ಆಲಂಕಾರು: ಆಲಂಕಾರು ಗ್ರಾಮ ಪಂಚಾಯತ್‌ನ 2023-24ನೇ ಸಾಲಿನ ವಿಕಲಚೇತನರ ಸಮನ್ವಯ ಗ್ರಾಮಸಭೆ ಜ.19ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಸುಶೀಲ ಅವರು ಮಾತನಾಡಿ, ವಿಕಲಚೇತನರು ಸಮಾಜದಲ್ಲಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಮಾನ ಅವಕಾಶಗಳನ್ನು ಪಡೆದು ಸರ್ಕಾರದ ವಿವಿಧ ಸೌಲಭ್ಯಗಳನ್ನು ತಮ್ಮ ಪುನರ್ವಸತಿ ಕಾರ್ಯಕರ್ತರ ಮೂಲಕ ಪಡೆದುಕೊಳ್ಳಿ ಎಂದರು. ಮಾರ್ಗದರ್ಶಿ ಅಧಿಕಾರಿಯಾಗಿದ್ದ ಕಡಬ ತಾಲೂಕು ಪಂಚಾಯತ್‌ನ ವಿಕಲಚೇತನರ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತೆ ಅಕ್ಷತಾ ಅವರು ಆರೋಗ್ಯ ವಿಮಾ ಯೋಜನೆ, ಶೇ.5ರ ನಿಧಿ, ಸ್ವಯಂ ಉದ್ಯೋಗಕ್ಕಾಗಿ ಆಧಾರ್ ಯೋಜನೆ, ಸೆಲ್ಕೋ ಸೋಲಾರ್ ಸಬ್ಸಿಡಿ ಹಾಗೂ ಇನ್ನಿತರ ಸೌಲಭ್ಯಗಳ ಮಾಹಿತಿ ನೀಡಿದರು. ಗ್ರಾಮ ಆಡಳಿತಾಧಿಕಾರಿ ಪ್ರೇಮಲತಾ ಅವರು ಕಂದಾಯ ಇಲಾಖೆಯ ಪಿಂಚಣಿ ಸೌಲಭ್ಯಗಳ ಮಾಹಿತಿ ನೀಡಿದರು. ಆರೋಗ್ಯ ಸಮುದಾಯ ಅಧಿಕಾರಿ ಬೆನ್ಸಿರವರು ಆರೋಗ್ಯ ಇಲಾಖೆಯ ಸೌಲಭ್ಯ ಮತ್ತು ಆಯುಷ್ಮಾನ್ ಕಾರ್ಡ್‌ನ ಕುರಿತು ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ, ಗ್ರಾ.ಪಂ.ಉಪಾಧ್ಯಕ್ಷ ರವಿ ಪೂಜಾರಿ, ಸದಸ್ಯರಾದ ವಾರಿಜ, ರೂಪಶ್ರೀ, ಶಾರದಾ, ಆರೋಗ್ಯ ಇಲಾಖೆಯ ಸರೋಜಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಕಲಚೇತನರ ಗ್ರಾಮಸಭೆಯ ಪ್ರಯುಕ್ತ ಗ್ರಂಥಾಲಯ ಮೇಲ್ವಿಚಾರಕಿ ಕಮಲ ಅವರು ನಡೆಸಿಕೊಟ್ಟ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿಕಲಚೇತನರಾದ ಮೊಹಮ್ಮದ್ ಸೈಯ್ಯದ್ ಅಫ್ರಿದಿ ಹಾಗೂ ಮೋಹಿತ್‌ಕುಮಾರ್ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಆಶಾ ಕಾರ್ಯಕರ್ತೆಯರಾದ ತಾರಾ ಕೇಪುಳು, ಡೀಕಮ್ಮ, ಮೀನಾಕ್ಷಿ, ಪ್ರೇಮಾ, ವಿಕಲಚೇತನರು, ಅವರ ಪೋಷಕರು ಉಪಸ್ಥಿತರಿದ್ದರು.
ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮೋನಪ್ಪರವರು ವರದಿ ವಾಚಿಸಿದರು. ಗ್ರಾ.ಪಂ.ಕಾರ್ಯದರ್ಶಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗ್ರಾಮಸಭೆಯ ಬಳಿಕ ಆಯುಷ್ಮಾನ್‌ಕಾರ್ಡ್ ನೋಂದಣಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಪಂಚಾಯತ್ ಸಿಬ್ಬಂದಿಗಳಾದ ಭವ್ಯ, ಹೇಮಾವತಿ, ಸುಶ್ಮಿತಾ, ಕರಿಯಪ್ಪ, ಗಿರಿಯಪ್ಪ, ವಸಂತ ಅವರು ಸಹಕರಿಸಿದರು.