ಪುರಭವನದಲ್ಲಿ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ

0

ಪುತ್ತೂರು: ಮತದಾನದಲ್ಲಿ ನಾವು ಯಾವುದೇ ಆಸೆ, ಅಮಿಷಗಳಿಗೆ ಬಲಿಯಾಗಬಾರದು. ಯುವ ಮತದಾರರೇ ಅಧಿಕವಿದ್ದು ಅರ್ಥಮಾಡಿಕೊಂಡು ಮತ ಚಲಾಯಿಸಬೇಕು. ಆಸೆ, ಆಮಿಷಗಳಿಗೆ ಬಲಿಯಾಗುವಂತ ಘಟನೆಗಳು ಗಮನಕ್ಕೆ ಬಂದರೆ ಅವರಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಮೂಲಕ ಅಂಬಾಸಿಡರ್‌ಗಳಾಗಬೇಕು ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿದರು.

ಅವರು ಪುರಭವನದಲ್ಲಿ ಜ.25ರಂದು ನಡೆದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಮಿಷಗಳಿಗೆ ಬಲಿಯಾಗುವ ಮೂಲಕ ನಮ್ಮ ನಡತೆಯನ್ನು ಕಳೆದುಕೊಳ್ಳಬಾರದು. ಪ್ರಾಮಾಣಿಕವಾಗಿ ಮತ ಚಲಾಯಿಸಬೇಕು. ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯವೂ ಆಗಿದೆ. ಲಂಚ ಭ್ರಷ್ಟಾಚಾರ ಇಲ್ಲದೆ ಮತದಾನ ಮಾಡಬೇಕು. ಯುವಕರಲ್ಲಿ ಉತ್ತಮ ಅವಕಾಶವಿದ್ದು ಅದನ್ನು ಬಳಸಿಕೊಳ್ಖಬೇಕು. ಯುವಕರು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ತಮ್ಮ ಮನೆ, ಕುಟುಂಬಸ್ಥರು ಹಾಗೂ ಪರಿಸರದಲ್ಲಿ ಜಾಗೃತಿ ಮೂಡಿಸಬೇಕು ಎಂದ ಅವರು ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸ್ವಾತಂತ್ರ್ಯ ನಂತರ ಭಾರತದಲ್ಲಿ ಮತದಾನದ ಹಕ್ಕು ನೀಡಿದ್ದು ಅದನ್ನು ಸದ್ಬಳಕೆ ಮಾಡಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ವಿ.ಜಿ ಭಟ್ ಮಾತನಾಡಿ, ಮತದಾನದ ಬಗ್ಗೆ ಯುವ ಜನಾಂಗವನ್ನು ಎಚ್ಚರಿಸಬೇಕು. ಕಾಲೇಜುಗಳಲ್ಲಿ ನೋಂದಾಯಿಸಕೊಂಡ ವಿದ್ಯಾರ್ಥಿಗಳು ತಪ್ಪದೇ ಮತದಾನದಲ್ಲಿ ಭಾಗವಹಿಸಬೇಕು. ನಿಮ್ಮಲ್ಲಿರುವ ಗುರುತಿನ ಚೀಟಿಗೆ ಆಧಾರ್ ಕಾರ್ಡ್‌ಗಿಂತಲೂ ಹೆಚ್ಚಿನ ಬೆಲೆಯಿದೆ. ಇದನ್ನು ಸದ್ಬಳಕೆ ಮಾಡಬೇಕು. ಯಾವುದೇ ವ್ಯಾಮೋಹಕ್ಕೆ ಬಲಿಯಗಬಾರದು. ಒಂದು ಮತವೂ ಮುಖ್ಯ. ನಾವು ನೀಡುವ ಮತ ಉತ್ತಮ ವ್ಯಕ್ತಿ ಪರವಾಗಿರಬೇಕು. ನಾವು ಆಯ್ಕೆ ಮಾಡುವ ಅಭ್ಯರ್ಥಿಗಳೇ ಮುಂದೆ ನಮ್ಮ ಆವಶ್ಯಕಗಳನ್ನು ಪೂರೈಸುವವರಾಗಿರುತ್ತಾರೆ. ಹೀಗಾಗಿ ಉತ್ತಮ ನಾಯಕರಿಗೇ ಮತ ನೀಡಿ ಆಯ್ಕೆ ಮಾಡಬೇಕು. ಪ್ರಶ್ನೆಗಳಿಗೆ ಉತ್ತರ ಹುಡುಕುವುದಲ್ಲ. ಯಾಕೆ ಮತದಾನ ಮಾಡಬೇಕು ಎನ್ನುವವರಿಗೆ ನೀವು ಯಾಕೆ ಭಾರತದಲ್ಲಿರಬೇಕು ಎಂದು ಪ್ರಶ್ನಿಸಬಹುದು ಎಂದು ಅವರು ಹೇಳಿದರು.


ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಪ್ರತಿಜ್ಞಾ ವಿಧಿ ಬೋದಿಸಿದರು. ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ತಹಶಿಲ್ದಾರ್ ಜೆ.ಶಿವಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರ ಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಉಪತಹಶೀಲ್ದಾರ್ ಸುಲೋಚನ ಪಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗತ್ ಕಾರ್ಯಕ್ರಮ ನಿರೂಪಿಸಿದರು. ಉಪ ತಹಶಿಲ್ದಾರ್ ಸುಲೋಚನ ಪಿ.ಕೆ., ರಾಮಣ್ಣ ನಾಯ್ಕ, ಚಂದ್ರ ನಾಯ್ಕ, ತುಳಸಿ, ಕನಕರಾಜ್, ದಯಾನಂದ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಭರತ್ ರಾಜ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here