ಅಭಿವೃದ್ದಿ ಪಥದ ಕನಸಿಗೆ ಮೈಲುಗಲ್ಲು – ಅಶೋಕ್ ಕುಮಾರ್ ರೈ
ಪುತ್ತೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅಂತರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣ ಬೇಡಿಕೆಯಂತೆ ಕಬಕ ಗ್ರಾಮದ ಪೆರಿತ್ತೋಡಿ ನಿವೇಶನ ಕಾಯ್ದಿರಿಸಲಾಗಿದ್ದು ಇದೀಗ ಕಬಕ ಗ್ರಾಮದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಕೆ ಎಸ್ ಸಿ ಎ ಗೆ ಜಮೀನು ಹಸ್ತಾಂತರ ಮತ್ತು ಕರಾರು ದಾಖಲೆಗಳ ವಿನಿಮಯ ಕಾರ್ಯ ಜ.30ರಂದು ಪುತ್ತೂರು ಸಹಾಯಕ ಕಮಿಷನರ್ ಕಚೇರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಿತು. ದಾಖಲೆಯಲ್ಲಿ ಜಮೀನಿನ ಆರ್ ಟಿ ಸಿ, ನಕ್ಷೆ, ಹಸ್ತಾಂತರ ಪ್ರಮಾಣ ಪತ್ರ ಸಹಿತ ಗುಣಮಟ್ಟದ ಕಾಮಗಾರಿ ಕುರಿತ ಪತ್ರಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಪುತ್ತೂರು ಮೂಲದ ರಘುರಾಮ ಭಟ್ ಅವರಿಗೆ ಹಸ್ತಾಂತರಿಸಲಾಯಿತು.
ಅಭಿವೃದ್ದಿ ಪಥದ ಕನಸಿಗೆ ಮೈಲುಗಲ್ಲು:
ಶಾಸಕ ಅಶೋಕ್ ಕುಮಾರ್ ರೈ ಆರಂಭದಲ್ಲಿ ಮಾತನಾಡಿ, ಕೆ ಎಸ್ ಸಿ ಎ ಯಿಂದ ಈ ಯೋಜನೆ ಪುತ್ತೂರಿಗೆ ಮೊದಲ ಸಹಕಾರ ಸಿಕ್ಕಿದೆ. 3 ವರ್ಷದಲ್ಲಿ ಅಭಿವೃದ್ದಿ, 2 ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗಲಿದ್ದು ಅದರಲ್ಲಿ 2ನೇ ಕ್ರೀಡಾಂಗಣ ಲೋಕಲ್ ಕ್ರೀಡಾಪಟುಗಳ ತರಬೇತಿಗಾಗಿ ಅವಕಾಶ ಮಾಡಲಾಗುವುದು. ಇಲ್ಲಿ ಯಾವುದೇ ಕಾರಣಕ್ಕೂ ಅಂಡರ್ ಆರ್ಮ್ ಆಡುವಂತಿಲ್ಲ. ಓವರ್ ಆರ್ಮ್ ಗೆ ಮಾತ್ರ ಅವಕಾಶ. ಅಂಡರ್ ಆರ್ಮ್ ಆಡಿದರೆ ದಕ್ಷಿಣ ಕನ್ನಡ ಬಿಟ್ಡು ಬೇರೆ ಕಡೆ ಹೋಗಲಾಗುವುದಿಲ್ಲ. ಮುಂದಿನ ಜನಾಂಗ ಸರಿಯಾದ ದಾರಿಯಲ್ಲಿ ಹೋಗಬೇಕು. ಈ ಕ್ರೀಡಾಂಗಣಕ್ಕೆ ಹಾಲಿ ಎಸಿ ಮತ್ತು ಈ ಹಿಂದಿನ ಎಸಿಯವರ ಸಹಕಾರವಿತ್ತು. ಮುಖ್ಯಮಂತ್ರಿಗಳೇ ಖುದ್ದು ಕರೆ ಮಾಡಿ ಶೀಘ್ರ ಕ್ರೀಡಾಂಗಣ ಮಾಡುವಂತೆ ತಿಳಿಸಿದ್ದರು. ಪುತ್ತೂರಿನ ಜನತೆಗೆ ಒಳ್ಳೆಯ ವಿಚಾರ. ಅಭಿವೃದ್ಧಿ ಪಥದ ಕನಸಿಗೆ ಮೈಲುಗಲ್ಲಾಗಿದೆ. ಇವತ್ತಿನ ತನಕ ಇಂತಹ ಯೋಜನರ ಬಂದಿಲ್ಲವೆಂದರು.
ಕೆಎಸ್‌ಸಿಎ ಅಧ್ಯಕ್ಷ ರಘುರಾಮ ಭಟ್ ಮಾತನಾಡಿ, ಅಂತರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಯೋಜನೆ ರೂಪಿಸಿದೆ. ದ.ಕ. ಜಿಲ್ಲೆಯ ಕ್ರಿಕೆಟ್ ತರಬೇತಿಗಾಗಿ ಅಂತರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಸ್ಟೇಡಿಯಂ ಅಗತ್ಯ ಅದರಂತೆ ಇವತ್ತು ಅದು ಸಾಕಾರಗೊಂಡಿದೆ ಎಂದ ಅವರು ಗ್ರಾಮಾಂತರ ಭಾಗದಲ್ಲಿ ನಿವೇಶನ ಕಾಯ್ದಿರಿಸಲು ಅಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ರಾಜೇಂದ್ರ ಕೆ.ವಿ ಅವರು ಮತ್ತು ಪುತ್ತೂರಿನ ಕ್ರಿಕೆಟಿಗರು ಪ್ರಯತ್ನ ಪಟ್ಟಿದ್ದಾರೆ ಎಂದರು.
23.25 ಎಕ್ರೆ ಜಮೀನು:
ಕಬಕ ಗ್ರಾಮದ ಪರಿಯತ್ತೋಡಿ ಎಂಬಲ್ಲಿ ಸರ್ವೇ ನಂ.260/1ಪಿಯಲ್ಲಿ 23.25 ಎಕರೆ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣದ ಜಾಗದಲ್ಲಿ ಕೆಲಸ ಕಾರ್ಯ ಆರಂಭಗೊಳ್ಳಲಿದೆ. ಕ್ರೀಡಾಂಗಣ ಜಮೀನಿಗೆ ಸಂಬಂಧಿಸಿ ದಾಖಲೆ ಹಸ್ತಾಂತರ ಸಂದರ್ಭ ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ, ತಹಸೀಲ್ದಾರ್ ಜೆ ಶಿವಶಂಕರ್, ಕೆ ಎಸ್ ಸಿ ಎ ಯ ಮಂಗಳೂರು ರತನ್, ಯುನಿಯನ್ ಕ್ರಿಕೆಟರ್ಸ್ ನ ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ತರಬೇತುದಾರ ಎಲಿಯಾಸ್ ಪಿಂಟೋ, ವಿಶ್ವನಾಥ ನಾಯಕ್, ವಾಮನ್ ಪೈ, ಶ್ರೀಕಾಂತ್ ಕೊಳತ್ತಾಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.