ವಿನೂತನ ತಂತ್ರಜ್ಞಾನದಲ್ಲಿ ಮೂಡಿಬಂತು ರಾಮ ಪಟ್ಟಾಭಿಷೇಕದ ಪದಕ
ಪುತ್ತೂರು: ದೇಶಾದ್ಯಂತ ಇದೀಗ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಸಂಭ್ರಮ. ಪ್ರಾಚೀನ ನಗರಿ ಅಯೋಧ್ಯೆಯಲ್ಲಿ ಇನವಂಶ ಸಂಜಾತನಾದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಬಾಲ ರಾಮ ಪ್ರತಿಮೆಯ ಪ್ರಾಣ ಪ್ರತಿಷ್ಠಾ ಪುಣ್ಯ ಶುಭ ಮುಹೂರ್ತವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ತವಕದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ದೇಶದ ಮೂಲೆ ಮೂಲೆಗಳಲ್ಲೂ ಈ ಪುಣ್ಯ ಕ್ಷಣವನ್ನು ಸ್ಮರಣೀಯವಾಗಿಸಲು ಹಲವಾರು ಯೋಜನೆ-ಯೋಚನೆಗಳು ಸಾಕಾರಗೊಳ್ಳುತ್ತಿವೆ.
ಇತ್ತ, ಹತ್ತೂರ ಒಡೆಯನ ನಾಡು, ಮುತ್ತು ಬೆಳೆದ ಊರು ಪುತ್ತೂರಿನಲ್ಲೂ ಸಹ ಸ್ವರ್ಣ, ಮುತ್ತು ಹರಳುಗಳಿಂದ ಶ್ರೀರಾಮಚಂದ್ರ -ಸೀತಾಮಾತೆ-ಲಕ್ಷಣ ಮತ್ತು ಆಂಜನೇಯನ ರೂಪವೊಂದು ಸುಂದರವಾಗಿ ಮೈದಳೆದಿದೆ.
ಇಲ್ಲಿನ ಸ್ವರ್ಣ ಬೀದಿಯಲ್ಲಿ ಕಾರ್ಯಾಚರಿಸುತ್ತಿರುವ ಗಂಗಾಧರ್ ಮಾಲಕತ್ವದ ಹರ್ಷಿತ್ ಜ್ಯವೆಲ್ಲರ್ಸ್ ನವರು ತಮ್ಮ ಗ್ರಾಹಕರಿಗೊಬ್ಬರಿಗಾಗಿ ಈ ಸ್ವರ್ಣ ಖಚಿತ ಪಟ್ಟಾಭಿಷಿಕ್ತ ಶ್ರೀ ರಾಮ ದೇವರ `ರಾಮ ಪಟ್ಟಾಭಿಷೇಕದ’ ಪ್ರತಿರೂಪವನ್ನು ಪಡಿಮೂಡಿಸಿದ್ದಾರೆ.
ಕ್ಯಾಡ್ ತಂತ್ರಜ್ಞಾನ ಬಳಸಿ ರಾಹುಲ್ ಅವರ ವಿನ್ಯಾಸ ಪರಿಕಲ್ಪನೆಯಲ್ಲಿ ಇದು ಮೂಡಿಬಂದಿದ್ದು ಸುಮಾರು 36ಗ್ರಾಂ ಚಿನ್ನ, ರೆಡ್ ಸ್ಟೋನ್ ಮತ್ತು ಮುತ್ತುಗಳ ಜೋಡಣೆಯಿಂದ ಇದು ಆಕರ್ಷಕವಾಗಿ ಕಂಗೊಳಿಸುತ್ತಿದೆ. ಒಂದು ವಾರದ ಶ್ರಮದಲ್ಲಿ ಈ ಸುಂದರವಾದ ವಿನ್ಯಾಸ ಮೂಡಿಬಂದಿದ್ದು ಬಾಲ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.
ನವೀನ ತಂತ್ರಜ್ಞಾನವನ್ನು ಬಳಸಿಕೊಂಡು ಈ ರೀತಿಯ ವಿನ್ಯಾಸಗಳನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿರುವ ಹರ್ಷಿತ್ ಜ್ಯುವೆಲ್ಲರ್ಸ್, ಹಿಂದೊಮ್ಮೆ ಗ್ರಾಹಕರಿಗಾಗಿ ಹತ್ತೂರ ಒಡೆಯ ಮಹಾಲಿಂಗೇಶ್ವರ ದೇವರ 67 ಗ್ರಾಂ ತೂಕದ ಪ್ರತಿರೂಪವನ್ನೂ ಸಹ ಮಾಡಿಕೊಟ್ಟಿದ್ದಾರೆ.