ಸಿಆರ್‌ಪಿಎಫ್ ಯೋಧ ವಿದ್ಯಾಧರ ಅವರಿಗೆ ಹುಟ್ಟೂರಲ್ಲಿ ಅದ್ಧೂರಿ ಸ್ವಾಗತ-ʼಸೇನಾ ಸೇವೆಗಿದು ನಮನ’ ವಿಶಿಷ್ಟ ಕಾರ್ಯಕ್ರಮ-ಗೌರವಾರ್ಪಣೆ

0

ಪುತ್ತೂರು: ಕೇಂದ್ರೀಯ ಮೀಸಲು ಸಶಸ್ತ್ರ ಪೊಲೀಸ್ ಸೇನಾ ಪಡೆ(ಸಿಆರ್‌ಪಿಎಫ್)ನಲ್ಲಿ ಸುದೀರ್ಘ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಫೆ.3ರಂದು ಹುಟ್ಟೂರಿಗೆ ಆಗಮಿಸಿ ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ವಿದ್ಯಾಧರ ಎನ್‌ರವರನ್ನು ಗ್ರಾಮ ಪಂಚಾಯತ್‌ಗಳು, ವಿವಿಧ ಸಂಘ-ಸಂಸ್ಥೆಗಳು, ಭಜನಾ ಮಂಡಳಗಳು, ಸಾರ್ವಜನಿಕರು ಹಾಗೂ ಕುಟುಂಬಸ್ಥರ ಒಗ್ಗೂಡುವಿಕೆಯೊಂದಿಗೆ `ಸೇನಾ ಸೇವೆಗಿದು ನಮನ’ ಎನ್ನುವ ವಿಶಿಷ್ಟ ಕಾರ್ಯಕ್ರಮದ ಮೂಲಕ ಸ್ವಾಗತಿಸಿ, ಗೌರವಿಸಲಾಯಿತು.


