ಕಾರ್ಯಾಂಗದ ಅಧಿಕಾರಿಗಳ ನಿರ್ಲಕ್ಷ್ಯ ನ್ಯಾಯಕ್ಕಾಗಿ ನ್ಯಾಯಾಲಯ ಮೊರೆ ಹೋಗುವ ಅನಿವಾರ್ಯತೆ: ಜತೀಂದ್ರ ಶೆಟ್ಟಿ

0

ಉಪ್ಪಿನಂಗಡಿ: ಸಂವಿಧಾನ ಬದ್ಧ ಅಧಿಕಾರವನ್ನು ಚಲಾಯಿಸಿ ನ್ಯಾಯ ಬಯಸಿದರೆ ಕಾರ್ಯಾಂಗದ ಅಧಿಕಾರಿಗಳು ಪ್ರತಿ ಹಂತದಲ್ಲೂ ನಿರ್ಲಕ್ಷ್ಯವನ್ನು ವಹಿಸುತ್ತಿದ್ದು, ಎಲ್ಲವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸಿಯೇ ನ್ಯಾಯ ದಕ್ಕಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತಿದೆ. ಇದರ ವಿರುದ್ಧ ಜನ ಸಿಡಿದೇಳಬೇಕಾದ ಅಗತ್ಯತೆ ಇದೆ ಎಂದು ಸಾಮಾಜಿಕ ಹೋರಾಟಗಾರ ಜತೀಂದ್ರ ಶೆಟ್ಟಿ ತಿಳಿಸಿದರು.


ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ಸಾಮಾಜಿಕ ಹೋರಾಟಗಾರನಾಗಿ ಕಾರ್ಯನಿರ್ವಹಿಸುತ್ತಾ ಬಂದಿರುತ್ತೇನೆ. ತಳ ಹಂತದಲ್ಲಿ ಕಾರ್ಯಾಂಗದ ಭಾಗವಾಗಿ ಪಿಡಿಒ, ಕಾರ್ಯನಿರ್ಹಣಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರೂ, ಪ್ರಮುಖ ಪ್ರಕರಣಗಳಲ್ಲಿ ಈ ಎಲ್ಲಾ ವಿಭಾಗದಿಂದಲೂ ನಿರ್ಲಕ್ಷ್ಯ ನೀತಿ ವ್ಯಕ್ತವಾಗುತ್ತಿರುವುದರಿಂದ ಕಾರ್ಯಾಂಗ ಅನ್ನುವುದು ಇದೆಯಾ ? ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ. ಪ್ರತಿಯೊಂದು ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬೇಕಾದ ಅನಿವಾರ್ಯತೆ ಸೃಷ್ಟಿಸುವುದು ನಾಗರಿಕರನ್ನು ಸಂಕಷ್ಠಕ್ಕೆ ತುತ್ತಾಗಿಸುವ ಸಂಚಿನ ಭಾಗವಾಗಿದೆ ಎಂದರು.


ಗುರುತರವಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ, ಲೋಕಾಯುಕ್ತ ಅಧಿಕಾರಿಗಳಿಗೆ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸತತ ಪತ್ರ ಬರೆದಿದ್ದರೂ ಯಾರಿಂದಲೂ ಸ್ಪಂದನ ದೊರೆಯದಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. 34 ನೆಕ್ಕಿಲಾಡಿ ಪಂಚಾಯತ್ ಅಧ್ಯಕ್ಷರು ಭ್ರಷ್ಟಾಚಾರವೆಸಗಿದ್ದಾರೆ. ಸರಕಾರಿ ದಾಖಲೆ ಮುಖಾಂತರವೇ ಇದು ಸಾಬೀತಾಗಿದೆ. ಆದ್ದರಿಂದ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ 2023ರ ನವೆಂಬರ್‌ನಲ್ಲಿ ನಾನು ಪತ್ರ ಬರೆದಿದ್ದೇನೆ. ಆದರೆ ಅದಕ್ಕೆ ಇವತ್ತಿನವರೆಗೆ ಉತ್ತರವಿಲ್ಲ. ಕರ್ನಾಟಕ ಲೋಕಾಯುಕ್ತರಿಗೆ 2023ರ ಡಿಸೆಂಬರ್ ತಿಂಗಳಲ್ಲಿ ಪತ್ರ ಬರೆದಿದ್ದೇನೆ. ಅದಕ್ಕೂ ಉತ್ತರವಿಲ್ಲ. ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ೨೦೨೩ರ ಡಿಸೆಂಬರ್‌ನಲ್ಲಿ ಪತ್ರ ಬರೆದಿದ್ದೇನೆ ಅದಕ್ಕೂ ಉತ್ತರವಿಲ್ಲ ಎಂದು ಜತೀಂದ್ರ ಶೆಟ್ಟಿ ಆರೋಪಿಸಿದರು.


ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಹಾಗೂ ಪತ್ರಿಕಾರಂಗ ಗಳಲ್ಲಿ ಕಾರ್ಯಾಂಗ ತನ್ನ ಕರ್ತವ್ಯವನ್ನು ಸರಿಯಾಗಿ ಪಾಲಿಸದಿರುವುದು ಅಕ್ಷಮ್ಯ ವಾಗಿದೆ. ಸರಕಾರಿ ಅಧಿಕಾರಿಗಳಿಗೆ ನ್ಯಾಯಾಲಯದಲ್ಲಿ ಸರಕಾರಿ ವಕೀಲರೇ ವಾದಿಸುತ್ತಾರೆ. ಆದರೆ ನಮ್ಮಂತಹ ಸಾಮಾನ್ಯ ಪ್ರಜೆ ಕೈಯಿಂದಲೇ ದುಡ್ಡು ಭರಿಸಬೇಕಲ್ಲವೇ ಎಂದು ಪ್ರಶ್ನಿಸಿದ ಜತೀಂದ್ರ ಶೆಟ್ಟಿ, ಸರಕಾರಿ ಅಧಿಕಾರಿಗಳಿಗೆ ಸರಕಾರಿ ವಕೀಲರನ್ನು ಕೊಡುವುದನ್ನು ನಿಲ್ಲಿಸಬೇಕು. ಈ ಬಗ್ಗೆ ನಾನು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಜತೀಂದ್ರ ಶೆಟ್ಟಿ ತಿಳಿಸಿದರು.

LEAVE A REPLY

Please enter your comment!
Please enter your name here