ಉಪ್ಪಿನಂಗಡಿ: ಗಿಡ-ಗಂಟಿಗಳ ತೆರವಿಗೆ ಮನವಿ ರಾಜಕೀಯ ಪ್ರೇರಿತ: ಸುಜಾತ ರೈ

0

ಉಪ್ಪಿನಂಗಡಿ: ಆದರ್ಶನಗರದ ಅಂಗನವಾಡಿ ಹಾಗೂ ಇತರ ಕಡೆಗಳಲ್ಲಿ ಗಿಡ-ಗಂಟಿ ಬೆಳೆದಿದೆ ಎಂದು ಮನವಿ ಮಾಡಿರುವುದು ರಾಜಕೀಯ ಪ್ರೇರಿತವಾಗಿದ್ದು, ಇಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಗಿಡ-ಗಂಟಿಗಳ ತೆರವು ಕಾರ್ಯವನ್ನು ಗ್ರಾ.ಪಂ. ನಡೆಸಿದೆ ಎಂದು 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ತಿಳಿಸಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅಂಗನವಾಡಿ ಬಳಿಯ ಆದರ್ಶನಗರ ನಿವಾಸಿಗಳು 2023ರ ಅಕ್ಟೋಬರ್‌ನಲ್ಲಿ ಆದರ್ಶನಗರದ ವಸತಿ ಗೃಹದಿಂದ ಅಂಗನವಾಡಿಯವರೆಗೆ ರಸ್ತೆ ಬದಿಯ ಗಿಡ-ಗಂಟಿಗಳನ್ನು ತೆರವು ಮಾಡಲು ಮನವಿ ಸಲ್ಲಿಸಿದ್ದರು. ಅದಕ್ಕೆ ಗ್ರಾ.ಪಂ.ನ ಆಡಳಿತ ಮಂಡಳಿ ಸ್ಪಂದಿಸಿ ಅಕ್ಟೋಬರ್ 19ರಿಂದ 23ರವರೆಗೆ ಆದರ್ಶನಗರ ಕಾಲನಿಗೆ ಸಂಬಂಧಪಟ್ಟ ಗಿಡ-ಗಂಟಿಗಳ ತೆರವು ಕೆಲಸ ನಡೆಸಿದೆ. ಈ ಬಗ್ಗೆ ಜ.13ರಂದು ನಾನು ಪರಿಶೀಲನೆ ನಡೆಸಿದ್ದು, ಅಲ್ಲಿನ ಸ್ಥಳೀಯರು ಕೂಡಾ ಕಳೆದ ಅಕ್ಟೋಬರ್‌ನಲ್ಲಿ ಗ್ರಾ.ಪಂ. ರಸ್ತೆ ಬದಿಯ ಹುಲ್ಲು ಕಟಾವು ಮಾಡಿರುವುದನ್ನು ತಿಳಿಸಿದ್ದಾರೆ. ಬಳಿಕ ಅನಿರೀಕ್ಷಿತ ಮಳೆಯ ಕಾರಣ ಹುಲ್ಲು, ಗಿಡ-ಗಂಟಿಗಳು ಬೆಳೆದು ಶುಚಿತ್ವಕ್ಕೆ ಅಡೆತಡೆಯುಂಟಾಗಿತ್ತು. ಆದರೆ 2024ರ ಜನವರಿ 9ರಂದು ಗ್ರಾಮಸ್ಥರು ಮತ್ತೆ ಹುಲ್ಲು ಕಟಾವು ಮಾಡುವ ಬಗ್ಗೆ ಮನವಿ ಸಲ್ಲಿಸಿದ್ದು, ಪಂಚಾಯತ್ ಈ ವ್ಯವಸ್ಥೆಗೆ ಮುಂದಾಗದೆ ಇರುವುದು ವಿಪರ್ಯಾಸ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಆದರೆ ಇದೊಂದು ರಾಜಕೀಯ ಪ್ರೇರಿತ ದೂರು ಆಗಿದ್ದು, ಈ ದೂರುದಾರರು ರಾಜಕೀಯ ಪ್ರೇರಿತರಾಗಿ ಹಲವು ಸಮಯದಿಂದ ಈ ರೀತಿ ಇದ್ದಾರೆ. ಆದ್ದರಿಂದ ಪಂಚಾಯತ್ ಅಭಿವೃದ್ಧಿಯನ್ನು ಸಹಿಸದೇ ಇವರು ಈ ಮನವಿ ಸಲ್ಲಿಸುವ ಮೂಲಕ ರಾಜಕೀಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


ಆದರ್ಶನಗರ ಅಂಗನವಾಡಿಯ ಸುತ್ತ ಗಿಡ-ಗಂಟಿಗಳು ತುಂಬಿಕೊಂಡಿರುವುದರ ಬಗ್ಗೆ ಜ.9ರಂದು ಗ್ರಾಮಸ್ಥರು ಮನವಿ ಮಾಡಿದ್ದರು. ಅಲ್ಲಿನ ನೈಜತೆಯ ಬಗ್ಗೆ ಪತ್ರಿಕೆಯೂ ವರದಿ ಮಾಡಿದ್ದು, ಪುಟಾಣಿ ಮಕ್ಕಳಿರುವ ಅಂಗನವಾಡಿ ಆವರಣದ ಹೊರಗೆ ಗಿಡ-ಗಂಟಿಗಳು ಬೆಳೆದಿರುವುದರಿಂದ ಹಾವು- ಚೇಳುಗಳ ಭೀತಿಯ ಸಾಧ್ಯತೆಯ ಬಗ್ಗೆಯೂ ತಿಳಿಸಿತ್ತು. ವರದಿ ಪ್ರಕಟವಾದ ಬೆನ್ನಲ್ಲೇ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯವರು ಕೆಲಸದವರ ಮೂಲಕ ಅಂಗನವಾಡಿ ಆವರಣ ಹೊರಗಿನ ಹುಲ್ಲು, ಗಿಡ-ಗಂಟಿಗಳನ್ನು ತೆರವುಗೊಳಿಸಿದ್ದರು.

LEAVE A REPLY

Please enter your comment!
Please enter your name here