ಶ್ರೀರಾಮ ಯುಗಾವತರಣ – ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮೂಡಿಬಂದ ಶ್ರೀರಾಮ ಕಥಾವೈಭವ

0

ಹಿಂದುವಾಗಿ ಹುಟ್ಟಿರುವುದು ಜನ್ಮಜನ್ಮಾಂತರದ ಪುಣ್ಯದ ಫಲ- ಡಾ.ಪ್ರಭಾಕರ ಭಟ್
ರಾಮನ ಬದುಕು ನಮ್ಮದಾಗಲಿ – ಪ್ರಕಾಶ್ ಶೆಟ್ಟಿ
ಅದಾನಿ ಗ್ರೂಪ್‌ನಿಂದ ಶಿಕ್ಷಣ, ಅನ್ನದಾನಕ್ಕೆ ಅನುದಾನ – ಕಿಶೋರ್ ಆಳ್ವ
ಸಂಘದಲ್ಲಿ ಅಸ್ಪೃಶ್ಯತೆಯನ್ನು ಕಂಡಿಲ್ಲ – ರವೀಶ್ ಪಡುಮಲೆ
ಪ್ರತೀ ಮನೆಯಲ್ಲಿ ಧಾರ್ಮಿಕ ಚಟುವಟಿಕೆ ನಡೆಯಬೇಕು – ಶಶಿಧರ್ ಶೆಟ್ಟಿ
ರಾವಣ ಸಂತಾನ ಇಂದೂ ಟೀಕೆ ಮಾಡುತ್ತಿದೆ – ನಳಿನ್ ಕುಮಾರ್ ಕಟೀಲ್
ಕರಸೇವಕರಿಗೆ ಗೌರವ ಸೂಚಕ ಶ್ರೀರಾಮ ಕಥಾವೈಭವ – ಕಿಶೋರ್ ಬೊಟ್ಯಾಡಿ

ಪುತ್ತೂರು: ಅಯೋಧ್ಯಾಧಿಪತಿ, ಹಿಂದೂಗಳ ಆರಾಧ್ಯಮೂರ್ತಿ ಶ್ರೀರಾಮ ದೇವರ ರಾಮ ಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಪುತ್ತೂರಿನಲ್ಲಿ ವೈಭವದ ಅಯೋಧ್ಯೆಯ ಸಮಗ್ರ ಕಥನ ಬಿಂಬಿಸುವ ಶ್ರೀರಾಮ ಕಥಾ ವೈಭವ ದೊಂದಿಗೆ ಶ್ರೀರಾಮ ಯುಗಾವತರಣ ಮತ್ತೊಮ್ಮೆ ಮರುಕಳಿಸಿತು. ಪುಟಾಣಿ ರಾಮ ಲಕ್ಷ್ಮಣ ವೇಷಧಾರಿಗಳು, ರಾಮನಾಮ ಸ್ಮರಣೆ, ರಾಮಾವತರಾದ ಸಮಗ್ರ ಕಥನ ವಿದ್ಯಾರ್ಥಿ ಸಮೂಹದಿಂದ ಮೂಡಿಬಂದು ತೆಂಕಿಲ ವಿವೇಕನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಸಂಪನ್ನಗೊಂಡಿತು.

