ಪಂಜಳ ಅಂಗನವಾಡಿ ಕೇಂದ್ರದಲ್ಲಿ ಬಾಲಮೇಳ ಕಾರ್ಯಕ್ರಮ

0

ಕಲಿಕೆಯ ಮೊದಲ ಹೆಜ್ಜೆಯೇ ಅಂಗನವಾಡಿ ಕೇಂದ್ರಗಳು: ಅಶೋಕ್ ರೈ

ಪುತ್ತೂರು: ಮಕ್ಕಳ ಕಲಿಕೆಯ ಮೊದಲ ಹೆಜ್ಜೆಯೇ ಅಂಗನವಾಡಿ ಕೇಂದ್ರಗಳು. ಈ ಕೇಂದ್ರಗಳಲ್ಲಿ ಮಕ್ಕಳಿಗೆ ಕಲಿಕೆಯ ಜೊತೆಗೆ ಮನೆಯ ಎಲ್ಲಾ ವಾತಾವರಣಗಳು ಅಂಗನವಾಡಿ ಕೇಂದ್ರಗಳಲ್ಲಿ ಕಾಣಲು ಸಾಧ್ಯವಾಗುತ್ತದೆ ಎಂದು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಜ.6 ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು, ಗ್ರಾಮ ಪಂಚಾಯತ್ ನರಿಮೊಗರು, ಬಾಲ ವಿಕಾಸ ಸಮಿತಿ, ಸ್ತ್ರೀಶಕ್ತಿ ಗುಂಪುಗಳು, ಅಂಗನವಾಡಿ ಕೇಂದ್ರ ಪಂಜಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಮುಂಡೂರು ಗ್ರಾಮದ ಪಂಜಳ ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲ ಮೇಳದಲ್ಲಿ ಮಾತನಾಡಿದರು. ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಇಲ್ಲಿ ನೀಡಲಾಗುತ್ತಿದ್ದು ಮಕ್ಕಳನ್ನು ಅಂಗನವಾಡಿಗೆ ದಾಖಲಿಸುವಂತೆ ಶಾಸಕರು ಮನವಿ ಮಾಡಿದರು. ರಾಜ್ಯ ಸರಕಾರ ಅಂಗನವಾಡಿ ಮಕ್ಕಳಿಂದ ಹಿಡಿದು ಮನೆಯಲ್ಲಿರುವ ಗೃಹಿಣಿಯರಿಗೂ ಸಹಿತ ಸರಕಾರದಿಂದ ವಿವಿಧ ಸೌಲಭ್ಯಗಳು ದೊರೆಯುತ್ತಿದ್ದು , ಯಾರೂ ಹಸಿವಿನಿಂದ ಇರಬಾರದು ಎಂಬ ಏಕೈಕ ಉದ್ದೇಶದಿಂದ ಸರಕಾರ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಿದರು.

ಅಂಗನವಾಡಿ ಪುಟಾಣಿ ಸಾನಿಧ್ಯ ಹಾಗೂ ಗ್ರಾಮ ಪಂಚಾಯತ್ ಸದಸ್ಯ ನವೀನ್ ರೈ ಶಿಬರರವರು ಜೊತೆಗೂಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ನವೀನ್ ರೈ ಶಿಬರರವರು ಮಾತನಾಡಿ, ಮಕ್ಕಳಿರುವಾಗಲೇ ಸಂಸ್ಕೃತಿಯನ್ನು ಕಲಿಸಿದಾಗ ಅದು ಭವ್ಯ ಭಾರತಕ್ಕೆ ನಾಂದಿ ಹಾಡುತ್ತದೆ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಪಾಲು ಸಿಗುವಂತಾಗುತ್ತದೆ. ಅದು ಅಂಗನವಾಡಿ ಕೇಂದ್ರದಿಂದ ಮೊದಲ್ಗೊಳ್ಳಬೇಕು ಎಂದರು.
ನ್ಯಾಯವಾದಿ ಸಾಯಿರಾ ಬಾನು ಮಾತನಾಡಿ, ತಾಲೂಕಿನ ಎಲ್ಲಾ ಅಂಗನವಾಡಿಗಳಿಗೆ ಪಂಜಳ ಅಂಗನವಾಡಿ ಮಾದರಿ ಎನಿಸಿದೆ. ಈ ಭಾಗದ ಹೆತ್ತವರು ಅಂಗನವಾಡಿ ಕೇಂದ್ರಕ್ಕೆ ಆರೋಗ್ಯಕರ ಸ್ಪಂದನೆ ಸಿಗುತ್ತಿರುವುದು ಶ್ಲಾಘನೀಯ. ಮಕ್ಕಳು ಇಂದಿನ ಪ್ರಜೆ. ಮಕ್ಕಳು ಕುಟುಂಬದ, ಸಮಾಜದ,, ಹೆತ್ತವರ ಆಸ್ತಿಯಲ್ಲ, ಅವರು ದೇಶದ ಆಸ್ತಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಮಾನವತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಗಬೇಕು ಅಲ್ಲದೆ ಮಕ್ಕಳ ಕಾನೂನಿನ ಮಹತ್ವದ ಬಗ್ಗೆ ಹೇಳಿದರು.

ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರಮ್ಲತ್, ನರಿಮೊಗರು ಗ್ರಾಮ ಪಂಚಾಯತ್ ಸದಸ್ಯೆ ಮಲ್ಲಿಕಾ ಲತಾ ರೈ, ಗ್ರಾಮ ಪಂಚಾಯತ್ ಸದಸ್ಯ ಸುಧಾಕರ್ ಕುಲಾಲ್, ಮೇಲ್ವಿಚಾರಕಿ ನಾಗರತ್ನ, ಪಂಜಳ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ಸದಸ್ಯ ಮಂಜುನಾಥ ಶೇಖ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಜಯರಾಮ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಪುಟಾಣಿ ಮಕ್ಕಳು ಪ್ರಾರ್ಥಿಸಿದರು. ಅಂಗನವಾಡಿ ಕೇಂದ್ರದ ಶಿಕ್ಷಕಿ ವೃಂದಾ ಸ್ವಾಗತಿಸಿದರು. ಚೇತನ್ ಕುಮಾರ್ ಮೊಟ್ಟೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪುಟಾಣಿ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ನೆರವೇರಿತು.

ಪುಟಾಣಿ ಸಾನಿಧ್ಯರವರಿಂದ ಉದ್ಘಾಟನೆ ಭಾಷಣ..
ಚಾಚಾ ನೆಹರುರವರ ಜನ್ಮ ದಿನಾಚರಣೆಯನ್ನು ನಮ್ಮ ದಿನ ಎಂದು ಆಚರಿಸಲಾಗುತ್ತದೆ. ಚಾಚಾರವರಿಗೆ ಮಕ್ಕಳೆಂದರೆ ಬಹಳ ಪ್ರೀತಿ, ಮಕ್ಕಳಿಗೆ ಚಾಚಾ ನೆಹರುರವರೆಂದರೆ ಬಹಳ ಪ್ರೀತಿ. ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ನಮ್ಮನ್ನು ಪ್ರೀತಿಸಿ, ಹರಸಿ, ನೆಲೆಸುವಂತೆ ಮಾಡಿದ್ದಾರೆ‌.
-ಪುಟಾಣಿ ಸಾನಿಧ್ಯ, ಪಂಜಳ ಅಂಗನವಾಡಿ ಕೇಂದ್ರ


ವೇದಿಕೆಯಲ್ಲಿ ವಲಯ ಮೇಲ್ವಿಚಾರಕಿ ನಾಗರತ್ನ,ಬಾಲ ವಿಕಾಸ ಸಮಿತಿ ಅಧ್ಯಕ್ಷೆ ರಮ್ಲತ್,ನ್ಯಾಯವಾದಿ ಸಾಹಿರಾ, ಬಾಲ‌ವಿಜಾಸ ಸಮಿತಿ ಸದಸ್ಯ ಮಂಜುನಾಥ ಶೇಖ ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here