ಸೇನೆಯಿಂದ ನಿವೃತ್ತಿಗೊಂಡು ಹುಟ್ಟೂರಿಗೆ ಆಗಮಿಸಿದ ವಿದ್ಯಾಧರ ಅವರನ್ನು ಪ್ರಾರಂಭದಲ್ಲಿ ಕೌಡಿಚ್ಚಾರಿನಲ್ಲಿ ಸ್ವಾಗತಿಸಲಾಯಿತು. ಬಳಿಕ ಪಟ್ಟೆ ಜಂಕ್ಷನ್‌ನಿಂದ ತೆರೆದ ವಾಹನದಲ್ಲಿ ಚೆಂಡೆ ವಾದನ, ಜೈಕಾರದೊಂದಿಗೆ ಪಟ್ಟೆಯಲ್ಲಿರುವ ಅವರ ನಿವಾಸಕ್ಕೆ ಕರೆತರಲಾಯಿತು. ಮನೆಯಲ್ಲಿ ಆರತಿ ಬೆಳಗಿ, ಪುಷ್ಪಾರ್ಚಣೆ ಮಾಡಿ ಸ್ವಾಗತಿಸಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅರಿಯಡ್ಕ ಗ್ರಾ.ಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ ಹಾಗೂ ಸದಸ್ಯರು, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಹಾಗೂ ಸದಸ್ಯರು, ಶ್ರೀಕೃಷ್ಣ ಯುವಕ ಮಂಡಲ ಪಟ್ಟೆ, ವಿದ್ಯಾಧರರವರ ಹತ್ತನೇ ತರಗತಿ ಮಿತ್ರರು, ಅಯ್ಯಪ್ಪ ಭಜನಾ ಮಂದಿರ ಪೆರಿಗೇರಿ, ಅರಿಯಡ್ಕ ಗ್ರಾ.ಪಂ ಅಧ್ಯಕ್ಷ, ಸದಸ್ಯರು, ಬಡಗನ್ನೂರು ಗ್ರಾ.ಪಂ ಅಧ್ಯಕ್ಷ, ಸದಸ್ಯರು, ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಬೆಟ್ಟಂಪಾಡಿ, ಪಟ್ಟೆ ವಿದ್ಯಾ ಸಂಸ್ಥೆಗಳು, ವಾಣಿಯನ್/ಗಾಣಿಗ ಸಂಘ ಈಶ್ವರಮಂಗಲ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ ಮನೆಯವರು, ಎರಂಬು ತರವಾಡು ಮನೆ, ಕೆಎಸ್‌ಆರ್ಟಿಸಿ ನಿವೃತ್ತ ಉದ್ಯೋಗಿ ಬಾಬು ಪಾಟಾಳಿ, ಆಶಿರ್ವಾದ ಇಂಜಿನಿಯರಿಂಗ್ ವರ್ಕ್ಸ್ ಪ್ರಸಾದ್ ಆಲಂತಡ್ಕ ದಂಪತಿ, ಶಿವರಾಮ ಭಟ್, ರಘುರಾಮ ಭಟ್, ದುರ್ಗಾಪ್ರಸಾದ್, ರವಿ ಬಾಕಿತ್ತಿಮಾರ್, ಸುಳ್ಯ ಸೈಂಟ್ ಜೋಕಿಮ್ಸ್ ಶಾಲಾ ಶಿಕ್ಷಕಿ ಜ್ಯೋತಿ ರೈ, ಶಶಿಧರ ಪಟ್ಟೆ, ದುಗ್ಗಲಾಯ ದೈವಸ್ಥಾನ ದುಗ್ಗಲಡ್ಕ, ವಿನಯ ನವೀನ್ ಪಟ್ಟೆ, ಪರಮೇಶ್ವರಿ ಮನೆಯವರು ಮುಕ್ರಂಪಾಡಿ, ಪೆರ್ಲಂಪಾಡಿಯ ಯುವಕ ಸಂಘ, ಶೈಲ ಭಟ್ ಮನೆಯವರು, ವಿದ್ಯಾದಾಯಿನಿ ಕುಟುಂಬಸ್ಥರು, ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ ಹಾಗೂ ವಿದ್ಯಾಧರರವರ ಕುಟುಂಬಸ್ಥರು ಸೇರಿದಂತೆ ಹಲವು ಸಂಘ-ಸಂಸ್ಥೆಗಳು, ಸಾರ್ವಜನಿಕರು ನಿವೃತ್ತ ಯೋಧನನ್ನು ಸನ್ಮಾನಿಸಿ, ಗೌರವಿಸಿದರು.

ಯೋಧ ವಿದ್ಯಾಧರ ಅವರನ್ನು ಸನ್ಮಾನಿಸಿದ ನಿವೃತ್ತ ಸೇನಾಧಿಕಾರಿ ಸೀತಾರಾಮ ಶೆಟ್ಟಿ‌ ಮಾತನಾಡಿ, ಒಬ್ಬ ಸೈನಿಕ ಇಂದಿನ ದಿನ ನಮ್ಮೆಲ್ಲರ ನಾಳೆಗಾಗಿ ಮೀಸಲಾಗಿದೆ. ಅವರು ಪರಿವಾರ, ಒಡನಾಡಿ, ಹೆತ್ತವರನ್ನು ಬಿಟ್ಟು ಯವ್ವನದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೈರಿಗಳ ಮೇಲೆ ಕಣ್ಣಿಟ್ಟು ದೇಶವನ್ನು ರಕ್ಷಿಸುತ್ತಿದ್ದಾರೆ. ವರ್ಷದಲ್ಲಿ ಹಲವಾರು ಹಬ್ಬಗಳನ್ನು ನಾವು ಆಚರಿಸುತ್ತಿದ್ದರೆ ಯೋಧರು ಹಾಗೂ ಅವರ ಮನೆಯವರಿಗೆ ಯೋಧರು ಮನೆಗೆ ಬರುವಾಗಿ ಮಾತ್ರ ಹಬ್ಬದ ಸಂಭ್ರಮವಿರುತ್ತದೆ. ಒಬ್ಬ ಯೋಧನಿಗೆ ಸಲ್ಲಿಸುವ ಗೌರವ ಅವರಿಗೆ ಮಾತ್ರವಲ್ಲ. ಹುತಾತ್ಮರಾದ ಪ್ರತಿಯೊಬ್ಬ ಯೋಧರಿಗೆ, ಗಡಿಯಲ್ಲಿರುವ ಯೋಧರಿಗೆ ಸಲ್ಲುವಂತದ್ದು. ಇಂತಹ ಸನ್ಮಾನಗಳು ಸೈನಿಕ ಮನೋಬಲ ವೃದ್ಧಿಗೆ ಪೂರಕವಾಗಿದೆ ಎಂದ ಅವರು ವಿದ್ಯಾಧರರವರು ಹುದ್ದೆಯಿಂದ ಮಾತ್ರ ನಿವೃತ್ತಿ. ದೇಶ ಪ್ರೇಮದಿಂದ ಅಲ್ಲ. ಸಂತೋಷದಿಂದ ನಿವೃತ್ತಿ ಪಡೆದು ಹಿಂತಿರುಗಿದ್ದಾರೆ ಎಂದರು.

