ಸರಕಾರಿ ಶಾಲೆಗಳ ಸೌಲಭ್ಯಗಳನ್ನು ಪೋಷಕರು ಬಳಸಿಕೊಳ್ಳಬೇಕು-ಲೋಕೇಶ್ ಎಸ್.ಆರ್.
ಪುತ್ತೂರು: ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ದಿನಾಚರಣೆ “ನನ್ನ ಪ್ರತಿಭೆ” ದ.29ರಂದು ನಡೆಯಿತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಓದುವ ಹವ್ಯಾಸ ಬಳೆಸಿಕೊಳ್ಳಬೇಕು. ಪೋಷಕರು ಮಕ್ಕಳ ಕೈಗೆ ಪುಸ್ತಕ ಕೊಡಬೇಕು. ಮೊಬೈಲ್, ಟಿವಿಯಿಂದ ಮಕ್ಕಳನ್ನು ದೂರವಿಡಬೇಕು. ಪೂಷಕರು ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದರು. ಇಂದು ಸರಕಾರಿ ಶಾಲೆಯಲ್ಲಿ ಖಾಸಗಿ ಶಾಲೆಗಿಂತ ಹೆಚ್ಚಿನ ಸೌಲಭ್ಯ ಇದೆ. ಇದನ್ನು ಪೋಷಕರು ಬಳಸಿಕೊಳ್ಳಬೇಕು. ಐಎಎಸ್ ಐಪಿಎಸ್, ಕೆಎಎಸ್ ಕನಸುಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ಶಾಲಾ ಸ್ಥಾಪಕಾಧ್ಯಕ್ಷ ಮಹಮದಾಲಿ ಎಚ್. ಮಾತನಾಡಿ 33 ವರ್ಷದ ಹಿಂದೆ ನಾನು ಈ ಭಾಗದ ಮಂಡಲ ಪ್ರಧಾನರಾಗಿ ಕಾರ್ಯನಿರ್ವಹಿಸುತ್ತಿರುವಾಗ ಈ ಪರಿಸರದ ಮಕ್ಕಳಿಗೆ ಶಾಲೆಯ ಅವಶ್ಯಕತೆ ಮನಗಂಡು ಶಾಲೆ ಪ್ರಾರಂಭಿಸಿದೆ. ಮಂಡಲ ಪಂಚಾಯತ್ ಅನುದಾನದಲ್ಲಿ ಕಟ್ಟಡ ಕೂಡ ನಿರ್ಮಿಸಲಾಯಿತು. ಇಂದು ಆಂಗ್ಲ ಮಾಧ್ಯಮ ವ್ಯಾಮೋಹ ಇದೆ. ಕನ್ನಡ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಇದರಿಂದ ಶಾಲೆಗಳು ಮುಚ್ಚುವ ಹಂತದಲ್ಲಿದೆ ಆದರಿಂದ ಸರಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದರು. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ ಶಾಲಾ ದಿನಾಚರಣೆಗಳು ಸಾಹಿತ್ಯಕವಾಗಿ ಇರಬೇಕು. ಇಂದು ಶಾಲಾ ವಾರ್ಷಿಕೋತ್ಸವದಲ್ಲಿ ಕೇವಲ ನೃತ್ಯ ಮಾತ್ರ ಇದೆ. ಸಾಹಿತ್ಯಕ್ಕೆ ವಾರ್ಷಿಕೋತ್ಸವದಲ್ಲಿ ಒತ್ತು ಕೊಡಬೇಕು. ಈ ಮೂಲಕ ಸಾಹಿತ್ಯ ಕ್ಷೇತ್ರವನ್ನು ಬೆಳೆಸಬೇಕು ಎಂದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಚೈತ್ರ ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.
“ಸಂಜಯ ನಗಾರಿ” ಬಿಡುಗಡೆ:
ಶಾಲಾ ವಿಶೇಷ ಸಂಚಿಕೆ ಸಂಜಯ ನಗಾರಿಯನ್ನು ಬಿಡುಗಡೆ ಮಾಡಲಾಯಿತು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ವೇಗಸ್ ಬಿಡುಗಡೆ ಮಾಡಿದರು.
