ಜ.27ರಂದು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವದ ಸಮಾರೋಪ – ಫಲಾನುಭವಿಗಳ ಸಮಾವೇಶ ಮತ್ತು ಸರಕಾರಗಳಿಗೆ ಅಭಿನಂದನಾ ಕಾರ್ಯಕ್ರಮ

0

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದರ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಮತ್ತು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಫಲಾನುಭವಿಗಳ ಸಮಾವೇಶ ಮತ್ತು ಸರಕಾರಗಳಿಗೆ ಅಭಿನಂದನಾ ಕಾರ್ಯಕ್ರಮ ಜ.27ರಂದು ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ತಿಳಿಸಿದರು.

ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.30ಕ್ಕೆ ಸಹಕಾರಿ ಧ್ವಜಾರೋಹಣ ನಡೆಯಲಿದ್ದು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸಹಕಾರಿ ಧ್ವಜಾರೋಹಣಗೈಯಲಿದ್ದಾರೆ. 10ರಿಂದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಮಾಜಿ ಶಾಸಕ, ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಸಂಜೀವ ಮಠಂದೂರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ನೆರವೇರಿಸಲಿದ್ದಾರೆ. ನೂತನ ಅಮೃತ ಸಹಕಾರಿ ಮಾರ್ಟ್‌ನ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿ. ಇದರ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ. ಇದರ ಅಧ್ಯಕ್ಷರೂ ಆದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನಡೆಸಲಿದ್ದಾರೆ. ಸುಸಜ್ಜಿತ ಗೋದಾಮು ಕಟ್ಟಡವನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಗೋದಾಮು ಕಚೇರಿಯನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸರಕಾರಗಳಿಗೆ ಅಭಿನಂದನಾ ಭಾಷಣವನ್ನು ಮಧ್ಯಕ್ಷೇತ್ರಿಯ ಪ್ರಮುಖ್, ಕ್ಯಾಂಪ್ಕೋ ಸಹಕಾರಿ ಭಾರತಿಯ ನಿರ್ದೇಶಕರಾದ ಎಸ್. ಆರ್. ಸತೀಶ್ಚಂದ್ರ ಮಾಡಲಿದ್ದಾರೆ. ಡಿಜಿಟಲ್ ಮಾಹಿತಿ ಕೇಂದ್ರವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.


ಕಾರ್ಯಕ್ರಮದ ಅತಿಥಿಗಳಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಬಿ. ನಿರಂಜನ್, ಕೆ.ಎಂ.ಎಫ್.ನ ಉಪಾಧ್ಯಕ್ಷ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಎಸ್.ಬಿ. ಜಯರಾಮ ರೈ, ನಬಾರ್ಡ್‌ನ ಡಿ.ಡಿ.ಎಂ. ಸಂಗೀತಾ ಎಸ್. ಕರ್ತ, ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ಕೆಂಪೇಗೌಡ ಎಚ್., ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಭಾಗವಹಿಸಲಿದ್ದಾರೆ. ಇಳಂತಿಲ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಪಿ.ಎನ್. ಗೌರವ ಉಪಸ್ಥಿತಿ ವಹಿಸಲಿದ್ದಾರೆ ಎಂದು ತಿಳಿಸಿದ ಕೆ.ವಿ. ಪ್ರಸಾದ ಅವರು, ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಸ್ಯತಳಿ ಸಂರಕ್ಷಕ ರೈತರಾದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಕೆ. ದೇವರಾವ್ ಅವರನ್ನು ಹಾಗೂ ಸಂಘದ 7 ಮಂದಿ ಮಾಜಿ ಅಧ್ಯಕ್ಷರಿಗೆ ಮತ್ತು ಆರು ಮಂದಿ ನಿವೃತ್ತ ಸಿಇಒ ಗಳಿಗೆ ಸನ್ಮಾನ ನೆರವೇರಿಸಲಾಗುವುದು ಎಂದರು.