ಅರಿಯಡ್ಕ ಗ್ರಾ.ಪಂ ಮಾಜಿ ಸದಸ್ಯ ತಿಲಕ್ ರೈ ಕುತ್ಯಾಡಿ ಮಾತನಾಡಿ, ಸುದೀರ್ಘ 33 ವರ್ಷಗಳ ಕಾಲ ವಿದ್ಯಾಧರರವರು ತನ್ನ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟವರು. ಅವರು ರಾಷ್ಟ್ರದ ಹೆಮ್ಮೆಯ ಸುಪುತ್ರ. ಒಂದೇ ಮನೆಯ ಮೂರು ಮಂದಿ ಸೇನೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಿದ್ದಾರೆ. ಇವರು ನಮ್ಮೂರಿನಲ್ಲಿರುವುದು ನಮಗೆ ಹೆಮ್ಮೆಯಾಗಿದೆ ಎಂದರು. ಬೆಟ್ಟಂಪಾಡಿ ಪ್ರಿಯದರ್ಶಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಮಾತನಾಡಿ, ತನ್ನ ಮೂವರು ಸುಪುತ್ರರನ್ನು ದೇಶ ರಕ್ಷಣೆ ಮಾಡಲು ಸೇನೆಗೆ ಕಳುಹಿಸಿಕೊಡುವ ಮೂಲಕ ಈ ಮೂವರು ಯೋಧರ ತಾಯಿ ಗಿರಿಜಾರವರು ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯಂತೆ ಆದರ್ಶ ಮಾತೆಯಾಗಿದ್ದಾರೆ. ಇಂತಹ ಯೋಧರನ್ನು ಗೌರವಿಸುವುದು ನಮ್ಮ ಜೀವನದ ಅವಿಸ್ಮರಣೀಯ ಕಾರ್ಯಕ್ರಮವಾಗಿದೆ. ನಿವೃತ್ತರಿಗೆ ಉನ್ನತ ಹುದ್ದೆಗಳು ದೊರೆಯಲಿ ಎಂದರು.

