ಸಿರಿಕಡಮಜಲು ಕೃಷಿಕ್ಷೇತ್ರದಲ್ಲಿ ‘ಕೃಷಿ ಸಾಹಿತ್ಯ ಸಂಭ್ರಮ’-ಕ.ಸಾ.ಪ. ಪುತ್ತೂರು ಹೋಬಳಿ ಘಟಕದ ಪದ ಸ್ವೀಕಾರ

0

ಪುತ್ತೂರು: ಕೃಷಿಯಲ್ಲಿ ಅನೇಕ ಸಾಹಿತ್ಯವನ್ನು ಬಳಸಿ ಸಮೃದ್ಧ ಕ್ಷೇತ್ರವಾಗಿ ಪರಿವರ್ತನೆಯಾದ ಸಿರಿ ಕಡಮಜಲಿನ ಮಣ್ಣಿನಲ್ಲಿ ಫೆ. 6 ರಂದು  ಕೃಷಿಯೂ, ಸಾಹಿತ್ಯವೂ ಬೆರೆಯಿತು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪುತ್ತೂರು ಹೋಬಳಿ ಘಟಕದ ಪದ ಸ್ವೀಕಾರ, ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ, ಕೃಷಿ ಸಾಹಿತ್ಯ ಸಂಭ್ರಮ ಹಾಗೂ ಕಡಮಜಲು ಸುಭಾಸ್ ರೈ ಮತ್ತು ಸುದರ್ಶನ್ ಮೂಡಬಿದ್ರೆಯವರ ಹುಟ್ಟುಹಬ್ಬ ಆಚರಣೆ ಫೆ. 6 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಿತು.

ಕೃಷಿ ಸಂಸ್ಕೃತಿ ವ್ಯಾಪಕವಾಗಲಿ – ಡಾ. ತಾಳ್ತಜೆ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ವಾಂಸರಾದ ಡಾ. ವಸಂತ ಕುಮಾರ್ ತಾಳ್ತಜೆಯವರು,  ‘ಕೃಷಿ ಸಂಸ್ಕೃತಿ ವ್ಯಾಪಕವಾಗಲಿ. ಮಕ್ಕಳಿಗೆ ಹಿಂದಿನ ಕೃಷಿ ಪದ್ದತಿಯನ್ನು ತಿಳಿಯಪಡಿಸುವ ಕೆಲಸವಾಗವೇಕು.  ಕಡಮಜಲು ಕೃಷಿ ಕ್ಷೇತ್ರದಂತಹ ಮಾದರಿ ಕ್ಷೇತ್ರ ಇಂದು ಕೃಷಿ ಮತ್ತು ಸಾಹಿತ್ಯ ಕ್ಷೇತ್ರಗಳರೆಡರ ಬೆಳವಣಿಗೆಗೂ ಸಹಕಾರಿಯಾಗಿದೆ. ಪರಿಮಳ, ಅಂದ ಸೂಸುವ ಹೂ ಪ್ರಕೃತಿಯಲ್ಲಿದ್ದರೂ ಅದನ್ನು ಮುಡಿಯದಿದ್ದರೆ ಹೇಗೆ ಬಾಡಿ ಹೋಗುತ್ತದೋ ಅದೇ ರೀತಿ ಕೃಷಿಕನು ತನ್ನ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾನೆ ಎಂಬುದಕ್ಕೆ ಕಡಮಜಲರುರವರು ಮಾದರಿ’ ಎಂದರು. ನಮ್ಮ ಅಹಂ, ಇಗೋ ಸಣ್ಣದಾಗಬೇಕಾದರೆ ನಿಸರ್ಗದ ಮುಂದೆ ಇರಬೇಕು. ಆ ದಿಶೆಯಲ್ಲಿ ಕಡಮಜಲುರವರು ಅಭಿನಂದನಾರ್ಹರು’ ಎಂದರು.