2022ರ ಮೇ 1ರಂದು ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮಗಳು ಉದ್ಘಾಟನೆಗೊಂಡು ಇಡೀ ವರ್ಷದಲ್ಲಿ ಕೃಷಿ ವಿಚಾರ ಸಂಗಮ, ಅಡಿಕೆಯೊಂದಿಗೆ ಬಹುಬೆಳೆ ಕೃಷಿ ಪದ್ಧತಿ ಮತ್ತು ಅದರ ನಿರ್ವಹಣೆ, ಬೋರ್ಡೋ ದ್ರಾವಣ ತಯಾರಿಕೆಯ ಕುರಿತು ವಿಚಾರ ಸಂಕಿರಣ, ಸಿಂಪಡಣೆಯ ಕಾರ್ಬನ್ ಫೈಬರ್ ದೋಟಿ ಪ್ರಾತ್ಯಕ್ಷತೆ, ಉಚಿತ ನೇತ್ರಾ ಚಿಕಿತ್ಸಾ ಶಿಬಿರ, ಯೋಗ ತರಬೇತಿ ಶಿಬಿರ, ರಾಷ್ಟ್ರ ಧ್ವಜ ಸಂಗ್ರಹ ಹಾಗೂ ಅದರ ಸಂರಕ್ಷಣಾ ಅಭಿಯಾನ, ಜಿಲ್ಲಾ ಮಟ್ಟದ ಚರ್ಚೆ ಹಾಗೂ ಪ್ರಬಂಧ ರಚನಾ ಸ್ಪರ್ಧೆ, ವಿದ್ಯಾಶ್ರೀ ಯೋಜನೆಯಡಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ, ಉಚಿತ ಆಯುರ್ವೇದ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ, ಸಾವಯವ ಕೃಷಿ, ಸ್ವದೇಶಿ ಗೋತಳಿಯ ಮಹತ್ವ ಹಾಗೂ ಜಲ ಮರುಪೂರಣದ ಮಾಹಿತಿ ಕಾರ್ಯಾಗಾರ, ಯಕ್ಷಗಾನ ಕಲಾಮೃತ (ಭೃಗು ಶಾಪ ತಾಳಮದ್ದಳೆ), ಆತ್ಮ ಯೋಜನೆಯಡಿ ರೈತ ವಿಜ್ಞಾನಿ ಸಂವಾದ ಕಾರ್ಯಕ್ರಮ, ಅಖಿಲ ಭಾರತ ಸಹಕಾರ ಸಪ್ತಾಹ- 2022 ಸಮಾರಂಭಗಳನ್ನು ನಡೆಸಲಾಗಿದೆ. ಅಮೃತ ಮಹೋತ್ಸವದ ಸಮಾರೋಪದ ಹಂತದಲ್ಲಿರುವ ಈ ಸುಸಂದರ್ಭದಲ್ಲಿ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಸಂಘದ ಸ್ವಂತ ಜಮೀನಿನಲ್ಲಿ 2.37 ಕೋ. ರೂ. ವೆಚ್ಚದಲ್ಲಿ 12,000 ಚದರ ಅಡಿಯ ವಿಸ್ತಾರವಾದ ಎರಡಂತಸ್ತಿನ ಕಟ್ಟಡದಲ್ಲಿ ರಸಗೊಬ್ಬರದ ದಾಸ್ತಾನು ಕಟ್ಟಡ, ಗೋದಾಮು ಕಚೇರಿ, ಕೃಷಿ ಮಾಹಿತಿ ಡಿಜಿಟಲ್ ಕೇಂದ್ರ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸಹಕಾರಿಗಳು ಮತ್ತು ಸದಸ್ಯರ ಅನುಕೂಲತೆಗಳಿಗಾಗಿ ವಿವಿಧ ದಿನಬಳಕೆಯ ಸಾಮಗ್ರಿಗಳನ್ನು ಹೊಂದಿರುವ ಅಮೃತ ಸಹಕಾರಿ ಮಾರ್ಟ್‌ನ ಉದ್ಘಾಟನೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರೈತರ ಬದುಕನ್ನು ಸುಭದ್ರಗೊಳಿಸಿದ ಕೇಂದ್ರ ಸರಕಾರದ ಯೋಜನೆಯಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಫಲಾನುಭವಿಗಳ ಸಮಾವೇಶ ಹಾಗೂ ಸರಕಾರಗಳಿಗೆ ಅಭಿನಂದನೆ ಕಾರ್ಯಕ್ರಮವೂ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು, ನಿರ್ದೇಶಕರಾದ ಜಗದೀಶ್ ರಾವ್ ಮಣಿಕ್ಕಳ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಶೋಭಾ ಕೆ., ಮಾಜಿ ಅಧ್ಯಕ್ಷ ವೆಂಕಟ್ರಮಣ ಭಟ್ ಪೆಲಪ್ಪಾರು, ನಿವೃತ್ತ ಸಿಇಒ ಗೋಪಾಲ ಹೆಗ್ಡೆ ಉಪಸ್ಥಿತರಿದ್ದರು.