ಸನ್ಮಾನ, ಗೌರವ ಸ್ವೀಕರಿಸಿದ ನಿವೃತ್ತ ಯೋಧ ವಿದ್ಯಾಧರ ಮಾತನಾಡಿ, ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಹುಟ್ಟೂರಿಗೆ ಆಗಮಿಸಿದ ಒಬ್ಬ ಸೈನಿಕನನ್ನು ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಬಂಧು ಮಿತ್ರರು ಸ್ವಾಗತಿಸಿರುವುದು ನನ್ನ ಜೀವನದ ಅಭೂತಪೂರ್ವ ಕಾರ್ಯಕ್ರಮವಾಗಿದೆ. ಈ ಕ್ಷಣ ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣವಾಗಿದೆ. ಇದು ಯೋಧರಿಗೆ ದೊರೆಯುವ ಬಹು ದೊಡ್ಡ ಪ್ರಶಸ್ತಿ. ಇದಕ್ಕಿಂತ ಅದ್ದೂರಿ ಸ್ವಾಗತ ನನ್ನ ಜೀವನದಲ್ಲಿ ಪಡೆಯಲು ಸಾಧ್ಯವಿಲ್ಲ. ಭಾರತಾಂಬೆಯ ಸೇವೆ ಸಲ್ಲಿಸಿದ ನನ್ನನ್ನು ಅದ್ದೂರಿಯಾಗಿ ಸ್ವಾಗತಿಸಿ, ಗೌರವಿಸಿದ ಪ್ರತಿಯೊಬ್ಬರಿಗೂ ಅವರು ಕೃತಜ್ಞತೆ ಸಲ್ಲಿಸಿದರು.

ಪೆರಿಗೇರಿ ಅಯ್ಯಪ್ಪ ಭಜನಾ ಮಂದಿರದ ಶ್ರೀನಿವಾಸ್, ಅರಿಯಡ್ಕ ಗ್ರಾ.ಪಂ ಮಾಜಿ ಸದಸ್ಯ ತಿಲಕ್ ರೈ ಕುತ್ಯಾಡಿ, ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ದುರ್ಗಾಪ್ರಸಾದ್, ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ, ನಿವೃತ್ತ ಶಿಕ್ಷಕಿ ಶಂಕರಿ, ಪಟ್ಟೆ ಶಾಲಾ ಮುಖ್ಯ ಗುರು ರಾಜ್ ಗೋಪಾಲ್, ಪೆರ್ನೆ ಮುಚ್ಚಿಲೋಟ್ ಕ್ಷೇತ್ರದ ಕಲಿಯಾಟ ಸಮಿತಿ ನಾರಾಯಣ ಮಾಸ್ಟರ್, ವಾಣಿಯನ್/ ಗಾಣಿಗ ಸಮಾಜ ಸಂಘದ ಸ್ಥಾಪಕ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ, ಶಿಕ್ಷಕಿ ಯಮುನಾ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಪ್ಪು ಪಾಟಾಳಿ, ನಂದನ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ದಾಮೋದರ ಪಾಟಾಳಿ, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಹರಿಪ್ರಸಾದ್ ರೈ, ಪಾಟಾಳಿ ಯಾನೆ ಗಾಣಿಗರ ಸಂಘದ ಉದಯ, ನೆಲ್ಲಿಕಟ್ಟೆ ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಯಂ.ಎ., ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಸಾದ್ ಬಿ., ದಿನೇಶ್ ಕಡಮಜಲು, ಸುಬ್ಬಪ್ಪ ಪಾಟಾಳಿ ಪಟ್ಟೆ ಮೊದಲಾದವರು ಮಾತನಾಡಿ ಯೋಧ ವಿದ್ಯಾಧರ ಅವರ ನಿವೃತ್ತ ಜೀವನಕ್ಕೆ ಶುಭಹಾರೈಸಿದರು.

ಕಾರ್ಯಕ್ರಮವನ್ನು ಯೋಧರ ತಾಯಿ ಗಿರಿಜ, ಹಿರಿಯರಾದ ಶಾರದಾ ಹಾಗೂ ಸುಶೀಲ ದೀಪ ಬೆಳಗಿಸಿದರು. ಸೌಮ್ಯ ವಿನಯ್ ಕುಮಾರ್ ಪ್ರಾರ್ಥಿಸಿದರು. ವಿದ್ಯಾಧರ ಅವರ ಸಹೋದರ ಸುಬ್ಬಪ್ಪ ಪಟ್ಟೆ ಸ್ವಾಗತಿಸಿದರು. ಮಹೇಶ್ ಆಲಂಕಾರು ಕಾರ್ಯಕ್ರಮ ನಿರೂಪಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ಗೀತಾ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನಡೆಯಿತು. ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಕುಟುಂಬಸ್ಥರು ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here