ಹಿಂದೂವಾಗಿ ಹುಟ್ಟಿರುವುದು ಜನ್ಮಜನ್ಮಾಂತರದ ಪುಣ್ಯದ ಫಲ – ಡಾ. ಪ್ರಭಾಕರ ಭಟ್
ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕರವರು ಮಾತನಾಡಿ, ಮನುಷ್ಯ ಬದುಕಿನ ಎಲ್ಲಾ ಸಂಬಂಧಗಳಲ್ಲಿ ಶ್ರೀರಾಮ ಆದರ್ಶನಾಗಿ ಕಂಡುಬರುತ್ತಾನೆ. ಶ್ರೀರಾಮ ನಮ್ಮೆಲ್ಲರ ಧರ್ಮ, ಆತ್ಮವಾಗಿದೆ. 1992ರಲ್ಲಿ ಈ ದೇಶದ ಎಲ್ಲಾ ಭಕ್ತರು ಧಾವಿಸಿ, ಹಿಂದು ಸಮಾಜದ ಅಪಮಾನ ಸಂಕೇತವಾಗಿದ್ದ ಬಾಬರಿ ಸ್ಟ್ರಕ್ಚರ್ ನ್ನು ಕೆಡವಿ ಹಾಕಿದರು. ಇದು ಹಿಂದೂ ಸಮಾಜದ ಎದ್ದುನಿಂತರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ. ಚಿತ್ರಹಿಂಸೆ, ಬಲಿದಾನ, ಹೋರಾಟಗಳೊಂದಿಗೆ ರಾಮಮಂದಿರ ನಿರ್ಮಾಣದ ಕನಸು ಹಿಂದೂ ಸಮಾಜದ ಬದುಕಿನ ಆಯಾಮದಲ್ಲಿ ತಿರುವು ಪಡೆಯಿತು. ಡೋಂಗಿ ಜಾತ್ಯಾತೀತತೆ ಹೆಸರಿನಲ್ಲಿ ಕಾಂಗ್ರೆಸ್ ರಾಮ ಮಂದಿರ ನಿರ್ಮಾಣ ಮಾಡಲು ಬಿಡಲಿಲ್ಲ ಎಂದ ಅವರು ಮೋದಿ ಮಾಡುತ್ತಿರುವುದು ರಾಜಕೀಯವಲ್ಲ. ಇದರಲ್ಲಿ ರಾಜಕೀಯವಿಲ್ಲ. ರಾಮನಿಗೆ ಅಸ್ಪೃಶ್ಯತೆಯಿಲ್ಲ. ದೇಶದ ಜನತೆ ರಾಮ ಪ್ರಾಣಪ್ರತಿಷ್ಠಾಪನೆಗಾಗಿ ಕಾಯುತ್ತಿದೆ. ಈ ಮೂಲಕ ರಾಮರಾಜ್ಯದ ಪ್ರತಿಷ್ಠಾಪನೆಯೂ ಆಗುತ್ತಿದೆ. ಹಿಂದೂವಾಗಿ ಹುಟ್ಟಿರುವುದು ಜನ್ಮಜನ್ಮಾಂತರದ ಪುಣ್ಯದ ಫಲ ಎಂದರು. ಜಗತ್ತಿನಲ್ಲಿ ಗುರುವಿನ ಸ್ಥಾನ ಪಡೆಯುವ ಆಶಯ ಈಡೇರಲಿ. ರಾಮರಾಜ್ಯ ನಿರ್ಮಾಣವಾಗಲಿ’ ಎಂದು ಪ್ರಭಾಕರ ಭಟ್ ಹೇಳಿದರು.

ರಾಮನ ಬದುಕು ನಮ್ಮದಾಗಲಿ – ಪ್ರಕಾಶ್ ಶೆಟ್ಟಿ
ಮುಖ್ಯ ಅತಿಥಿ ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿಯವರು ಮಾತನಾಡಿ, ರಾಮಾಯಣ, ಮಹಾಭಾರತವನ್ನು ದೇಶದಲ್ಲಿ ಅರಿಯದವರು ಯಾರೂ ಇಲ್ಲ. ಈ ಗ್ರಂಥಗಳು ನಮ್ಮ ಬದುಕಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಶ್ರೀರಾಮ ಶಕ್ತಿ ಸ್ವರೂಪ, ಆಂಜನೇಯ ಭಕ್ತಿಯ ಸ್ವರೂಪ, ಶ್ರೀಕೃಷ್ಣ ಯುಕ್ತಿಯ ಸ್ವರೂಪ, ಕಲಿಯುಗದ ಮಂತ್ರಾಲಯ ಮುಕ್ತಿಯ ಸ್ವರೂಪವಾಗಿದೆ. ಹಣತೆ, ತೈಲ, ದೀಪವಾಗಿ ರಾಮ ಪ್ರತಿಷ್ಠಾಪನೆಯಲ್ಲಿ ಎಲ್ಲರೂ ಪಾಲ್ಗೊಳ್ಳೋಣ. ಎಲ್ಲರ ಮನೆ ಪ್ರಕಾಶಮಾನವಾಗಿ ಬೆಳಗಲಿ. ನಿಮ್ಮೆಲ್ಲರ ಬದುಕು ರಾಮನ ಬದುಕಾಗಲಿ. ರಾಮಜನ್ಮಭೂಮಿಗೆ ಪ್ರತಿಷ್ಠಾಪನೆಯ ದಿನ ಹೋಗಬೇಕಿತ್ತು. ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಮುಂದಿನ ದಿನಗಳಲ್ಲಿ ನಾವೆಲ್ಲಾ ಅಯೋಧ್ಯೆಗೆ ಹೋಗಿ ಶ್ರೀರಾಮ ದರ್ಶನ ಮಾಡುವ ಭಾಗ್ಯ ನಮ್ಮೆಲ್ಲರಿಗೂ ದೊರಕಲಿ ಎಂದರು.

