ಕಡಬ ದರ್ಗಾ ಶರೀಫ್ ಉರೂಸ್ ಸಮಾರೋಪ-ಸೌಹಾರ್ದ ಸಂಗಮ, ಬೃಹತ್ ಸಂದಲ್ ಮೆರವಣಿಗೆ

0

ಸಾವಿರಾರು ಮಂದಿ ಭಾಗಿ, ದರ್ಗಾ ಝಿಯಾರತ್, ಅನ್ನದಾನ

ಕಡಬ: ಬರ್ಕತುಲ್ ಇಸ್ಲಾಂ ಮುಹಿಯ್ಯುದ್ದೀನ್ ಫಂಡ್, ಕೇಂದ್ರ ಜುಮಾ ಮಸೀದಿ ಕಡಬ, ಹಝ್ರತ್ ಶೈಖ್ ಅಬ್ದುಲ್ ಖಾದಿರ್ ಷಾ ವಲಿಯುಲ್ಲಾಹಿ(ಖ.ಸಿ) ದರ್ಗಾ ಶರೀಫ್ ಹಾಗೂ ಶುಹದಾಕಳ್‌ರವರ ಉರೂಸ್ ಸಮಾರೋಪ ಕಾರ್ಯಕ್ರಮ ಫೆ.4ರಂದು ನಡೆಯಿತು.
ಮಗ್ರಿಬ್ ನಮಾಜಿನ ಬಳಿಕ ಗೈಬನ್ ಷಾ ವಲಿಯುಲ್ಲಾಹಿ(ಖ.ಸಿ)ರವರ ದರ್ಗಾ ಶರೀಫ್‌ನಿಂದ ಕೇಂದ್ರ ಜುಮಾ ಮಸೀದಿ ವರೆಗೆ ಬೃಹತ್ ಸಂದಲ್ ಮೆರವಣಿಗೆ ನಡೆಯಿತು. ಕಡಬ ಟೌನ್ ಜುಮಾ ಮಸೀದಿ ಖತೀಬ್ ಹಾಜಿ ಇಬ್ರಾಹಿಂ ದಾರಿಮಿ ದುವಾ ನೆರವೇರಿಸಿದರು.

ಸೌಹಾರ್ದ ಸಂಗಮ:
ಸಯ್ಯದ್ ಹಮೀದ್ ತಂಙಳ್ ಮರ್ದಾಳ ದುವಾ ನೆರವೇರಿಸಿದರು. ಸೌಹಾರ್ದ ಸಂಗಮವನ್ನು ಉದ್ಘಾಟಿಸಿದ ಕಡಬ ರಹ್ಮಾನಿಯಾ ಟೌನ್ ಜುಮಾ ಮಸೀದಿ ಖತೀಬ್ ಹಾಜಿ ಇಬ್ರಾಹಿಂ ದಾರಿಮಿ ಮಾತನಾಡಿ ಪರಸ್ಪರ ಸಹೋದರತೆಯಿಂದ ಬಾಳಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯ, ನಮ್ಮ ಹಿರಿಯರು ತೋರಿಸಿಕೊಟ್ಟ ಸತ್ಯ ಮತ್ತು ಶಾಂತಿಯ ಹಾದಿಯಲ್ಲಿ ನಾವೂ ಸಾಗಬೇಕಾಗಿದೆ ಎಂದು ಅವರು ಹೇಳಿದರು.

ಕೋಮು ಸೌಹಾರ್ದತೆಯಿಂದ ಶಾಂತಿ ಸಾಧ್ಯ-ಇಕ್ಬಾಲ್ ಎಲಿಮಲೆ
ಸುಳ್ಯ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಮಾತನಾಡಿ ಕೋಮು ಸೌಹಾರ್ದತೆಯಿಂದ ಮಾತ್ರ ದೇಶದಲ್ಲಿ ಶಾಂತಿ, ಸಮಾಧಾನ ನೆಲೆಗೊಳ್ಳಲು ಸಾಧ್ಯವಿದ್ದು ದೇಶದ ಅಭಿವೃದ್ಧಿಯೂ ಸೌಹಾರ್ದತೆ ಮತ್ತು ಐಕ್ಯತೆಯ ತಳಹದಿಯಲ್ಲಿದೆ ಎಂದು ಹೇಳಿದರು. ಎಲ್ಲರೊಂದಿಗೆ ಅನ್ಯೋನ್ಯವಾಗಿ, ಶಾಂತಿಯುತವಾಗಿ ಬದುಕುವವರು ನಿಜವಾದ ದೇಶ ಪ್ರೇಮಿಗಳು ಎಂದ ಅವರು ನಮ್ಮ ದೇಶದ ಪರಂಪರೆ ಮತ್ತು ಹಿನ್ನೆಲೆ ಕೋಮು ಸಾಮರಸ್ಯದಿಂದ ಕೂಡಿದ್ದಾಗಿದೆ ಎಂದು ಹೇಳಿದರು.

