ಶಾಸಕರಿಗೆ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿ ಪ್ರದಾನ
ಪುತ್ತೂರು: ದೇವರು ಇದ್ದಾನೋ ಇಲ್ಲವೋ ಯಾರಿಗೂ ಗೊತ್ತಿಲ್ಲ ಆದರೆ ದೇವರು ಇದ್ದಾನೆ ಎಂಬ ನಂಬಿಕೆಯ ಮೂಲಕ ನಾವು ದೇವರನ್ನು ಕಾಣುತ್ತಿದ್ದೇವೆ. ತಂದೆ ತಾಯಿಯೇ ನಮಗೆ ಕಣ್ಣಿಗೆ ಕಾಣುವ ಮೊದಲ ದೇವರು ಆಗಿದ್ದಾರೆ. ದೇವರಿಗೆ ದುಡ್ಡು ಕೊಟ್ಟ ಕೂಡಲೇ ಅನುಗ್ರಹ ಸಿಗುತ್ತದೆ ಎಂಬ ಭ್ರಮೆ ಬೇಡ, ತಂದೆ ತಾಯಿಯ ಆಶೀರ್ವಾದ ಸಿಕ್ಕಿದರೆ ಮಾತ್ರ ಗರ್ಭ ಗುಡಿಯಲ್ಲಿನ ದೇವರ ಆಶೀರ್ವಾದವೂ ಸಿಗಲು ಸಾಧ್ಯ ಆದ್ದರಿಂದ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ದೇವರ ಅನುಗ್ರಹ ಪಡೆಯಬಹುದು ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ದ.30 ರಂದು ಶ್ರೀ ಬ್ರಹ್ಮಬೈದೆರ್ಕಳ ಜಾತ್ರೋತ್ಸವದ ಅಂಗವಾಗಿ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಧರ್ಮಚಾವಡಿ, ಸಿರಿ ದೇಯಿ ಬೈದೆತಿ ಸಿರಿದೊಂಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಮಜಾಲು ಗರಡಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿ-2023 ಅನ್ನು ಸ್ವೀಕರಿಸಿ ಮಾತನಾಡಿದರು. ರಾಮಜಾಲು ಬ್ರಹ್ಮಬೈದೆರ್ಕಳ ಗರಡಿಯ ಆಡಳಿತ ಮೊಕ್ತೇಸರರಾಗಿರುವ ಸಂಜೀವ ಪೂಜಾರಿಯವರನ್ನು ನಾನು ಕಳೆದ 10 ವರ್ಷಗಳಿಂದ ನೋಡ್ತಾ ಬಂದಿದ್ದೇನೆ. ಅವರೊಬ್ಬ ಧರ್ಮದ ಬಗ್ಗೆ ಚಿಂತನೆ ಇವರು ವ್ಯಕ್ತಿಯಾಗಿದ್ದಾರೆ.ಇಂದು ಅವರು ತನ್ನ ಅಜ್ಜನ ಹೆಸರಿನಲ್ಲಿ ನನಗೆ ಈ ಪ್ರಶಸ್ತಿಯನ್ನು ನೀಡಿದ್ದಾರೆ. ತುಂಬಾ ಸಂತೋಷವಾಗಿದೆ ಎಂದ ಅಶೋಕ್ ಕುಮಾರ್ ರೈಯವರು ನಾವು ಸಮಾಜದೊಂದಿಗೆ ಹೇಗೆ ನಡೆದುಕೊಳ್ಳುತ್ತೇವೆ, ನಮ್ಮಿಂದ ಈ ಸಮಾಜಕ್ಕೆ ಏನು ಸಹಾಯ ಮಾಡಬಹುದು ಎಂಬ ಧರ್ಮ ಚಿಂತನೆಯೊಂದಿಗೆ ನಮ್ಮ ಆಚಾರ ವಿಚಾರ ಸರಿ ಇದ್ದರೆ ಮಾತ್ರ ದೇವರ ಆಶೀರ್ವಾದ ಸಿಗಲು ಸಾಧ್ಯ ಆದ್ದರಿಂದ ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಹೇಳಿದರು.
ಬಡವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮ:
ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದೇ ಶ್ರೇಷ್ಠ ಧರ್ಮ, ಬಡವರಿಗೆ ಸಹಾಯ ಮಾಡುವುದೇ ನಿಜವಾದ ಧರ್ಮವಾಗಿದೆ ಎಂದ ಅಶೋಕ್ ಕುಮಾರ್ ರೈಯವರು, ಇಂದು ಧರ್ಮಕ್ಕೆ ರಾಜಕೀಯದ ಬಣ್ಣ ಹಚ್ಚಿ ನಿಜವಾದ ಧರ್ಮವನ್ನೇ ಮರೆ ಮಾಡುವ ಕೆಲಸ ಆಗುತ್ತಿದೆ. ಇದು ಸಲ್ಲದು ಎಂದು ಹೇಳಿದರು.
ಋಣ ತೀರಿಸುವ ಕೆಲಸ ಮಾಡುತ್ತೇನೆ:
ನಾನು ಕಾಂಗ್ರೆಸ್ ಪಕ್ಷದ ಶಾಸಕನಾಗಿ ಆರಿಸಿ ಬಂದಿದ್ದರೂ ಬಡವರ ಕೆಲಸ ಮಾಡುವಲ್ಲಿ ನನಗೆ ಯಾವುದೇ ಪಕ್ಷ ಇಲ್ಲ. ಯಾವ ಪಕ್ಷದವರೂ ಕೂಡ ನನ್ನಲ್ಲಿಗೆ ಬರಬಹುದು, ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವುದೇ ನನ್ನ ಗುರಿ. ಶಾಸಕನಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಏನೇ ಕೆಲಸ ಆಗಬೇಕಿದ್ದರೂ ನನ್ನ ಕಛೇರಿಗೆ ಬನ್ನಿ ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಸತ್ಯವನ್ನು ಜಗತ್ತಿಗೆ ಸಾರಿದ ಶಕ್ತಿಗಳು: ಮಲ್ಲಿಕಾ ಪ್ರಶಾಂತ್ ಪಕ್ಕಳ:
ದೀಪ ಬೆಳಗಿಸಿ, ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧಾರ್ಮಿಕ ಪರಿಷತ್ತು ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಾಲಾರುಬೀಡುರವರು ಮಾತನಾಡಿ, ಸತ್ಯದ ಮೂಲಕ ನಂಬಿದವರಿಗೆ ಇಂಬು ಕೊಟ್ಟ ಶಕ್ತಿಗಳು ಕೋಟಿ ಚೆನ್ನಯರಾಗಿದ್ದಾರೆ. ಇಂತಹ ಕೋಟಿ ಚೆನ್ನಯರು ನೆಲೆಯಾಗಿರುವ ಪರ್ಪುಂಜ ರಾಮಜಾಲು ಗರಡಿಯೂ ಒಂದು ಕಾರಣಿಕತೆಯ ಗರಡಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ರಾಮಜಾಲು ಭಕ್ತಿ, ಶಕ್ತಿ ತುಂಬಿದ ಮಣ್ಣು: ಜಯಂತ ನಡುಬೈಲ್:
ಅಕ್ಷಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲ್‌ರವರು ಮಾತನಾಡಿ, ಶ್ರೀ ಬ್ರಹ್ಮಬೈದೇರುಗಳು ನೆಲೆಯಾಗಿರುವ ಪರ್ಪುಂಜದ ಈ ರಾಮಜಾಲು ಮಣ್ಣು ಭಕ್ತಿ ಮತ್ತು ಶಕ್ತಿ ತುಂಬಿದ ಮಣ್ಣಾಗಿದೆ. ಇಲ್ಲಿಯ ಕಾರಣಿಕತೆಯನ್ನು ನೋಡಬೇಕಾದರೆ ಇಲ್ಲಿ ನಡೆಯುವ ನೇಮೋತ್ಸವವನ್ನು ನೋಡಬೇಕು ಎಂದು ಹೇಳಿ ಶುಭ ಹಾರೈಸಿದರು.