ಅದಾನಿ ಗ್ರೂಪ್‌ನಿಂದ ಶಿಕ್ಷಣ, ಅನ್ನದಾನಕ್ಕೆ ಅನುದಾನ – ಕಿಶೋರ್ ಆಳ್ವ
ಅದಾನಿ ಗ್ರೂಪ್ ಕರ್ನಾಟಕದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕಿಶೋರ್ ಆಳ್ವರವರು ಮಾತನಾಡಿ, 2 ಸಾವಿರ ಕರಸೇವಕರ ಬಲಿದಾನವಾದ ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಭಾವವಿದೆ. ರಾಮಾಯಣ, ಭಗವದ್ಗೀತೆ ಅತ್ಯಂತ ಶ್ರೀಮಂತ ಪರಂಪರೆಯನ್ನು ಹೊಂದಿರುವ ಕೃತಿಗಳಾಗಿವೆ. ಅಂತಹ ಹಿಂದು ರಾಷ್ಟ್ರವಾದ ಭಾರತದ ಅದಾನಿ ಗ್ರೂಪ್ ಇಂದು ಜಗತ್ತಿನ ನಂ.1 ಉದ್ಯಮ ಕ್ಷೇತ್ರವಾಗಿ ಬೆಳೆದುಬಂದಿದೆ. ಅದಾನಿ ಗ್ರೂಪ್‌ನ ಅನುದಾನದಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲಕ ಶಿಕ್ಷಣ ಮತ್ತು ಅನ್ನದಾನಕ್ಕೆ ಮುಂದಿನ ದಿನಗಳಲ್ಲಿ ವ್ಯವಸ್ಥೆಯಾಗಬೇಕು ಎಂದರು.

ಸಂಘದಲ್ಲಿ ಅಸ್ಪೃಶ್ಯತೆಯನ್ನು ಕಂಡಿಲ್ಲ – ರವೀಶ್ ಪಡುಮಲೆ
ದೈವನರ್ತಕ ಡಾ. ರವೀಶ್ ಪಡುಮಲೆಯವರು ಮಾತನಾಡಿ, ಜಾತೀಯತೆ, ಅಸ್ಪೃಶ್ಯತೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ನಾನು ಕಂಡಿಲ್ಲ. ಶೋಷಿತ ವರ್ಗದವನಾದರೂ ನನ್ನನ್ನು ಕೈ ಹಿಡಿದು ನಡೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ನನಗೆ ಹೆಮ್ಮೆಯಿದೆ. ನವಭಾರತ ಯುಗ ಆರಂಭವಾಗಿದೆ. ಸನಾತನ ಹಿಂದೂ ಧರ್ಮದ ಧರ್ಮಗ್ರಂಥಗಳನ್ನು ಓದುವ ಅವಕಾಶ ನಮ್ಮ ಶಿಕ್ಷಣದಲ್ಲಿ ದೊರೆತಿಲ್ಲವಾದರೂ ಇಂದು ಶ್ರೀರಾಮ ಕಥಾವೈಭವದ ಮೂಲಕ ರಾಮಾಯಣ ಚಿತ್ರಣ ದೊರೆತಿದೆ. ಶಬರಿಯ ಕೈಯಲ್ಲಿ ಹಣ್ಣು ತಿಂದ ರಾಮ ಜಾತ್ಯಾತೀತತೆಗೆ ಮಾದರಿಯಾಗಿದ್ದಾರೆ. ನಮ್ಮ ಧರ್ಮಗ್ರಂಥಗಳಲ್ಲಿ ಎಲ್ಲಿಯೂ ಅಸ್ಪೃಶ್ಯತೆ, ಜಾತೀಯತೆಯನ್ನು ಬರೆದಿಲ್ಲ. ಅಸಮಾನತೆ ಮನುಷ್ಯ ಉಂಟುಮಾಡಿದ ಪರಿಕಲ್ಪನೆಯಾಗಿದೆ ಎಂದರು.