ಬಾಕ್ಸ್:
ರಸಗೊಬ್ಬರ ಗೋದಾಮು ಕಟ್ಟಡದ ಕೆಳ ಅಂತಸ್ತಿನಲ್ಲಿ ಸಾವಯವ ಗೊಬ್ಬರದ ದಾಸ್ತಾನು ಇದ್ದು, ವಿಶೇಷವಾಗಿ ಇಲ್ಲಿ ಕೃಷಿಕರಿಗೆ ಅನುಕೂಲವಾಗಲೆಂದು 45 ದಿನಗಳ ಕಾಲದ ಬಡ್ಡಿ ರಹಿತ ಗೊಬ್ಬರ ಸಾಲವನ್ನು ನೀಡಲಾಗುತ್ತದೆ. ರಸಗೊಬ್ಬರ ಮಾರಾಟದಲ್ಲಿ ಇಪ್ಕೋ ಸಂಸ್ಥೆಯ ವತಿಯಿಂದ ನಮ್ಮ ಸಂಘವು ಸಹಕಾರಿ ಸಂಘದ ನೆಲೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡು, ಪ್ರಶಸ್ತಿ ಪಡೆದಿದೆ. ಆರ್‌ಸಿಎಫ್ ಸಂಸ್ಥೆಯ ವತಿಯಿಂದ ದ.ಕ. ಜಿಲ್ಲೆಯಲ್ಲಿ ರಖಂ ಬೆಲೆಯಲ್ಲಿ ರಸಗೊಬ್ಬರ ಮತ್ತು ಕ್ರಿಮಿನಾಶಕವನ್ನು ಮಾರಾಟ ಮಾಡುವ ಏಕೈಕ ಸಂಘವೆಂದು ಸತತವಾಗಿ ಮೂರು ಬಾರಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಎಂಸಿಎಫ್ ಸಂಸ್ಥೆಯ ವತಿಯಿಂದಲೂ ವಲಯ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಲ್ಲದೇ, ಉತ್ಪತ್ತಿ ಸಾಲ ಪಡೆಯಲು ರೈತರ ಅನುಕೂಲಕ್ಕಾಗಿ ಅಡಿಕೆ ಇಡಲು ಗೋದಾಮಿನ ವ್ಯವಸ್ಥೆಯನ್ನು ಸಂಘವು ಹೊಂದಿದೆ ಎಂದ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ ಅವರು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನಮ್ಮ ಸಂಘದಲ್ಲಿ ಕಳೆದ ಬಾರಿ 2536 ಮಂದಿ ವಿಮೆ ಮೊತ್ತ ಪಾವತಿಸಿದ್ದು, ಒಟ್ಟು 89,01,424 ರೂ. ಪಾವತಿಯಾಗಿದೆ. ಈ ಬಾರಿ ಅವರಿಗೆ ಒಟ್ಟು 14,24,22,784 ರೂ. ವಿಮೆ ಮೊತ್ತ ಬಂದಿರುತ್ತದೆ ಎಂದರು.


LEAVE A REPLY

Please enter your comment!
Please enter your name here