ಶಿಕ್ಷಕ ವೃತ್ತಿಯ ಪಾವಿತ್ರ್ಯವನ್ನು ಉಳಿಸೋಣ: ಹರಿಶ್ಚಂದ್ರ ಕೆ
ಕುಂತೂರು: ಭಾರತೀಯ ಪರಂಪರೆಯ ಶಿಕ್ಷಣ ವ್ಯವಸ್ಥೆ ಅತ್ಯಂತ ಮೌಲ್ಯಯುತವಾದದ್ದು ಪ್ರಸ್ತುತ ಸಮಾಜದ ಬದಲಾದ ಕಾಲಘಟ್ಟದ ಪರಿಸ್ಥಿತಿಯಲ್ಲಿ ಪಾಶ್ಚಾತ್ಯ ಶೈಲಿಯ ಆಕರ್ಷಣೆಗಳಿಗೆ ಒಳಗಾಗಿ ಶಿಕ್ಷಣವನ್ನು ಪಡೆಯಲು ಉತ್ತಮ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳು ನಿರ್ಮಿಸಿ ಕೊಡಬೇಕು. ಇವುಗಳ ಜೊತೆಗೆ ಮಕ್ಕಳನ್ನು ತಿದ್ದಿ–ತೀಡಿ ಒಂದು ರೂಪವನ್ನು ಕೊಡುವ ಜವಾಬ್ದಾರಿ ಹೊಂದಿರುವ ಶಿಕ್ಷಕರು ಉತ್ತಮ ಗುಣ–ನಡತೆಗಳೊಂದಿಗೆ ಸಚ್ಚಾರಿತ್ರ್ಯವನ್ನು ಹೊಂದಿ ಶಿಕ್ಷಣ ವೃತ್ತಿಯ ಘನತೆ–ಗೌರವವನ್ನು ಸದಾ ಕಾಲವೂ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಹೊಂದಿರುವುದು ಅತೀ ಮುಖ್ಯವಾಗಿದೆ ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸೈಂಟ್ ಜಾರ್ಜ್ ಅನುದಾನಿತ ಪ್ರೌಢಶಾಲೆ, ಕುಂತೂರು ಪದವು ಇಲ್ಲಿನ ಮುಖ್ಯೋಪಾಧ್ಯಾಯ ಹರಿಶ್ಚಂದ್ರ ಕೆ ಅವರು ಹೇಳಿದರು.
ಅವರು ಕುಂತೂರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ವ್ಯವಸ್ಥಾಪಕ ರೇ ಎಲ್ದೊ ಪುತ್ತನ್ ಕಂಡತ್ತಿಲ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಕಾಲೇಜಿನ ಶೈಕ್ಷಣಿಕ ವರ್ಷದ ಸಮಗ್ರ ವರದಿಯನ್ನು ಶೈಕ್ಷಣಿಕ ಸಲಹೆಗಾರ್ತಿ ಉಪನ್ಯಾಸಕಿ ವಿನ್ಸಿ ಅಬ್ರಹಾಂ ವಾಚಿಸಿದರು.ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹರಿಶ್ಚಂದ್ರ ಕೆ. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು
ಕಾಲೇಜಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳಿಗೆ ವಿವಿಧ ಪಠ್ಯಕ್ರಮ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಾಗೂ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಗರಿಷ್ಠ ಅಂಕಗಳೊಂದಿಗೆ ಸಾಧನೆಗೈದ ವಿದ್ಯಾರ್ಥಿ ಶಿಕ್ಷಕರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.ಕಾಲೇಜಿನ ಪ್ರಾಂಶುಪಾಲೆ ಉಷಾ ಎಂ.ಎಲ್. ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರಶ್ಮಿ ಪಿ.ಕೆ. ವಂದಿಸಿದರು. ಪ್ರಶಿಕ್ಷಣಾರ್ಥಿ ದೀಕ್ಷಾ ಮ್ಯಾಥ್ಯೂ ಮತ್ತು ಮೇಘಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.