ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಆಲಂಕಾರು ಶಾಖೆ ಉದ್ಘಾಟನೆ

0

ಆಲಂಕಾರು: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್‌ ಕೋ-ಅಪರೇಟಿವ್ ಸೊಸೈಟಿಯ 23ನೇ ಶಾಖೆ ಆಲಂಕಾರು ಶ್ರೀ ದುರ್ಗಾ ಟವರ್ಸ್ ನಲ್ಲಿ ಜ.21 ರಂದು ಉದ್ಘಾಟನೆಗೊಂಡಿತು. ಶಾಖಾ ಕಚೇರಿಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರನ್ನು ಆರ್ಥಿಕ ಸ್ವಾವಲಂಬನೆಯೊಂದಿಗೆ ಸದೃಢ ಬದುಕು ಕಟ್ಟಿಕೊಳ್ಳುವಲ್ಲಿ ಪ್ರೇರಣೆ ನೀಡುವ ಸಹಕಾರಿ ಸಂಘಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಸಹಕಾರಿ ಸಂಘಗಳ ಮೂಲಕ ಉದ್ಯೋಗ, ವಿದ್ಯೆಗೆ ಪ್ರೋತ್ಸಾಹ, ಮದುವೆ ಹಾಗೂ ಇನ್ನೀತರ ಕೆಲಸ ಕಾರ್ಯಗಳಿಗೆ ಅರ್ಥಿಕ ಸಹಕಾರ ನೀಡುವ ಮೂಲಕ ಸಮಾಜದಲ್ಲಿ ಬಡವರನ್ನು ಮೇಲೆತ್ತುವ ಕೆಲಸ ಕಾರ್ಯಗಳು ಸಹಕಾರಿ ಸಂಘಗಳ ಮೂಲಕ ನಡೆಯುತ್ತಿದೆ. ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು ದೇವರ ಹೆಸರಿನಲ್ಲಿ ನಡೆಯುವ ಸಂಸ್ಥೆಯಾಗಿದ್ದು, ಸತತ ಮೂರು ಬಾರಿ ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿ ಪುರಸ್ಕೃತಗೊಂಡಿರುವುದಾಗಿ ಹೇಳಿ ಶುಭ ಹಾರೈಸಿದರು.


ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭಾರತೀಯ ಪರಂಪರೆ ಅಂದರೆ ಕೃಷಿ ಪದ್ದತಿ ಒಕ್ಕುಲುತನ ಮಾಡುವಾಗ ಪರಸ್ಪರ ಸಹಕಾರಿ ತತ್ವದಡಿಯಲ್ಲಿ ತಮ್ಮ ಕೃಷಿಕಾಯಕವನ್ನು ಮಾಡಲಾಗುತ್ತಿತ್ತು. ಅದೇ ಮುಂದುವರಿದು ಸಹಕಾರಿ ಸಂಘಗಳ ಸ್ಥಾಪನೆಗೆ ಪ್ರೇರಣೆಯಾಯಿತು. ಸಮಾಜದಲ್ಲಿ ಎಲ್ಲಾ ಸಮುದಾಯದವರು ಈಗ ಸಹಕಾರಿ ಸಂಘಗಳ ಸ್ಥಾಪನೆ ಮಾಡುತ್ತಿದ್ದಾರೆ. ಇದರ ಮೂಲ ಉದ್ದೇಶ ಸಮಾಜ ಬಾಂಧವರ ಆರ್ಥಿಕ ಸಬಲೀಕರಣ ಎಂದು ಹೇಳಿದ ಅವರು, ಸಹಕಾರಿ ಕ್ಷೇತ್ರಗಳು ರಾಜಕೀಯಕ್ಕೂ ದೊಡ್ಡ ಶಕ್ತಿಯನ್ನೂ ನೀಡುತ್ತದೆ. ರಾಜಕೀಯದಲ್ಲಿ ಬೇರೆ ಬೇರೆ ಪಕ್ಷದವರು ಬೇರೆ ಬೇರೆ ಕುಳಿತರೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಒಂದೇ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶವಾಗುತ್ತದೆ ಎಂದು ತಿಳಿಸಿ ನೂತನ ಶಾಖೆಗೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.


