ಬೆಟ್ಟಂಪಾಡಿ ದೇವಾಲಯದಲ್ಲಿ ಭಜನೆ, ಬಲಿವಾಡುಕೂಟ -19 ಕರಸೇವಕರಿಗೆ ಗೌರವಾರ್ಪಣೆ

0

ಬೆಟ್ಟಂಪಾಡಿ: ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಅಂಗವಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಭಜನಾ ಕಾರ್ಯಕ್ರಮ, ಬಲಿವಾಡು ಕೂಟ, ಕರಸೇವಕರಿಗೆ ಗೌರವಾರ್ಪಣೆ ನಡೆಯಿತು.
ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಮತ್ತು ಇತರ ಭಜನಾ ಸಂಘಗಳ ಸದಸ್ಯರಿಂದ ಸಾಮೂಹಿಕ ಭಜನಾ ಸೇವೆ ನಡೆಯಿತು. ಮಧ್ಯಾಹ್ನ  ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠೆಯ ದೃಶ್ಯಗಳನ್ನು ನೇರ ಪ್ರಸಾರದಲ್ಲಿ ಸ್ಕ್ರೀನ್‌ ಮೂಲಕ ವೀಕ್ಷಿಸುವ ವ್ಯವಸ್ಥೆ ಮಾಡಲಾಯಿತು. ಈ ವೇಳೆ ಭಕ್ತರಿಂದ ಹನುಮಾನ್‌ ಚಾಲೀಸಾ ಪಠಣ ಮತ್ತು ರಾಮನಾಮ ತಾರಕ ಮಂತ್ರ ಪಠಿಸಲಾಯಿತು.
ಇದೇ ವೇಳೆ ಚಿಂತಕ ವಿಶ್ವೇಶ್ವರ ಭಟ್‌ ಬಂಗಾರಡ್ಕರವರು ಅಯೋಧ್ಯೆಯ ಇತಿಹಾಸ, ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ರೋಚಕ ಘಟನೆಗಳು, ಡಾ. ಪ್ರಭಾಕರ ಭಟ್‌ ಕಲ್ಲಡ್ಕರವರ ನೇತೃತ್ವದಲ್ಲಿ ನಡೆದ ಕರಸೇವೆಯ ಘಟನೆಗಳನ್ನು ಸಭೆಯ ಮುಂದಿಟ್ಟರು. ಕರಸೇವೆಗೆ ಕರೆ ನೀಡಿದ ವೇಳೆ ಬೆಟ್ಟಂಪಾಡಿ ಭಾಗದಿಂದ ಅನೇಕ ಮಂದಿ ಉತ್ಸಾಹಿಗಳು ಸ್ವಯಂಪ್ರೇರಿತವಾಗಿ ಹೊರಟಿದ್ದನ್ನು ನೆನಪಿಸಿಕೊಂಡರು.

ಮಹಾಪೂಜೆಯ ಬಳಿಕ ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ ಮತ್ತು ಪಾಣಾಜೆ ಭಾಗದಿಂದ ಅಯೋಧ್ಯೆಗೆ ಕರಸೇವೆಗೆ ಹೋಗಿದ್ದ 19 ಮಂದಿ ಕರಸೇವಕರನ್ನು ಈ ವೇಳೆ ಗೌರವಿಸುವ ಕಾರ್ಯಕ್ರಮ ನಡೆಯಿತು. ಕರಸೇವಕರಾದ ಶ್ರೀನಿವಾಸ ಭಟ್‌ ದೇವಸ್ಯ, ಕಿರಣ್‌ ಕುಮಾರ್‌ ಚಂದುಕೂಡ್ಲು, ರಂಗನಾಥ ರೈ ಗುತ್ತು, ಗಣಪತಿ ಭಟ್‌ ಉಳಯ, ಭಾಸ್ಕರ ರೈ ಗುತ್ತು, ರಮಾನಾಥ ಮಣಿಯಾಣಿ, ದಯಾನಂದ ರೈ ಹೊಸಮನೆ, ಸದಾನಂದ ಶೆಟ್ಟಿ ಕೊಮ್ಮಂಡ, ರಾಧಾಕೃಷ್ಣ ರೈ ಸೇರ್ತಾಜೆ, ಗಣೇಶ್‌ ಭಟ್‌ ಚಂದುಕೂಡ್ಲು, ಬಾಲಕೃಷ್ಣ ರೈ ಸೂರಂಬೈಲು, ಜಾಣು ನಾಯ್ಕ್‌ ಭರಣ್ಯ, ಶಂಕರ ನಾರಾಯಣ ಭಟ್‌ ಘಾಟೆ,  ರಾಮಕೃಷ್ಣ ಆಳ್ವ ಬದಂತಡ್ಕ, ದಿ. ನಾರಾಯಣ ರೈ ಬಾಲ್ಯೊಟ್ಟುಗುತ್ತುರವರ ಪರವಾಗಿ ಅವರ ಮಗ ತಿಮ್ಮಣ್ಣ ರೈ, ದಿ. ಬಾಲಣ್ಣ ಗೌಡ ಪಟ್ಟೆಯವರ ಪತ್ನಿ ಚಂದ್ರಾವತಿ, ದಿ. ನರಸಿಂಹ ಘಾಟೆಯವರ ಪತ್ನಿ ಲಲಿತಾ ಘಾಟೆ, ಸುಬ್ರಹ್ಮಣ್ಯ ಭಟ್‌ ದರ್ಬೆ ಗೌರವ ಸ್ವೀಕರಿಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌, ಮೊಕ್ತೇಸರ ವಿನೋದ್‌ ಕುಮಾರ್‌ ರೈ ಗುತ್ತು, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡರು. ಕರಸೇವಕರ ಪರವಾಗಿ ಸದಾನಂದ ಶೆಟ್ಟಿ ಕೊಮ್ಮಂಡ ಮಾತನಾಡಿದರು. ಶಿವಪ್ರಸಾದ್‌ ತಲೆಪ್ಪಾಡಿ ನಿರೂಪಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ್‌ ನವೀನ್‌ ಕುಮಾರ್‌ ಮಿತ್ತಡ್ಕ ಹನುಮಾನ್‌ ಚಾಲೀಸಾ ಪಠಿಸಿದರು. 500 ಮಿಕ್ಕಿ ಭಕ್ತಾದಿಗಳು ಪಾಲ್ಗೊಂಡರು. ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

LEAVE A REPLY

Please enter your comment!
Please enter your name here