ಪ್ರತೀ ಮನೆಯಲ್ಲಿ ಧಾರ್ಮಿಕ ಚಟುವಟಿಕೆ ನಡೆಯಬೇಕು – ಶಶಿಧರ್ ಶೆಟ್ಟಿ
ತುಳು ಸಂಘ ಬರೋಡಾ ಅಧ್ಯಕ್ಷ, ಉದ್ಯಮಿ ಶಶಿಧರ್ ಶೆಟ್ಟಿಯವರು ಮಾತನಾಡಿ, ಪ್ರತೀ ಮನೆಯಲ್ಲಿ ಹಿಂದೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದರೆ ರಾಮರಾಜ್ಯ ನಿರ್ಮಾಣವಾಗಲಿದೆ. ಮುಂದಿನ ಪೀಳಿಗೆಯಾದ ಮಕ್ಕಳಲ್ಲಿ ಧಾರ್ಮಿಕ ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಅಳವಡಿಸುವ ಕಾರ್ಯ ಮಾಡೋಣ ಎಂದರು.

ಪ್ರತೀವರ್ಷ ಎರಡು ದೀಪಾವಳಿ ಆಚರಿಸೋಣ – ಕಿರಣ್‌ಚಂದ್ರ ಡಿ.
ಬೆಂಗಳೂರಿನ ಉದ್ಯಮಿ ಕಿರಣ್‌ಚಂದ್ರ ಡಿ. ಯವರು ಮಾತನಾಡಿ, ಒಗ್ಗಟ್ಟಿನ ಪ್ರತೀಕವಾದ ಸನಾತನ ಸಂಸ್ಕೃತಿಯ ಧರ್ಮದಲ್ಲಿ ಹುಟ್ಟಿ ಬಂದ ನಾವು ಶ್ರೀರಾಮ ಆದರ್ಶದಂತೆ ಬಾಳಬೇಕು. ಈ ಕಾರ್ಯಕ್ರಮ ಆಯೋಜನೆ ಶ್ಲಾಘನೀಯವಾದುದು. ಪ್ರಭು ಶ್ರೀರಾಮಚಂದ್ರನ ಪಟ್ಟಾಭಿಷೇಕದ ಪುಣ್ಯದಿನವನ್ನು ಪ್ರತೀವರ್ಷ ಎರಡನೇ ದೀಪಾವಳಿಯಾಗಿ ಆಚರಿಸೋಣ ಎಂದರು.

ರಾವಣ ಸಂತಾನ ಇಂದೂ ಟೀಕೆ ಮಾಡುತ್ತಿದೆ – ನಳಿನ್ ಕುಮಾರ್ ಕಟೀಲ್
ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ 500 ವರ್ಷಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ರಾಷ್ಟ್ರಮಂದಿರವಾಗಿ ಎದ್ದುನಿಲ್ಲಲಿದೆ. ಅಯೋಧ್ಯೆಯ ಹೋರಾಟದ ಸಂದರ್ಭದಲ್ಲಿ ಟೀಕೆ ಮಾಡಿದ ರಾವಣ ಸಂತಾನ ಇಂದೂ ಕೂಡಾ ಟೀಕೆ ಮಾಡುತ್ತಿದೆ. ಟೀಕೆಗಳಿಗೆ ಉತ್ತರ ನೀಡುವ ಕಾರ್ಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

ವೇದಿಕೆಯಲ್ಲಿ ಮುಂಬೈ ಬಿಜೆಪಿ ದಕ್ಷಿಣ ಪ್ರಧಾನ ಕಾರ್ಯದರ್ಶಿ ವಿಜಯ ಶೆಟ್ಟಿ ಪಣಕಜೆ, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಉಪಸ್ಥಿತರಿದ್ದರು.