ಸಭಾದ್ಯಕ್ಷತೆ ವಹಿಸಿದ್ದ ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಮಾತನಾಡಿ, ಗೌಡರ ಯುವ ಸೇವಾ ಸಂಘ(ರಿ) ಸುಳ್ಯ ಪ್ರವರ್ತಿತ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್‌ ಕೋ ಅಪರೇಟಿವ್ ಸೊಸೈಟಿ ಸುಳ್ಯದಲ್ಲಿ ಪ್ರಾರಂಭಗೊಂಡು ಈಗ ಸಂಸ್ಥೆಯ ಶಾಖೆಗಳು ರಾಜ್ಯದ ಉದ್ದಗಲಕ್ಕೂ ಪಸರಿಸಿದೆ. ಮೂರು ಜನ ಸಿಬ್ಬಂದಿಯೊಂದಿಗೆ ಅಸ್ಥಿತ್ವಕ್ಕೆ ಬಂದ ಸಂಸ್ಥೆ ಈಗ 160 ರಿಂದ 170 ಜನರಿಗೆ ಉದ್ಯೋಗ ನೀಡುವಷ್ಟು ಬೆಳೆದಿದೆ. ಸಂಸ್ಥೆ 25ನೇ ವರ್ಷದ ಸಂಭ್ರಮದಲ್ಲಿದ್ದು 25 ಶಾಖೆಗಳನ್ನು ತೆರೆಯಬೇಕೆಂದು ಸಂಕಲ್ಪ ಮಾಡಲಾಗಿದೆ. ಮುಂದೆ ಗೋಣಿಕೊಪ್ಪ, ಮಡಿಕೇರಿ, ಮೈಸೂರಿನಲ್ಲಿ ಶಾಖೆಯನ್ನು ಪ್ರಾರಂಬಿಸಲಾಗುವುದು. ಸೊಸೈಟಿಯಲ್ಲಿ ಸಿಗುವ ಸಾಲ ಸೌಲಭ್ಯಗಳನ್ನು ಪಡೆದು, ಕ್ಲಪ್ತ ಸಮಯದಲ್ಲಿ ಪಾವತಿಸಿ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದರು.


ಉದ್ಯಮಿ ಜಿ. ಕೃಷ್ಣಪ್ಪ ರಾಮಕುಂಜ ಗಣಕೀಕರಣವನ್ನು ಉದ್ಘಾಟಿಸಿ, ಪ್ರಥಮ ಪಾಲು ಬಂಡವಾಳ ಪತ್ರವನ್ನು ವಿತರಣೆ ಮಾಡಿ ಮಾತನಾಡಿದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಪ್ರಥಮ ಉಳಿತಾಯ ಖಾತೆ ಪುಸ್ತಕ ವಿತರಣೆ ಮಾಡಿ ಮಾತನಾಡಿ, 2019 ರಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಕಾರಣಾಂತರಗಳಿಂದ ಅಂದಾಜು 7 ಕೋಟಿಯಷ್ಟು ಡೆಪಾಸಿಟ್ ಹಿಂದೆ ತೆಗೆದುಕೊಂಡರು. ಈ ಸಂಧರ್ಭದಲ್ಲಿ ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯವರು ಒಂದು ಕೊಟಿಯಷ್ಟು ಡೆಪಾಸಿಟ್ ಇಟ್ಟು, ಇತರರಿಗೂ ಡೆಪಾಸಿಟ್ ಇಡುವಂತೆ ಪ್ರೇರೇಪಿಸಿದವರು ಎಂದು ನೆನಪಿಸಿಕೊಂಡರು. ಪ್ರಸಕ್ತ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 90 ಕೋಟಿಯಷ್ಟು ಡೆಪಾಸಿಟ್ ಇದೆ ಎಂದು ತಿಳಿಸಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ ಶುಭಹಾರೈಸಿದರು.

