ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪುಣಚ ಘಟ ಸಮಿತಿ ವಾರ್ಷಿಕೋತ್ಸವ, ಶ್ರೀಸತ್ಯದತ್ತ ವೃತ ಪೂಜೆ

0

ಆಧ್ಯಾತ್ಮಿಕದಿಂದ ಸುಖದುಃಖದಲ್ಲಿ ಸಮನ್ವಯ ಸಾಧ್ಯ- ಗುರುದೇವಾನಂದ ಸ್ವಾಮೀಜಿ

ಪುಣಚ : ಭಾರತ ದೇಶದ ಅಸ್ತಿತ್ವ ಆಧ್ಯಾತ್ಮಿಕ ಶಕ್ತಿಯಲ್ಲಿದೆ. ನಾವು ಜೀವನದಲ್ಲಿ ಆಧ್ಯಾತ್ಮಿಕತೆ ಅಳವಡಿಸಿಕೊಳ್ಳಬೇಕು. ಇದರಿಂದ ಸುಖ ದುಃಖವನ್ನು ಸಮತೋಲನದಲ್ಲಿಡಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಪುಣಚ ಘಟ ಸಮಿತಿಯ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯದತ್ತ ವೃತ ಪೂಜೆಯ ಅಂಗವಾಗಿ ಫೆ.2ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಅನ್ನಪೂರ್ಣ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯಪೂರ್ಣ ಸಮಾಜಕ್ಕೆ ಸಂಘಟನೆ ಬೇಕು. ನಾವೆಲ್ಲರೂ ನಂಬಿಕೆಯ ಮೇಲೆ ಬದುಕುವವರು. ನಮ್ಮಲ್ಲಿ ಆತ್ಮವಿಶ್ವಾಸವಿದ್ದರೆ ಸಾಧನೆ ಮಾಡಲು ಸಾಧ್ಯ. ನಮ್ಮ ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು ಎಂದರು.


ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಪುಣಚ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಟಿಕಲ್ಲು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ಮಾತನಾಡಿ ಶುಭ ಹಾರೈಸಿದರು. ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರೀತಂ ಪೂಂಜಾ ಅಗ್ರಾಳ, ಪೂಜಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ದಂಬೆ, ಪುಣಚ ಘಟ ಸಮಿತಿ ಅಧ್ಯಕ್ಷೆ ಉಮಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುಣಚ ಘಟ ಸಮಿತಿ ಹಾಗೂ ಪೂಜಾ ಸಮಿತಿ ಪದಾಧಿಕಾರಿಗಳು ಸ್ವಾಮೀಜಿಗಳಿಗೆ ಫಲಪುಷ್ಪ ನೀಡಿ ಸ್ವಾಗತಿಸಿದರು. ಘಟ ಸಮಿತಿ ಸದಸ್ಯರು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಸವಿತಾ ಕೆ. ವಾರ್ಷಿಕ ವರದಿ ವಾಚಿಸಿದರು. ರಾಜೇಂದ್ರ ರೈ ಬೈಲುಗುತ್ತು ದಾನಿಗಳ ಪಟ್ಟಿ ವಾಚಿಸಿದರು. ಜಯಶ್ರೀ ಪ್ರಾರ್ಥಿಸಿದರು. ಪೂಜಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ದಂಬೆ ಸ್ವಾಗತಿಸಿ, ಘಟ ಸಮಿತಿ ಅಧ್ಯಕ್ಷೆ ಉಮಾ ರೈ ವಂದಿಸಿದರು. ವಲಯ ಯೋಜನಾ ಮೇಲ್ವಿಚಾರಕಿ ಲೀಲಾ ಕೆ. ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕರು, ಸೇವಾ ದೀಕ್ಷಿತರು, ಪುಣಚ ಘಟ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಸಂಘದ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಬೆಳಿಗ್ಗೆ ವೇ.ಮೂ. ಬ್ರಹ್ಮಶ್ರೀ ಚಂದ್ರಶೇಖರ ಉಪಾಧ್ಯಾಯ ಕುರೋಮೂಲೆರವರ ಪೌರೋಹಿತ್ಯದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಶ್ರೀ ಸತ್ಯದತ್ತ ವೃತಪೂಜೆ ಆರಂಭಗೊಂಡಿತು. ಸಭಾಕಾರ್ಯಕ್ರಮ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವಿಶೇಷ ಆಕರ್ಷಣೆಯಾಗಿ ಸಿಂಗಾರಿ ಮೇಳದ ಚೆಂಡೆ ವಾದನ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.

ದಾನಿಗಳಿಗೆ ಗೌರವಾರ್ಪಣೆ:
ಕಾರ್ಯಕ್ರಮಕ್ಕೆ ಹಲವು ದಾನಿಗಳು ಸಹಕರಿಸಿದ್ದರು. ಸಹಕರಿಸಿದ ದಾನಿಗಳನ್ನು ಗುರುದೇವಾನಂದ ಸ್ವಾಮೀಜಿ ಶಾಲು ಹಾಕಿ ಗೌರವಿಸಿದರು.

LEAVE A REPLY

Please enter your comment!
Please enter your name here