ಸಂಜೀವಣ್ಣನ ವ್ಯಕ್ತಿತ್ವ ಇಲ್ಲಿ ಅನಾವರಣಗೊಂಡಿದೆ : ಕಾವು ಹೇಮನಾಥ ಶೆಟ್ಟಿ:
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ರಾಮಜಾಲು ಗರಡಿಯ ಅಭಿವೃದ್ಧಿ,ಇಲ್ಲಿ ನಡೆಯುವ ವೈಭವದ ನೇಮೋತ್ಸವ, ಭಕ್ತಾಽಗಳು ಸೇರುವ ರೀತಿ ಎಲ್ಲವನ್ನೂ ನೋಡುತ್ತಿದ್ದರೆ ಸಂಜೀವಣ್ಣನ ವ್ಯಕ್ತಿತ್ವ ಮತ್ತು ಭಕ್ತಿ ಎಂತಹುದು ಎಂಬುದು ನಮಗೆ ಅರ್ಥವಾಗುತ್ತದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರನ್ನು ಮಾತ್ರ ಸಂಜೀವಣ್ಣ ಗುರುತಿಸಿ ಗೌರವಿಸುತ್ತಾರೆ ಈ ವರ್ಷ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಈ ಗೌರವವನ್ನು ಮಾಡಿದ್ದಾರೆ. ಧಾರ್ಮಿಕ ಚಿಂತನೆಯುಳ್ಳ ಸಂಜೀವ ಪೂಜಾರಿಯವರಿಂದ ನಾವು ಕಲಿಯುವಂತಹುದು ಬಹಳಷ್ಟಿದೆ ಎಂದು ಹೇಳಿ ಶುಭ ಹಾರೈಸಿದರು.
ಕಾಯ ಬಿಟ್ಟು ಮಾಯ ಸೇರಿದ ದೈವಿಶಕ್ತಿಗಳು: ಡಾ| ರಾಜರಾಮ್ ಕೆ.ಬಿ:
ಭಾರತೀಯ ದಂತ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷರಾದ ಡಾ| ರಾಜರಾಮ್ ಕೆ.ಬಿ.ಯವರು ಮಾತನಾಡಿ, ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯರು ಕಾಯ ಬಿಟ್ಟು ಮಾಯ ಸೇರಿದ ದೈವಿಶಕ್ತಿಗಳಾಗಿದ್ದಾರೆ. ಇಂತಹ ದೈವಿಶಕ್ತಿಗಳ ಆರಾಧನೆ ನಡೆಯುತ್ತಿರುವ ರಾಮಜಾಲು ಗರಡಿಯು ಅತ್ಯಂತ ಕಾರಣಿಕತೆಯ ಗರಡಿಯಾಗಿದೆ. ಇಲ್ಲಿ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ ಸಕಲ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.
ಪುತ್ತೂರಿಗೆ ಇಂತಹ ಶಾಸಕರು ಸಿಕ್ಕಿದ್ದು ಮಹಾಲಿಂಗೇಶ್ವರನ ಕೃಪೆ: ಸಂಜೀವ ಪೂಜಾರಿ ಕೂರೇಲು:
ಸಭಾಧ್ಯಕ್ಷತೆ ವಹಿಸಿದ್ದ ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಮಾತನಾಡಿ, ನನ್ನ ಅಜ್ಜ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿಯವರ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಈ ವರ್ಷ ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ಇದನ್ನು ಪ್ರದಾನ ಮಾಡಿದ್ದೇವೆ. ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವವರನ್ನು ಗುರುತಿಸಿ ಈ ಪ್ರಶಸ್ತಿ ಕೊಡುತ್ತಿದ್ದೇವೆ. ಅಶೋಕ್ ಕುಮಾರ್ ರೈಯವರ ಸಮಾಜ ಸೇವೆ ಎಲ್ಲರಿಗೆ ಗೊತ್ತು. ಇಂತಹ ಒಬ್ಬ ಮಹಾನ್ ವ್ಯಕ್ತಿ ಪುತ್ತೂರಿನ ಶಾಸಕರಾಗಿ ಬಂದಿದ್ದು ಅದು ಪುತ್ತೂರು ಶ್ರೀ ಮಹಾಲಿಂಗೇಶ್ವರನ ಕೃಪೆಯಿಂದ ಆಗಿದೆ . ಮುಂದಿನ ದಿನಗಳಲ್ಲಿ ಅವರಿಂದ ಇನ್ನಷ್ಟು ಅಭಿವೃದ್ಧಿ ಸಾಧನೆಗಳು ಮೂಡಿಬರಲಿ ಅವರಿಗೆ ಕೋಟಿ ಚೆನ್ನಯರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲದ ಅಧ್ಯಕ್ಷರು ಹಾಗೂ ಪದಾಽಕಾರಿಗಳಿಗೆ, ಶ್ರೀ ಮಲರಾಯ ಸ್ವಯಂ ಸೇವಕ ವೃಂದದ ಪದಾಽಕಾರಿಗಳಿಗೆ ಶಾಸಕರು ಶಾಲು ಹಾಕಿ ಗೌರವಿಸಿದರು. ಶುತಿ ಪಲ್ಲತ್ತಾರು ಪ್ರಾರ್ಥಿಸಿದರು. ಹರ್ಷಿತ್ ಕೂರೇಲು ಸ್ವಾಗತಿಸಿದರು. ಶಾಸಕರನ್ನು ಸಂಜೀವ ಪೂಜಾರಿ ಕೂರೇಲು ಶಾಲು, ಹೂ ನೀಡಿ ಸ್ವಾಗತಿಸಿದರು. ಉಳಿದಂತೆ ರೇಖಾ ರೈ, ರಾಜೇಶ್ ರೈ ಪರ್ಪುಂಜ, ರಾಜೇಶ್ ಪೂಜಾರಿ ಪಿದಪಟ್ಲ, ಜನಾರ್ದನ್ ಅಡ್ಯಾರ್ ಅತಿಥಿಗಳಿಗೆ ಶಾಲು, ಹೂ ನೀಡಿ ಸ್ವಾಗತಿಸಿದರು. ನೇಮಾಕ್ಷ ಸುವರ್ಣ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಪುನರ್ ಪ್ರತಿಷ್ಠಾ ಷಷ್ಠ ದಶ ಸಂಭ್ರಮ
ಪರ್ಪುಂಜ ಶ್ರೀ ರಾಮಜಾಲು ಗರಡಿಯನ್ನು ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿ 2008ರಲ್ಲಿ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಮಾಡಿಸಿದ ಕೀರ್ತಿ ಕೂರೇಲು ಸಂಜೀವ ಪೂಜಾರಿಯವರಿಗೆ ಸಲ್ಲುತ್ತದೆ. ಆ ಬಳಿಕ ಪ್ರತಿವರ್ಷ ವಿಜ್ರಂಭಣೆಯಿಂದ ನೇಮೋತ್ಸವ ನಡೆದುಕೊಂಡು ಬಂದಿದ್ದು ಈ ವರ್ಷ ಪುನರ್ ಪ್ರತಿಷ್ಠಾ ಷಷ್ಠ ದಶ ಸಂಭ್ರಮ ಅಂದರೆ 16 ನೇ ವರ್ಷದ ನೇಮೋತ್ಸವ ಬಹಳ ವಿಜೃಂಭಣೆಯಿಂದ ನಡೆಯುವ ಮೂಲಕ ಮತ್ತೊಮ್ಮೆ ರಾಮಜಾಲು ಗರಡಿಯ ಕಾರಣಿಕತೆ ಮೆರೆದಿದೆ.
