ಉಪ್ಪಿನಂಗಡಿ: ಅಯೋಧ್ಯೆಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ದಿನವೇ ಬಾಲರಾಮನ ದರ್ಶನ ಭಾಗ್ಯ ತನಗೊದಗಿ ಬಂದಿತ್ತು. ರಾಮನ ಮುಂದೆ ನಿಂತಾಗ ಸಂಪೂರ್ಣ ಮೈಮರೆಯುವಿಕೆಯ ಅನುಭವವಾಯಿತು. ಅಯೋಧ್ಯೆ ಎಲ್ಲಾ ದೃಷ್ಠಿಯಲ್ಲಿಯೂ ಅತ್ಯದ್ಭುತ ಕ್ಷೇತ್ರವಾಗಿದೆ ಎಂದು ಉಪ್ಪಿನಂಗಡಿ ಬಳಿಯ 34 ನೆಕ್ಕಿಲಾಡಿಯ ಶ್ರೀನಿಧಿ ಉಪಾಧ್ಯಾಯ ತನ್ನ ಅನುಭವವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಉಡುಪಿ ಮಠದ ಶಿಷ್ಯ ಪರಂಪರೆಯನ್ನು ಹೊಂದಿರುವ ಶ್ರೀನಿಧಿ ಉಪಾಧ್ಯಾಯರವರು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ರವರ ಪುತ್ರನಾಗಿದ್ದು, ಪೇಜಾವರ ಮಠಾಧೀಶರ ಸಹಾಯಕನಾಗಿ ಅಯೋಧ್ಯೆಗೆ ತೆರಳುವ ಅವಕಾಶವನ್ನು ಪಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, `ಜನವರಿ 19 ರಂದು ನಾನು ಅಯೋಧ್ಯೆ ತಲುಪಿದ್ದೆ. ಜನವರಿ 22 ರಂದು ನಾನು ಸೇರಿದಂತೆ ಪೇಜಾವರ ಮಠಾಧೀಶರ ಶಿಷ್ಯ ವರ್ಗ ಅಯೋಧ್ಯೆಯಲ್ಲಿ ಇದ್ದೇವಾದರೂ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಮುಗಿಯುವವರೆಗೆ ನಮಗೆ ರಾಮಮಂದಿರದ ಪ್ರಾಂಗಣ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಸಾಯಂಕಾಲ ಪ್ರವೇಶಾವಕಾಶ ದೊರೆತು ಶ್ರೀ ರಾಮನ ದರ್ಶನ ಭಾಗ್ಯ ಒದಗಿತ್ತು. ಮಂದಿರದ ಒಳಗೆ ಕಾಲಿರಿಸಿದ್ದಂತೆ ಮೈ ಮನ ರೋಮಾಂಚನವಾಯಿತು. ಬಾಲ ರಾಮನ ವಿಗ್ರಹದ ಮುಂದೆ ನಿಂತಾಗ, ವಿಗ್ರಹದ ತೇಜಸ್ಸು ನಮ್ಮನ್ನು ಮೈ ಮರೆಯುವಂತೆ ಮಾಡಿತ್ತು. ಅಲ್ಲಿ ನನಗಾದ ಅನುಭವ ಅದು ವರ್ಣಿಸಲು ಅಸಾಧ್ಯವಾಗುವಂತಿದೆ. ಹೇಗೆ ವರ್ಣಿಸುವುದು ಎನ್ನುವುದೇ ತಿಳಿಯುತ್ತಿಲ್ಲ ಎಂದಿದ್ದಾರೆ.
ಅಯೋಧ್ಯೆಯ ಜನ ಸಾಕ್ಷಾತ್ ರಾಮನೇ ಅಯೋಧ್ಯೆಗೆ ಬಂದಿರುತ್ತಾನೆ ಎಂದು ಸಂಭ್ರಮಿಸುತ್ತಿದ್ದಾರೆ. ಉತ್ತಮ ರೀತಿಯಲ್ಲಿ ಯಾತ್ರಿಕರನ್ನು ಸತ್ಕರಿಸುತ್ತಿದ್ದಾರೆ. ಉತ್ತರ ಪ್ರದೇಶ ಸರಕಾರವಂತೂ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿ ಅಯೋಧ್ಯೆಯಲ್ಲಿ ಅಕ್ಷರಶಃ ದೇವಲೋಕವನ್ನು ಸೃಷ್ಠಿಸಿದೆ. ಮಂಗಳವಾರದಂದು ಮಾತ್ರ ಸಾರ್ವಜನಿಕ ನೆಲೆಯಲ್ಲಿ ಭಕ್ತಾದಿಗಳಿಗೆ ಶ್ರೀ ರಾಮನ ದರ್ಶನಕ್ಕೆ ಮುಕ್ತ ಅವಕಾಶ ನೀಡಿರುವುದರಿಂದ ಒಂದಷ್ಟು ಸಮಯ ನೂಕುನುಗ್ಗಲು ಉಂಟಾಗಿತ್ತು. ಆದಾಗ್ಯೂ ಬಳಿಕ ವ್ಯವಸ್ಥೆ ನಿಯಂತ್ರಿಸಲ್ಪಟ್ಟಿತ್ತು. ಒಟ್ಟಾರೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ದಿನವೇ ಶ್ರೀ ರಾಮನ ದರ್ಶನ ಭಾಗ್ಯವನ್ನು ಪಡೆದ ಸೌಭಾಗ್ಯವಂತರಲ್ಲಿ ನಾನೂ ಓರ್ವ ಎನ್ನುವುದೇ ನನ್ನ ಜೀವನ ಸಾರ್ಥಕ್ಯವನ್ನು ಕಂಡಂತಾಗಿದೆ’ ಎಂದು ಶ್ರೀನಿಧಿ ಉಪಾಧ್ಯಾಯ ಅನುಭವನ್ನು ಹಂಚಿಕೊಂಡಿದ್ದಾರೆ.