ಜಗತ್ತು ಧರ್ಮ, ಶಾಂತಿಯ ನೆಲೆಗಟ್ಟಿನಲ್ಲಿದೆ-ಜನಾರ್ದನ
ನಿವೃತ್ತ ಶಿಕ್ಷಕ ಜನಾರ್ದನ ಮಾತನಾಡಿ ಜಗತ್ತೇ ಧರ್ಮ ಮತ್ತು ಶಾಂತಿಯ ನೆಲೆಗಟ್ಟಿನಲ್ಲಿ ನಿಂತಿದ್ದು ಅವರವರ ಧರ್ಮವನ್ನು ಪಾಲಿಸಿಕೊಂಡು ಇನ್ನೊಂದು ಧರ್ಮವನ್ನು ಗೌರವಿಸಿದಾಗ ನಾವೆಲ್ಲರೂ ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಎಂದರು.
ಉಮ್ಮರ್ ಮುಸ್ಲಿಯಾರ್ ಹಾಗೂ ಶರೀಫ್ ಫೈಝಿ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಇಸಾಕ್ ಹಾಜಿ ಪಾಜಪಳ್ಳ, ಫಝಲ್ ಕೋಡಿಂಬಾಳ, ಅಬ್ದುಲ್ ರಹಿಮಾನ್ ಅದ್ಕಾಡಿ, ಉಮ್ಮರ್ ಮುಸ್ಲಿಯಾರ್, ಲತೀಫ್ ಹರ್ಲಡ್ಕ, ಚಂದ್ರಶೇಖರ್ ಗೌಡ, ಅಬ್ದುಲ್ ರಶೀದ್ ಸಖಾಫಿ, ಕಡಬ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಶರೀಫ್ ಕೇಪು, ಅಬ್ದುಲ್ ಖಾದರ್ ಕೋಡಿಂಬಾಳ, ಮೊಯ್ದೀನ್, ಡಾ.ಸಯ್ಯದ್ ನಝೀರ್ ಸಾಹೇಬ್, ಶರೀಫ್ ಫೈಝಿ ಪನ್ಯ, ಸೀತಾರಾಮ ಶೆಟ್ಟಿ, ಜಲೀಲ್ ಬೈತಡ್ಕ, ಮಹಮ್ಮದ್ ಬೆಳ್ಳಾರೆ, ಅಹ್ಮದ್ ಅಲಿ ಹೊಸ್ಮಠ ಉಪಸ್ಥಿತರಿದ್ದರು. ಎಡಮಂಗಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ಖಾದರ್ ಸ್ವಾಗತಿಸಿದರು.

ಉರೂಸ್ ಸಮಾರೋಪ:
ಉರೂಸ್ ಸಮಾರೋಪ ಸಮಾರಂಭವನ್ನು ಸಮದ್ ಸಖಾಫಿ ಜೋಗಿಬೆಟ್ಟು ಉದ್ಘಾಟಿಸಿದರು. ಸಯ್ಯದ್ ಮಶ್‌ಹೂರ್ ಮುಲಕ್ಕೋಯ ತಂಙಳ್ ಕೊಡುವಳ್ಳಿ ಕೇರಳ ಮುಖ್ಯ ಪ್ರಭಾಷಣ ನಡೆಸಿದರು. ಸಯ್ಯದ್ ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಸಮಾರೋಪ ದುವಾ ಮಾಡಿದರು. ಜಮಾಅತ್ ಅಧ್ಯಕ್ಷ ಮಹಮ್ಮದ್ ಶರೀಫ್ ಕೇಪು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಡಬ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ರಶೀದ್ ಸಅದಿ ಸ್ವಾಗತಿಸಿದರು.

ಕಡಬ ಸೌಹಾರ್ದತೆಯ ನಾಡು-ಮೀರಾ ಸಾಹೇಬ್
ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಹಾಜಿ ಸೈಯದ್ ಮೀರಾ ಸಾಹೇಬ್ ಮಾತನಾಡಿ ಇಲ್ಲಿನ ದರ್ಗಾಗೆ ನೂರಾರು ವರ್ಷಗಳ ಇತಿಹಾಸವಿದ್ದು ಜಾತಿ, ಧರ್ಮದ ಬೇಧವಿಲ್ಲದೇ ಇಲ್ಲಿಗೆ ಜನರು ಆಗಮಿಸುತ್ತಾರೆ ಎಂದು ಹೇಳಿದರು. ಕಡಬ ಸೌಹಾರ್ದತೆಯ ನಾಡಾಗಿದ್ದು ಹಿರಿಯರು ಕಟ್ಟಿ ಬೆಳೆಸಿದ ಸೌಹಾರ್ದ ಪರಂಪರೆಯನ್ನು ಉಳಿಸುವ ಕೆಲಸ ಆಗಬೇಕಾಗಿದೆ,
ಊರಿನಲ್ಲಿ ಶಾಂತಿ, ಸೌಹಾರ್ದತೆಯ ವಾತಾವರಣ ನಿರಂತರವಾಗಿರಬೇಕು ಎಂದ ಅವರು ನಮ್ಮೂರಿನ ಸೌಹಾರ್ದತೆಗೆ ತನ್ನದೇ ಆದ ಇತಿಹಾಸವಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here