ಹೆಚ್ಚು ಬೆಳೆಯ ಬದಲು ಶುದ್ಧವಾದುದು ಬೆಳೆಯಬೇಕು – ಪರಮೇಶ್ವರ ರಾವ್
ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೃಷಿ ಸಾಹಿತ್ಯ ವೈವಿಧ್ಯ’ ವಿಷಯದಲ್ಲಿ ಮಾತನಾಡಿದ ಪ್ರಕೃತಿಪರ  ಕೃಷಿಕರಾದ ಮಿತ್ತಬಾಗಿಲಿನ ಬಿ. ಕೆ. ಪರಮೇಶ್ವರ್ ರಾವ್ ಕೃಷಿಕನಾದವನು ಆರ್ಥಿಕವಾಗಿ ಬಡವನಾದರೂ, ಉಳಿದೆಲ್ಲಾ ಕ್ಷೇತ್ರಗಳಲ್ಲಿ ಆತ ಬಡವನಲ್ಲ. ಕೃಷಿಯಷ್ಟು ಉತ್ತಮವಾದ ಉದ್ಯೋಗ ಇನ್ನೊಂದಿಲ್ಲ. ಭೂಮಿಯ ರಕ್ತದ ನೀರನ್ನು ಪಡೆಯುವ ಬದಲು ಬೆವರು ನೀರನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ನಾವು ಮನಮಾಡಬೇಕು. ಹಿಂದಿನ ಆಹಾರ ವೈವಿಧ್ಯ, ಕೃಷಿ ಪದ್ದತಿಗಳು ಸಮಾಜದಲ್ಲಿ ಇತರ ಎಲ್ಲಾ ಕ್ಷೇತ್ರಗಳಿಗೆ ಸುಸ್ಥಿರ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಿದ್ದವು. ಮೇಲ್ಪದರ ಮಣ್ಣನ್ನು ರಕ್ಷಿಸಿಕೊಂಡು ಮಾಡುತ್ತಿದ್ದ ಕೃಷಿ ಭೂಮಿಯ ಸಂರಕ್ಷಣೆ ಜೊತೆಗೆ ಉತ್ತಮ ಫಸಲನ್ನೂ ಪಡೆಯಲಾಗುತ್ತಿತ್ತು. ನಾವು ಹೆಚ್ಚು ಬೆಳೆಯುವ ಬದಲು ಶುದ್ಧವಾದುದನ್ನು ಬೆಳೆಯಬೇಕು.