ಕರಸೇವಕರಿಗೆ ಗೌರವ ಸೂಚಕ ಶ್ರೀರಾಮ ಕಥಾವೈಭವ – ಕಿಶೋರ್ ಬೊಟ್ಯಾಡಿ
ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಶ್ರೀರಾಮ ಕಥಾವೈಭವ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕಿಶೋರ್ ಕುಮಾರ್ ಬೊಟ್ಯಾಡಿಯವರು ಮಾತನಾಡಿ, ದೇವರ ಸೇವೆಯ ಭಾಗ್ಯ. ಮತಾಂಧ ಬಾಬರ ಶ್ರೀರಾಮ ಮಂದಿರವನ್ನು ತುಂಡುಮಾಡಿ ಮಸೀದಿ ನಿರ್ಮಾಣ ಮಾಡುತ್ತಾನೆ. 495 ವರ್ಷಗಳ ಕಾಲ ಹಿಂದು ಸಮಾಜ ಆ ಕಳಂಕವನ್ನು ಹೋಗಲಾಡಿಸಲು ನೂರಾರು ಹೋರಾಟ, ಲಕ್ಷಾಂತರ ಕಾರ್ಯಕರ್ತರ ಬಲಿದಾನ, ಮಸೀದಿಯ ಧ್ವಂಸ, ದಕ್ಷಿಣ ಕನ್ನಡದಿಂದ ಡಾ. ಪ್ರಭಾಕರ ಭಟ್‌ರವರ ನೇತೃತ್ವ, ತಾತ್ಕಾಲಿಕ ರಾಮಮಂದಿರ ನಿರ್ಮಾಣ, ಪ್ರಧಾನಿ ಮೋದಿಯ ನಾಯಕತ್ವ ಮತ್ತು ಅವರ ನೇತೃತ್ವದಲ್ಲಿ ಮತ್ತೆ ರಾಮಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಈ ಪುಣ್ಯ ಕಾರ್ಯವನ್ನು ಕಾಣುವ ಯೋಗ ನಮ್ಮ ಪಾಲಿಗೆ ಬಂದಿದೆ. ಕರಸೇವಕರ ಬಲಿದಾನ ಮತ್ತು ಈಗ ಇರುವ ಕರಸೇವಕರಿಗೆ ಗೌರವ ಸೂಚಕವಾಗಿ ಶ್ರೀರಾಮ ಕಥಾವೈಭವ ಆಯೋಜಿಸಲಾಗಿದೆ ಎಂದು ಹೇಳಿದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಶ್ವೇತಾ, ಸುನಿತಾ, ಸೌಮ್ಯ ಗಣಪತಿ ಶ್ಲೋಕ ಹಾಡಿದರು. ಅತಿಥಿಗಳಿಗೆ ತಾಂಬೂಲ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀರಾಮ ಕಥಾವೈಭವ ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದಾಮೋದರ ಪಾಟಾಳಿ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಶಿಕ್ಷಕಿ ಗೀತಾ ಬಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಭಾರತಮಾತೆ, ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವೈಭವದ ಅಯೋಧ್ಯೆಯ ಸಮಗ್ರ ಕಥನವಾದ ಶ್ರೀರಾಮ ಕಥಾ ವೈಭವ ಮೂಡಿಬಂತು. ಸಾವಿರಾರು ಮಂದಿ ಮೈದಾನದಲ್ಲಿ ಸಮಾವೇಶಗೊಂಡು ಕಾರ್ಯಕ್ರಮ ವೀಕ್ಷಿಸಿದರು.

LEAVE A REPLY

Please enter your comment!
Please enter your name here