“ಸಂಜೆಯ ನಗು” ಬಿಡುಗಡೆ :
ಶಾಲಾ ಹಸ್ತಪ್ರತಿ ಸಂಜೆಯ ನಗುವನ್ನು ಬಿಡುಗಡೆ ಮಾಡಲಾಯಿತು. ಪುತ್ತೂರು ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ರಾಮಚಂದ್ರ ಬಿಡುಗಡೆ ಮಾಡಿದರು.
ಶಾಲಾ ದಿನಾಚರಣೆ ಸಮಿತಿ ಅಧ್ಯಕ್ಷ ರಾಜೇಶ್ ಬೀರಮಲೆ, ಕಾರ್ಯದರ್ಶಿ ಲತಾ ಆನಂದ ಪೂಜಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ನವೀನ್ ವೇಗಸ್, ಪುತ್ತೂರು ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ ರಾಮಚಂದ್ರ, ಸ್ಮಿತಾ ಬಳ್ಳಕ್ಕುರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರದ ಆರಂಭದಲ್ಲಿ ನಿವೃತ್ತ ಶಿಕ್ಷಕ ಸುರೇಶ್ ಹೆಗ್ಡೆ ತೆಂಗಿನ ಕಾಯಿ ಒಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಸ್ಥಾಪಕಾಧ್ಯಕ್ಷ ಮಹಮದಾಲಿ ಎಚ್. ಧ್ವಜಾರೋಹಣ ನೆರವೇರಿಸಿದರು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕ ರಮೇಶ್ ಉಳಯ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹಿರಿಯ ಶಕ್ಷಕಿ ಸ್ಮಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅತಿಥಿ ಶಿಕ್ಷಕಿಯರಾದ ಪ್ರಮೀಳಾ, ಮಮತ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ವಿವಿಧ ರೀತಿಯ ನೃತ್ಯಗಳು, ನಲಿಕಲಿ ಮಕ್ಕಳಿಂದ ನಾವೆಲ್ಲ ಸಮಾನ ಕಿರು ನಾಟಕ, ಚೈತನ್ಯ ಮಕ್ಕಳಿಂದ ಗೋಕುಲ್ ನಿರ್ಗಮನ ಎಂಬ ಸಂಗೀತ ನಾಟಕ ನಡೆಯಿತು. ವಿಶೇಷ ಕಾರ್ಯಕ್ರಮವಾಗಿ ಪುತ್ತೂರು ತಾಲೂಕಿನ ಶಿಕ್ಷಕರ ಬಳಗದಿಂದ ಭಾರ್ಗವ ವಿಜಯ ಯಕ್ಷಗಾನ ಕಾರ್ಯಕ್ರಮ ನಡೆಯಿತು.
ಹಿರಿಯ ವಿದ್ಯಾರ್ಥಿಗಳಿಗೆ ಅಭಿನಂದನೆ :
ಕಲಿಕೆಯಲ್ಲಿ ಉನ್ನತ ಸಾಧನೆ ಮಾಡುತ್ತಿರುವ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಫಾತಿಮತ್ ಸಾನಿದಾ ಕೂರ್ನಡ್ಕ, ಫಾತಿಮತ್ ಸಾನಿದಾ ಸಂಜಯನಗರ, ಶ್ವೇತಾ ಸಂಜಯನಗರ, ದಿವ್ಯಾ ಮರೀಲು, ಯಶ್ವಿತಾ ಪಳಿಕೆ, ವಹಿದಾಬಾನು ಸಂಜಯನಗರ, ದೀಪ್ತಿ ಪಳಿಕೆ, ಅಶ್ವಿತಾ ಸಂಜಯನಗರ, ವಂದನಾ ಕೆಮ್ಮಿಂಜೆರವರನ್ನು ಅಭಿನಂದಿಸಲಾಯಿತು.
ಶಿಕ್ಷಕಿಯರಿಗೆ ಸನ್ಮಾನ:
ಶಾಲೆಯಲ್ಲಿ 9 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕಿ ಸಿಸಿಲಿಯಾ ವಿನ್ಸೆಂಟ್ ಲೋಬೋ, ಸುನಿಲಾ ಜಗನ್ನಾಥ್‌ರವರನ್ನು ಸನ್ಮಾನಿಸಲಾಯಿತು.