ಆರೋಗ್ಯ ಪೂರ್ಣ ಸಮಾಜಕ್ಕೆ ಸಾಹಿತ್ಯ ಬೇಕು – ಎಂ.ಪಿ. ಶ್ರೀನಾಥ್
ಸಭಾಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ರವರು ಮಾತನಾಡಿ ‘ಸಾಹಿತ್ಯ ಪರಿಷತ್ ಮೂಲಕ 400 ಕ್ಕೂ ಅಧಿಕ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆದಿವೆ. ಅತೀ ಹೆಚ್ಚು ಕಾರ್ಯಕ್ರಮ ಆಗಿರುವುದು ಪುತ್ತೂರಿನಲ್ಲಿ. ಸಾಹಿತ್ಯ ಪರಿಷತ್ ನ ಯಾವುದೇ ಕಾರ್ಯಕ್ರಮದಲ್ಲಿ ಪುತ್ತೂರು ಮೊದಲಿಗ ಸ್ಥಾನದಲ್ಲಿದೆ. ವಿಶ್ವದಲ್ಲಿ ಅತ್ಯಂತ ಬಲಿಷ್ಠ ಸಂಘಟನೆ ಇರುವುದು ಸಾಹಿತ್ಯ ಪರಿಷತ್. ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುವ ಅತ್ಯಂತ ಶ್ರೇಷ್ಠ ಸಂಘಟನೆಯಾಗಿದೆ. ಆರೋಗ್ಯಪೂರ್ಣ ಸಮಾಜಕ್ಕಾಗಿ ಸಾಹಿತ್ಯ ಬೇಕು.  ವಿದ್ಯಾರ್ಥಿಗಳು ಮತ್ತು ಯುವಜನರನ್ನು ಸಾಹಿತ್ಯದೆಡೆಗೆ ಕರೆತರುವ ಉದ್ದೇಶ ಪರಿಷತ್ ಮುಂದಿದೆ’ ಎಂದರು.ಮುಖ್ಯ ಅತಿಥಿಯಾಗಿ ಪುತ್ತೂರು ಭಾರತೀಯ ಗೇರು ಸಂಶೋಧನಾ ನಿರ್ದೇಶನಾಲಯದ ಡಾ. ದಿನಕರ ಅಡಿಗ ಭಾಗವಹಿಸಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯಕುಮಾರ  ರೈ ಕೋರಂಗ ರವರು ಮಾತನಾಡಿ ‘ಸುಭಾಸ್ ರೈಯವರ ನೇತೃತ್ವದಲ್ಲಿ ಸಾಹಿತ್ಯ ಸಮ್ಮೇಳನ ಜರಗಿದ್ದ ಸಂದರ್ಭದಲ್ಲಿ ಮಾಡಿರುವ ಕೆಲಸ ಕಾರ್ಯಗಳನ್ನು ನೆನಪಿಸಿಕೊಂಡು, ಅತಿಥಿ ಸ್ಥಾನದಲ್ಲಿ ಕಡಮಜಲುರವರು ನೀಡಿದ ಗೌರವಕ್ಕೆ ಅಭಾರಿಯಾಗಿದ್ದೇನೆ. ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಆಕರ್ಷಣ್ ಅದೃಷ್ಟ ಚೀಟಿ
ಇದೇ ವೇಳೆ ಆಕರ್ಷಣ್ ಇಂಡಸ್ಟ್ರೀಸ್ ವತಿಯಿಂದ ಅದೃಷ್ಟಚೀಟಿ ಯೋಜನೆ ಮಾಡಲಾಗಿತ್ತು. ಭಾಸ್ಕರ ರೈ ಕೊಡೆಂಕಿರಿ ಚಿನ್ನದ ಉಂಗುರ ಬಹುಮಾನ ವಿಜೇತರಾದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ.ಪ. ಜಿಲ್ಲಾ ಕೋಶಾಧ್ಯಕ್ಷರಾದ ಐತ್ತಪ್ಪ ನಾಯ್ಕ್ ರವರು ‘ಪುತ್ತೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೆ ಕಡಮಜಲು ಸುಭಾಸ್ ರೈಯವರು ಅನೇಕ ಕೊಡುಗೆ ನೀಡಿದವರು ಎಂದರು.ಕೆಯ್ಯೂರು ಸಾಹಿತ್ಯ ಸಮ್ಮೇಳನದಲ್ಲಿ ಉಳಿದ ಹಣವನ್ನು ದತ್ತಿನಿಧಿ ಮಾಡಿಕೊಂಡು ಪ್ರತೀ ವರ್ಷ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದತ್ತಿನಿಧಿ ಕಾರ್ಯಕ್ರಮ ನಡೆಸುವುದರಿಂದ ಪ್ರತೀ ಊರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಿರುವುದು ಸಾರ್ಥಕವಾಗಲಿದೆ. ಹೋಬಳಿ ಘಟಕದ ಪದಸ್ವೀಕಾರ ಪುತ್ತೂರಿಗೆ ಪ್ರಥಮವಾಗಿದೆ ಎಂದರು.

