ಬ್ಯಾನರ್‌ ಗೆ ಚಪ್ಪಲಿ ಹಾರ ಪ್ರಕರಣ-ನ್ಯಾಯಾಲಯಕ್ಕೆ “ಬಿ” ರಿಪೋರ್ಟ್‌ ಸಲ್ಲಿಸಿದ ತನಿಖಾಧಿಕಾರಿ-ನ್ಯಾಯಕ್ಕಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಬೊಗಸೆಯೊಡ್ಡಿ ಪ್ರಾರ್ಥಿಸಿದ ಹಿಂದೂ ಕಾರ್ಯಕರ್ತರು

0

ಪುತ್ತೂರು: ಬಿಜೆಪಿ ಪಕ್ಷದ ನಾಯಕರ ಚಿತ್ರವಿರುವ ಫ್ಲೆಕ್ಸ್‌ ಅಳವಡಿಸಿ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ನೇಮಕಗೊಂಡಿದ್ದ ಉಡುಪಿಯ ಪೊಲೀಸ್‌ ತನಿಖಾಧಿಕಾರಿ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದು, ಇದೊಂದು ಸುಳ್ಳು ಪ್ರಕರಣವೆಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು. ಇಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ನೇತೃತ್ವದಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಹಿಂದೂ ಕಾರ್ಯಕರ್ತರು ಅನ್ಯಾಯ ವೆಸಗಿದ ಪೊಲೀಸ್‌ ಇಲಾಖೆ ಸಿಬ್ಬಂದಿಗಳಿಗೆ ಸರಿಯಾದ ಶಿಕ್ಷೆ ನೀಡುವಂತೆ ಮಹಾದೇವನ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಬ್ಯಾನರ್‌ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ‌ 10ರಿಂದ 12 ಯುವಕರ ಮೇಲೆ ಪೊಲೀಸ್‌ ದೌರ್ಜನ್ಯ ನಡೆದಿದ್ದು, ಎಲ್ಲಾ ಸಾಕ್ಷಿ ಒದಗಿಸಿದ್ದರೂ ಇದೊಂದು ಸುಳ್ಳು ಪ್ರಕರಣವೆಂದು “ಬಿ” ರಿಪೋರ್ಟ್‌ ಹಾಕುವ ಪ್ರಯತ್ನ ನಡೆದಿದೆ. ಇದರಿಂದಾಗಿ ನಮಗೆ ನ್ಯಾಯ ಸಿಗುವ ಅವಕಾಶ ಕಡಿಮೆಯಾಗಿದೆ. ನ್ಯಾಯ ಕೊಡಬೇಕಿದ್ದ ಪೊಲೀಸ್‌ ಇಲಾಖೆ ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಹಾಗಾಗಿ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿಲ್ಲ. ನಮಗೆ ನ್ಯಾಯ ಕೊಡುವವನು ದೇವರು. ಪುತ್ತೂರು ಮಹಾಲಿಂಗೇಶ್ವರ ನಮಗೆ ನ್ಯಾಯ ಕೊಡುತ್ತಾನೆ ಎನ್ನುವ ವಿಶ್ವಾಸ, ನಂಬಿಕೆ, ಶೃದ್ಧೆ ನಮ್ಮದು. ಈ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರನ ಸನ್ನಿಧಿಗೆ ಬಂದು ನಮ್ಮ ಅಳಲು ತೋಡಿಕೊಂಡು ಪ್ರಾರ್ಥನೆ ಮಾಡಿಕೊಂಡಿದ್ದೇವೆ ಎಂದು ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.

ಅನ್ಯಾಯ ಮಾಡಿದವರಿಗೆ ಸರಿಯಾದ ಶಿಕ್ಷೆಯನ್ನು ಮಹಾಲಿಂಗೇಶ್ವರ ಕೊಡಬೇಕು. ಹಿಂದೂ ಕಾರ್ಯಕರ್ತರು ದರೋಡೆಕೋರರಲ್ಲ. ಅತ್ಯಾಚಾರ, ಅನಾಚಾರ ಮಾಡುವವರಲ್ಲ. ಹಿಂದೂ ಸಮಾಜದ ಕಾರ್ಯಕರ್ತರ ಮೇಲೆ ಅನ್ಯಾಯವಾದಾಗ ಅದನ್ನು ಹತ್ತಿಕ್ಕುವ ಕೆಲಸವನ್ನು ಹಿಂದೂ ಕಾರ್ಯಕರ್ತರು ಮಾಡುತ್ತಾರೆ. ಸಮಾಜದ, ಧರ್ಮದ, ಸಂಸ್ಕೃತಿಯ, ಹಿಂದುತ್ವದ ರಕ್ಷಣೆಗಾಗಿ ಕೆಲಸ ಮಾಡುವಂತಹ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್‌ ಇಲಾಖೆ ದೌರ್ಜನ್ಯ ಮಾಡುತ್ತಿದ್ದು, ನಮಗಿರುವ ದಾರಿ ಮಹಾಲಿಂಗೇಶ್ವರ ಮಾತ್ರ. ಅನ್ಯಾಯ ಮಾಡಿದವರಿಗೆ ಮಹಾಲಿಂಗೇಶ್ವರ ದೇವರು ಸರಿಯಾದ ಶಿಕ್ಷೆ ಕೊಟ್ಟಿರುವ ಘಟನೆ ಈ ಹಿಂದೆ ಪುತ್ತೂರಿನ ಮಣ್ಣಿನಲ್ಲಿ ನಡೆದಿದೆ. ಆ ವಿಶ್ವಾಸ ಮತ್ತು ನಂಬಿಕೆಯಿಂದ ಇಂದು ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿಕೊಂಡಿದ್ದೇವೆ. ಹಿಂದೂ ಸಮಾಜದ ಕೆಲಸ ಮಾಡುವ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು. ಈ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ತುಳಿಯುವ ಪ್ರಯತ್ನ ಮಾಡಿದ ಪೊಲೀಸ್‌ ಇಲಾಖೆ ಸಿಬ್ಬಂದಿಗಳಿಗೆ ಮಹಾಲಿಂಗೇಶ್ವರ ಸರಿಯಾದ ಶಿಕ್ಷೆ ಕೊಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕರ್ತರಿಗೆ ಯಾವುದೇ ರೀತಿಯ ತೊಂದರೆ ಕೊಡದಂತೆ ಅವರಿಗೆ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ರಾಧಾಕೃಷ್ಣ ಅಡ್ಯಂತಾಯ ಹೇಳಿದ್ದಾರೆ.

ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಗಣರಾಜ್ ಭಟ್ ಕೆದಿಲ, ನ್ಯಾಯವಾದಿ ಚಿನ್ಮಯ್ ರೈ, ಅಶೋಕ್ ತ್ಯಾಗರಾಜನಗರ, ಮನೀಶ್ ಕುಲಾಲ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here