇಕೆಂಬ ಗುರಿ ಇದೆ. ಸದಸ್ಯರಿಗೆ ಉತ್ತಮ ಸೇವೆ ನೀಡುವ ಮೂಲಕ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸರ್ವರ ಸಹಕಾರವಿರಲಿ.ಎಲ್ಲರಿಗೂ ವಂದನೆಗಳು.’
ಶಶಿಧರ ರಾವ್ ಬೊಳಿಕ್ಕಲ, ಅಧ್ಯಕ್ಷರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ‘ಸಹಕಾರ ಭಾರತಿಯಡಿ ಸ್ಪರ್ಧಿಸಿ ಸರ್ವರ ಸಹಕಾರದೊಂದಿಗೆ ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತೇನೆ. ಸಂಘದ ಅಭಿವೃದ್ಧಿಯೊಂದಿಗೆ ಸದಸ್ಯರಿಗೆ ಉತ್ತಮ ಸೇವೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂಬ ಭರವಸೆಯನ್ನು ನೀಡುತ್ತೇವೆ. ಎಲ್ಲರ ಸಹಕಾರ ನಮ್ಮ ಮೇಲಿರಲಿ.’
ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು,
ಉಪಾಧ್ಯಕ್ಷೆರು ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ


LEAVE A REPLY

Please enter your comment!
Please enter your name here