ಕ.ಸಾ.ಪ‌ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ರವರು ಮಾತನಾಡಿ ‘ಸಾಹಿತ್ಯ ಪರಿಷತ್ ಬೆಳೆದು ಸಮೃದ್ಧವಾಗುತ್ತಿದೆ. ಕಡಮಜಲುರವರ ಪ್ರೋತ್ಸಾಹ ಉತ್ಸಾಹದಲ್ಲಿ ಸಾಹಿತ್ಯ ಕ್ಷೇತ್ರ ಬೆಳೆಯಲಿ ಎಂಬ ಆಶಯ ಹೊಂದಿದ್ದೇನೆ ಎಂದ ಅವರು ಕ.ಸಾ.ಪ. ದ ವೆಬ್‌ಸೈಟ್ ಅನವಾರಣ, ಮೊಬೈಲ್ ಆಪ್ ಅನಾವರಣದ ಬಗ್ಗೆ ಇದೇ ವೇಳೆ‌ ತಿಳಿಸಿದರು.

ಅತಿಥಿಗಳನ್ನು ಸ್ವಾಗತಿಸಿದ ಕಡಮಜಲು ಸುಭಾಸ್ ರೈಯವರು ‘ಕೃಷಿ ಭೂಮಿ ಧರ್ಮಕ್ಷೇತ್ರದಂತೆ. ಹಾಗಾಗಿ  ನನ್ನ ಕೃಷಿ ಭೂಮಿಯನ್ನು ಎಸ್ಟೇಟ್ ಎಂದು ಹೆಸರಿಸದೇ ಕೃಷಿಕ್ಷೇತ್ರ ಎಂದು ಇಟ್ಟಿದ್ದೇನೆ. ಕೃಷಿ ಮತ್ತು ಸಾಹಿತ್ಯ ಅತ್ಯಂತ ಹತ್ತಿರವಾಗಿರುತ್ತದೆ‌. ಕೃಷಿಯಲ್ಲಿ ಸಾಹಿತ್ಯವಿದ್ದರೆ ಕೃಷಿ ಸಂಪತ್ತು ವೃದ್ಧಿಯಾಗುತ್ತದೆ. ಸಾಹಿತ್ಯದಲ್ಲಿ ಕೃಷಿ ಇದ್ದಾಗಲೂ ಅದು ಸಾಧನೆಗೆ ಹಾದಿಯಾಗುತ್ತದೆ’ ಎಂದರು.

ಪದ ಸ್ವೀಕಾರ
ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಮತ್ತು ಪದಾಧಿಕಾರಿಗಳಿಗೆ ಕನ್ನಡ ಭುವನೇಶ್ವರಿಯ ಧ್ವಜ ಹಸ್ತಾಂತರಿಸುವ ಮೂಲಕ ಪದಸ್ವೀಕಾರ ನಡೆಯಿತು. ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ರವರು ಧ್ವಜ ಹಸ್ತಾಂತರಿಸಿದರು.

ಪುತ್ತೂರು ಹೋಬಳಿ ಘಟಕದ ಗೌರವ ಕೋಶಾಧ್ಯಕ್ಷರಾದ ಎ.ಕೆ. ಜಯರಾಮ ರೈ, ಗೌರವ ಕಾರ್ಯದರ್ಶಿ ಸಿ.ಶೇ. ಕಜೆಮಾರ್, ಸಂಘಟನಾ ಕಾರ್ಯದರ್ಶಿ ವಿನೋದ್ ಕುಮಾರ್ ಕೆ.ಎಸ್., ಮಹಿಳಾ ಪ್ರತಿನಿಧಿ ಪೂರ್ಣಿಮಾ ಪೆರ್ಲಂಪಾಡಿ, ಸದಸ್ಯರಾದ ಬಾಬು ಟಿ., ವಿಶ್ವನಾಥ ಪೂಜಾರಿ, ಎಸ್.ಡಿ. ವಸಂತ ಸರ್ವೆದೋಳ, ಎಸ್.ಪಿ. ಬಶೀರ್ ರವರು ಅತಿಥಿಗಳನ್ನು ಶಾಲು, ಪುಸ್ತಕ ನೀಡಿ ಗೌರವಿಸಿದರು.

