ಪುತ್ತೂರು: ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆಯನ್ನು ಜ.30ರಂದು ನೆನಪಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪುತ್ತೂರಿನ ಮುಖ್ಯರಸ್ತೆಯಲ್ಲಿನ ಗಾಂಧಿಕಟ್ಟೆಯಲ್ಲಿ ಸಹಾಯಕ ಆಯುಕ್ತ ಬಿಪಿನ್ ಮಹೋಪಾತ್ರರವರು ಮಹಾತ್ಮ ಗಾಂಧೀಜಿ ಪ್ರತಿಮೆಗೆ ಹೂಹಾರ ಹಾಕುವ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಿದರು.
ಪುತ್ತೂರು ಗಾಂಧಿಕಟ್ಟೆ ಸಮಿತಿ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿಯ ಆಶ್ರಯದಲ್ಲಿ ಈ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಬಿಪಿನ್ ಮಹೋಪಾತ್ರರವರು, ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧೀಜಿಯವರು ನಮಗೆ ಮಾರ್ಗದರ್ಶಕರು. ಅವರು ಇಂದು ಜೀವಂತ ಇಲ್ಲದಿದ್ದರೂ ಅವರ ಆದರ್ಶ, ತತ್ವ-ಸಿದ್ಧಾಂತಗಳು ಇಂದಿಗೂ ಜೀವಂತಿಕೆಯನ್ನು ಪಡೆದಿವೆ. ಅಂದಿನ ಬ್ರಿಟಿಷ್ ಯುಗದಲ್ಲಿ ಭಾರತೀಯರಿಗೆ ಯಾವುದೇ ಉನ್ನತ ಹುದ್ದೆಗಳಿಗೆ ಅವಕಾಶವಿರಲಿಲ್ಲ. ಆದರೆ ದೇಶದ ಇಡೀ ವ್ಯವಸ್ಥೆಯನ್ನು ಬದಲು ಮಾಡಿದ್ದು ಗಾಂಧೀಜಿಯವರು. ಗ್ರಾಮ ಪಂಚಾಯತ್ ಮಟ್ಟದಲ್ಲಿ ವೋಟಿಂಗ್ ವ್ಯವಸ್ಥೆಯನ್ನು ಮಾಡಿ ಆ ಮೂಲಕ ಭಾರತೀಯ ಆಭ್ಯರ್ಥಿಗೆ ಅವಕಾಶವನ್ನು ಮಾಡಿಕೊಟ್ಟವರು ಗಾಂಧೀಜಿಯವರು. ಗಾಂಧೀಜಿಯವರಂತೆ ಸ್ವಾತಂತ್ರ್ಯಕ್ಕೆ ಹೋರಾಡಿ ಪ್ರಾಣ ತ್ಯಾಗ ಮಾಡಿದ ಅನೇಕ ಮಹನೀಯರನ್ನು ನಾವಿಂದು ನೆನಪಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಗಾಂಧಿಕಟ್ಟೆಯನ್ನು ಮೇಲ್ದರ್ಜೆಗೇರಿಸಿ-ಕೃಷ್ಣಪ್ರಸಾದ್ ಆಳ್ವ:
ಐತಿಹಾಸಿಕ ಹಿನ್ನೆಲೆಯುಳ್ಳ ಈ ಮಹಾತ್ಮ ಗಾಂಧೀಜಿ ಕಟ್ಟೆಯಲ್ಲಿ ಹುತಾತ್ಮರ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಗಾಂಧೀಜಿಯವರು ಪುತ್ತೂರಿಗೆ ಬಂದಂತಹ ಸಂದರ್ಭದಲ್ಲಿ ಇದೇ ಕಟ್ಟೆಯಲ್ಲಿ ಕುಳಿತಿರುವ ಬಗ್ಗೆ ಇತಿಹಾಸವಿದೆ. ಈಗಾಗಲೇ ಈ ಗಾಂಧಿಕಟ್ಟೆ ಹೊಸ ರೂಪವನ್ನು ಪಡೆದರೂ, ಇದನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಮೇಲ್ದರ್ಜೆಗೇರಿಸಬೇಕು ಎಂದು ಗಾಂಧಿಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವರವರು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಶಂಕರಯ್ಯ, ಪುತ್ತೂರು ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಶಂಕರ್, ಸಿಬ್ಬಂದಿ ರುಕ್ಮಯ್ಯ ಗೌಡ, ಸಾಮಾಜಿಕ ಜಾಲತಾಣದ ಪ್ರಕಾಶ್ ಪುರುಷರಕಟ್ಟೆ, ಗಾಂಧಿಕಟ್ಟೆ ಸಮಿತಿಯ ಕಾರ್ಯದರ್ಶಿ ಸೈಯದ್ ಕಮಲ್ ಸಹಿತ ಹಲವರು ಉಪಸ್ಥಿತರಿದ್ದರು. ಗಾಂಧಿಕಟ್ಟೆ ಸಮಿತಿಯ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ಉಪಾಧ್ಯಕ್ಷ, ನಿವೃತ್ತ ಸೈನಿಕ ರಮೇಶ್ ಬಾಬು ವಂದಿಸಿದರು.
ಭಾರತೀಯ ಕರೆನ್ಸಿಯಲ್ಲಿ ಗಾಂಧೀಜಿ ಇದ್ದಾರೆ, ಭ್ರಷ್ಟಾಚಾರ ಬೇಡ..
ಪ್ರಸ್ತುತ ದೇಶದಲ್ಲಿ ಭ್ರಷ್ಟಾಚಾರ ಎಂಬುದು ಬಹಳಷ್ಟು ತಾಂಡವವಾಡ್ತಿದೆ. ಯಾರೇ ಆಗಲಿ, ಜನರ, ದೇಶದ ಅಭಿವೃದ್ಧಿಗೆ ಕೆಲಸ ಮಾಡಿ. ದಾರಿ ತಪ್ಪಿಸಬೇಡಿ. ಅಹಿಂಸೆಸ ಹಾಗೂ ಸತ್ಯದ ಪ್ರತಿಪಾದಕರಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭ್ರಷ್ಟಾಚಾರಕ್ಕೆ ಬಹಳ ವಿರುದ್ಧವಾಗಿದ್ದಾರೆ. ಭ್ರಷ್ಟಾಚಾರ ಮಾಡುವವರು ಅವರು ತೆಗೆದುಕೊಂಡ ನೋಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಗಾಂಧೀಜಿಯವರ ಭಾವಚಿತ್ರ ಇರುವುದನ್ನು ಮಾತ್ರ ಮರೆಯಬೇಡಿ.
-ಬಿಪಿನ್ ಮಹೋಪಾತ್ರ,
ಸಹಾಯಕ ಆಯುಕ್ತರು
ಅಗ್ನಿಶಾಮಕ ದಳದಿಂದ ಸೈರನ್..
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ಅಗ್ನಿಶಾಮಕ ದಳದಿಂದ ಸೈರನ್ ಮೊಳಗಿಸಿ ಮಹಾತ್ಮ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ವಾಡಿಕೆಯಾಗಿದೆ. ಅದರಂತೆ ಗಂಟೆ 10.59ಕ್ಕೆ ಸರಿಯಾಗಿ ಅಗ್ನಿಶಾಮಕ ದಳದವರು ಸೈರನ್ ಮೊಳಗಿಸಿ ಹುತಾತ್ಮರಾದ ಮಹಾತ್ಮ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.