ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದ ಆರೋಪ- ಕಲ್ಲಡ್ಕ ಡಾ.ಪ್ರಭಾಕರ ಭಟ್ ವಿರುದ್ಧ ಬಲವಂತದ ಕಾನೂನು ಕ್ರಮಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ: ಶ್ರೀರಂಗಪಟ್ಟಣ ಜಿಲ್ಲಾ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು

0

ಪುತ್ತೂರು:ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪ ಎದುರಿಸುತ್ತಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರ ವಿರುದ್ಧ ಮುಂದಿನ ವಿಚಾರಣೆ ತನಕ ಬಲವಂತದ ಕಾನೂನು ಕ್ರಮಕೈಗೊಳ್ಳದಂತೆ ರಾಜ್ಯ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣ ಜಿಲ್ಲಾ ನ್ಯಾಯಾಲಯ ಕಲ್ಲಡ್ಕ ಡಾ.ಪ್ರಭಾಕರ ಭಟ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ದ.24ರಂದು ಹಿಂದೂ ಜಾಗರಣಾ ವೇದಿಕೆಯು ಶ್ರೀರಂಗಪಟ್ಟಣ ಪಟ್ಟಣದಲ್ಲಿ ಆಯೋಜಿಸಿದ್ದ ಸಂಕೀರ್ತನಾ ಯಾತ್ರೆ ವೇಳೆ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿ ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಝೀರ್ ಚಿಕ್ಕನೇರಳೆ ಎಂಬವರು ನೀಡಿದ ದೂರಿನ ಆಧಾರದಲ್ಲಿ ಡಾ.ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸೆಕ್ಷನ್ 354, 294, 509, 506, 153ಎ,295, 295ಎ, 298ಐಪಿಸಿಯಡಿ ಶ್ರೀರಂಗಪಟ್ಟಣ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ದತೆಗೆ ಭಂಗ ಉಂಟುಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ವಿಟ್ಲ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಂಘಟನೆಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಕೂಡಾ ನಡೆದಿದೆ.

ಎಫ್‌ಐಆರ್ ರದ್ದುಕೋರಿ ಡಾ.ಭಟ್ ಹೈಕೋರ್ಟ್ಗೆ:
ತನ್ನ ವಿರುದ್ಧ ಶ್ರೀರಂಗಪಟ್ಟಣ ಪೊಲೀಸರು ದಾಖಲಿಸಿಕೊಂಡಿರುವ ಎಫ್‌ಐಆರ್ ರದ್ದುಮಾಡುವಂತೆ ಆಗ್ರಹಿಸಿ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರು ರಾಜ್ಯ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು.ಡಾ.ಪ್ರಭಾಕರ ಭಟ್ ಅವರ ವಿರುದ್ಧ ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.ಹೀಗಾಗಿ ಅವರ ಮೇಲಿನ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಸೂಚಿಸಬೇಕೆಂದು ಡಾ.ಪ್ರಭಾಕರ ಭಟ್ ಅವರ ಪರ ವಕೀಲರು ಮನವಿ ಮಾಡಿದರು.ವಾದ ಆಲಿಸಿದ ನ್ಯಾಯಮೂರ್ತಿ ರಾಜೇಶ್ ರೈ ಅವರು,ಮುಂದಿನ ವಿಚಾರಣೆವರೆಗೂ ಆರೋಪಿ ಡಾ.ಪ್ರಭಾಕರ ಭಟ್ ವಿರುದ್ಧ ಬಲವಂತದ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಿಗೆ ಸೂಚಿಸಿದ್ದಾರೆ.ಮುಂದಿನ ವಿಚಾರಣೆಯನ್ನು ಜನವರಿ 9ಕ್ಕೆ ಮುಂದೂಡಿದೆ.ಹೈಕೋರ್ಟ್ನಲ್ಲಿ ಡಾ.ಪ್ರಭಾಕರ ಭಟ್ ಅವರ ಪರವಾಗಿ ಹಿರಿಯ ನ್ಯಾಯವಾದಿ ಅರುಣ್‌ಶ್ಯಾಂ ವಾದಿಸಿದ್ದರು.ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕೆ.ಪಿ.ವಕಾಲತ್ತು ವಹಿಸಿದ್ದರು.

ಶ್ರೀರಂಗಪಟ್ಟಣ ಜಿಲ್ಲಾ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು:
ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಶ್ರೀರಂಗಪಟ್ಟಣದ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ, ಡಾ.ಭಟ್ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ದ.28ರಂದು ಆದೇಶಿಸಿದ್ದು, ಮುಂದಿನ ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಿದೆ.ಡಾ.ಪ್ರಭಾಕರ ಭಟ್ ಪರವಾಗಿ ವಕೀಲರಾದ ಚಂದ್ರೇಗೌಡ ಮತ್ತು ಯೋಗಾನಂದ ಅವರು ವಾದಿಸಿದ್ದರು.

LEAVE A REPLY

Please enter your comment!
Please enter your name here