ಕರ್ನಾಟಕ ಪಬ್ಲಿಕ್ ಸ್ಕೂಲ್  ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಹೋಬಳಿ ಘಟಕದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಸ್ವಾಗತಿಸಿದರು‌. ಹೋಬಳಿ ಘಟಕದ ಪ್ರತಿನಿಧಿ ಕೆಪಿಎಸ್ ಕುಂಬ್ರ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್. ವಂದಿಸಿದರು. ಕೆಪಿಎಸ್ ಪ್ರಾಥಮಿಕ ಶಾಲಾ ಮುಖ್ಯಗುರು ಬಾಬು ಎಂ. ರವರು ಕಾರ್ಯಕ್ರಮ ನಿರೂಪಿಸಿದರು.ಸಾಹಿತಿ ವಿ.ಬಿ. ಅರ್ತಿಕಜೆ, ಉಪ್ಪಿನಂಗಡಿ ಹೋಬಳಿ ಘಟಕದ ನಿಯೋಜಿತ ಅಧ್ಯಕ್ಷ ಕರುಣಾಕರ ಸುವರ್ಣ, ಮಾರಪ್ಪ ಶೆಟ್ಟಿ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಹುಟ್ಟುಹಬ್ಬ ಆಚರಣೆ
ಕಡಮಜಲು ಮತ್ತು ಸುದರ್ಶನ್ ರವರ ಹುಟ್ಟುಹಬ್ಬ ಆಚರಣೆ ವೇಳೆ ಮಾತನಾಡಿದ ಸುದರ್ಶನ್ ಮೂಡಬಿದ್ರೆಯವರು  ‘ತನ್ನ ಮಕ್ಕಳ ಹುಟ್ಟುಹಬ್ಬವನ್ನು ತಿಥಿ, ನಕ್ಷತ್ರ ನೋಡಿಕೊಂಡು ಆಚರಿಸುತ್ತಿದ್ದೇನೆ. ಜಗತ್ತು ನಮ್ಮ ಕುಟುಂಬ ಪದ್ದತಿಯನ್ನು ಒಪ್ಪಿಕೊಂಡಿದೆ. ನನ್ನ ಇಡೀ ಪ್ರವಾಸದಲ್ಲಿ ಕಡಮಜಲು ರವರಂತಹ ಕುಟುಂಬವನ್ನು ಎಲ್ಲೂ‌ ನೋಡಿಲ್ಲ. ಹಿರಿಯರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಂತೋಷಪಡುತ್ತೇನೆ’ ಎಂದರು. ಶುಭ ಹಾರೈಸಿದ ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರು ಮಾತನಾಡಿ ‘ಕಡಮಜಲುರವರ 75 ರ ಸಂಭ್ರಮವನ್ನು ಕಾಣುವ ಭಾಗ್ಯ ನಮ್ಮೆಲ್ಲರಿಗೂ ದೊರೆಯುವಂತಾಗಲಿ’ ಎಂದರು.

ಕಡಮಜಲು, ಸುದರ್ಶನ್ ಮೂಡಬಿದ್ರೆ ಹುಟ್ಟುಹಬ್ಬ
ಕೃಷಿ ಸಾಹಿತ್ಯ ಸಂಭ್ರಮದ ವೇಳೆ ಕಡಮಜಲು ಸುಭಾಸ್ ರೈರವರು ತನ್ನ 74 ರ ಸಂಭ್ರಮ ಮತ್ತು ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆಯವರು ದೀಪ ಬೆಳಗಿಸಿ, ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಪ್ರೀತಿ ಸುಭಾಸ್ ರೈ, ಹಿರಿಯ ಸಾಹಿತಿ ಪ್ರೊ.‌ವಿ.ಬಿ. ಅರ್ತಿಕಜೆ, ಹಿರಿಯ ಕೃಷಿಕ ಮಾರಪ್ಪ ಶೆಟ್ಟಿ ಬೈಲುಗುತ್ತು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here