ಆಲಂಕಾರು ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಗೌಡ ಪ್ರಥಮ ಠೇವಣಿ ಪತ್ರ ವಿತರಣೆ ಮಾಡಿ ಶುಭಹಾರೈಸಿದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಪ್ರಥಮ ಸಾಲ ಪತ್ರ ವಿತರಣೆ ಮಾಡಿ ಕಡಬ ತಾಲೂಕು ರಚನೆಗೊಂಡ ನಂತರ ಕಡಬ, ಸುಬ್ರಹ್ಮಣ್ಯ, ಆಲಂಕಾರು ಬಹಳ ಅಭಿವೃದ್ಧಿಗೊಂಡು ಅರ್ಥಿಕ ಕೇಂದ್ರಗಳಾಗಿ ಬೆಳೆಯುತ್ತಿದೆ. ಸಂಘಟನೆಯಲ್ಲಿ ಸುಳ್ಯ ತಂದೆಯಾಗಿ,ಪುತ್ತೂರು ತಾಯಿಯಾಗಿ, ಕಡಬ ಮಗುವಿನ ಸ್ಥಾನದಲ್ಲಿದೆ.ಸಂಘಟನೆಗೆ ಸುಳ್ಯ ಮತ್ತು ಪುತ್ತೂರಿನವರ ಸಹಕಾರ ಬೇಕಾಗಿದೆ ಎಂದು ಹೇಳಿದರು. ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಆಲಂಕಾರು ಶ್ರೀದುರ್ಗಾ ಟವರ್ಸ್ ನ ಮಾಲಕ ರಾಧಾಕೃಷ್ಣ ರೈ ಪರಾರಿಗುತ್ತು ಸನ್ಮಾನ ಸ್ವೀಕರಿಸಿ ಸಂಸ್ಥೆಗೆ ಶುಭಹಾರೈಸಿದರು.


ಕಚೇರಿ ವಿನ್ಯಾಸಗೊಳಿಸಿದ ಅಶ್ವಿನ್ ಅಡ್ಕಾರ್, ಸಾಪ್ಟ್ ವೇರ್ ನ ಮಹೇಶ್ ಬೈಲಾಡಿ, ಹಾರ್ಡ್ ವೇರ್ ನ ಪ್ರಕಾಶ್,‌ ಆಂತರಿಕ ಲೆಕ್ಕ ಪರಿಶೋಧಕರಾದ ಗುಮ್ಮಣ್ಣ ಗೌಡ ಹಾಗೂ ರಾಮಚಂದ್ರ ಮಣಿಯಾಣಿ ಅವರನ್ನು ಗೌರವಿಸಲಾಯಿತು. ನಿರ್ದೇಶಕ ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಚಂದ್ರಾ ಕೋಲ್ಚಾರ್, .ಸಿ.ನಾರಾಯಣ ಗೌಡ, ಕೆ.ಸಿ.ಸದಾನಂದ, ಪಿ.ಎಸ್.ಗಂಗಾಧರ, ದಿನೇಶ್ ಮಡಪ್ಪಾಡಿ, ದಾಮೋದರ ಎನ್.ಎಸ್, ಜಯಲಲಿತ ಕೆ.ಎಸ್, ನಳಿನಿ ಸೂರಯ್ಯ, ಹೇಮಚಂದ್ರ ಐ.ಕೆ, ನವೀನ್‌ಕುಮಾರ್ ಜೆ.ವಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸೊಸೈಟಿಯ ಉಪಾಧ್ಯಕ್ಷ ಮೋಹನ್‌ರಾಮ್ ಸುಳ್ಳಿ ಸ್ವಾಗತಿಸಿ ನಿರ್ದೇಶಕ ಎನ್.ಎಸ್.ದಾಮೋದರ ನಾರ್ಕೋಡು ಪ್ರಾಸ್ತಾವಿಕವಾಗಿ ಮಾತನಾಡಿ ನಿರ್ದೇಶಕ ದಿನೇಶ್ ಮಡಪ್ಪಾಡಿ ನಿರೂಪಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ವಂದಿಸಿದರು. ಆಲಂಕಾರು ಶಾಖಾ ಪ್ರಬಂಧಕರಾದ ಕವಿತಾ ಕಡೆಂಜಿ,ಸುಳ್ಯ ಶಾಖಾ ಪ್ರಬಂಧಕರಾದ ಲೋಹಿತ್ ಸ್ಮರಣಿಕೆ ನೀಡಿ ಗೌರವಿಸಿದರು. ಸಿಬ್ಬಂದಿ ಆದರ್ಶ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸಹಕಾರಿ ಸಂಘದ ನಿರ್ದೇಶಕ ಜಿನ್ನಪ್ಪ ಗೌಡ, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಸಲಹಾ ಸಮಿತಿಯ ಸದಸ್ಯರಾದ ಪ್ರವೀಣ್ ಕುಂಟ್ಯಾನ, ನವೀನ್ ಅಂಬೆಕಲ್ಲು, ಗಣೇಶ್ ಕೈಕುರೆ, ದ.ಕ ಜಿ.ಪಂ ಮಾಜಿ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ ಸೇರಿದಂತೆ ಹಲವು ಮಂದಿ ಪ್ರಮುಖರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಸಹಕಾರಿ ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here