ಶ್ರೀ ಬ್ರಹ್ಮಬೈದೆರ್ಕಳ ಅದ್ಧೂರಿ ಜಾತ್ರೋತ್ಸವ
ದ.30 ರಂದು ಸಂಜೆ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಬೈದೇರುಗಳ ಗರಡಿ ಇಳಿಯುವ ಕಾರ್ಯಕ್ರಮ, ಆಕರ್ಷಕ ಸುಡುಮದ್ದು ಪ್ರದರ್ಶನ (ರಾಮಜಾಲು ಬೆಡಿ) ಮನಸೂರೆಗೊಂಡಿತ್ತು. ಬಳಿಕ ಬೈದೇರುಗಳ ಮೀಸೆ ಧರಿಸುವುದು, ಮಾಯಂದಾಲೆ (ಮಾಣಿ ಬಾಲೆ) ಗರಡಿ ಇಳಿಯುವುದು ,ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು), ಬೈದೇರುಗಳ ಸೇಟ್ (ಸುರ್ಯ ಹಾಕಿಕೊಳ್ಳುವುದು) ನಡೆದು ಭಕ್ತರಿಗೆ ಪ್ರಸಾದ ವಿತರಣೆಯ ಬಳಿಕ ಅರುಣೋದಯಕ್ಕೆ ನೇಮೋತ್ಸವದಿಂದ ದೈವ ಸಂತೃಪ್ತಿಗಾಗಿ ಕಂಚಿಕಲ್ಲಿಗೆ ಕಾಯಿ ಸೇಜನೆಯೊಂದಿಗೆ ನೇಮೋತ್ಸವ ಪರಿಸಮಾಪ್ತಿಗೊಂಡಿತು.
10 ಸಾವಿರಕ್ಕೂ ಅಧಿಕ ಮಂದಿ ಭಾಗಿ, 8 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ:
ರಾಮಜಾಲು ಗರಡಿ ಜಾತ್ರೋತ್ಸವವು ಕಂಕನಾಡಿ ಗರಡಿ ಜಾತ್ರೋತ್ಸವದ ನಂತರದ ಸ್ಥಾನದಲ್ಲಿ ನಡೆಯುವ ಅದ್ಧೂರಿ ನೇಮೋತ್ಸವ ಆಗಿದೆ. ಪ್ರತಿವರ್ಷದಂತೆ ಈ ವರ್ಷವೂ ನೇಮೋತ್ಸವಕ್ಕೆ ಸುಮಾರು 1 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು ಕಂಡು ಬಂದಿದೆ. ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ಮನರಂಜಿಸಿದ ‘ಪುದರ್ ದೀದಾಂಡ್’ ತುಳು ನಾಟಕ
ನೇಮೋತ್ಸವದ ಅಂಗವಾಗಿ ಸಂಜೆ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಕಾಪಿಕಾಡ್, ಬೋಳಾರ್, ವಾಮಂಜೂರು ಸಮಾಗಮದೊಂದಿಗೆ ಚಾ ಪರ್ಕ ಕಲಾವಿದರಿಂದ ಈ ವರ್ಷದ ಸೂಪರ್ ಹಿಟ್ ಕಾಮಿಡಿ ತುಳು ನಾಟಕ ‘ ಪುದರ್ ದೀದಾಂಡ್’ ಪ್ರದರ್ಶನಗೊಂಡಿತು. ಸಾವಿರಾರು ಮಂದಿ ನಾಟಕ ವೀಕ್ಷಣೆ ಮಾಡಿದರು.
ಶಾಸಕರಿಗೆ ಅಭಿನಂದನೆ, ಪ್ರಶಸ್ತಿ ಪ್ರದಾನ
ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ ವಿಶೇಷ ಅಭಿನಂದನೆಯೊಂದಿಗೆ ರಾಮಜಾಲು ಗರಡಿ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಕೂರೇಲುಗುತ್ತು ಶ್ರೀ ಸುಬ್ಬಪ್ಪ ಪೂಜಾರಿ ಪ್ರಶಸ್ತಿ-2023 ನೀಡಿ ಗೌರವಿಸಲಾಯಿತು. ಶಾಲು, ಹಾರ, ಪೇಟಾ ತೊಡಿಸಿ, ಸ್ಮರಣಿಕೆ, ಫಲಕ, ಪ್ರಶಸ್ತಿ ಪತ್ರದೊಂದಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಧಾರ್ಮಿಕ ಪರಿಷತ್ತು ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಮಾಲಾರುಬೀಡು ಇವರನ್ನು ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಿ ಗೌರವಿಸಲಾಯಿತು.