ಕಾಲ್ನಡಿಗೆ ಮೂಲಕ ಪವಿತ್ರ ಮಕ್ಕಾ ತಲುಪಿದ ಉಪ್ಪಿನಂಗಡಿಯ ಯುವಕ ಅಬ್ದುಲ್ ಖಲೀಲ್

0

✒️ಯೂಸುಫ್ ರೆಂಜಲಾಡಿ

ಪುತ್ತೂರು: ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಿಂದ 2023 ಜನವರಿ 30ರಂದು ಸೌದಿ ಅರೇಬಿಯಾದ ಪವಿತ್ರ ಮಕ್ಕಾಗೆ ಕಾಲ್ನಡಿಗೆ ಯಾತ್ರೆ ಹಮ್ಮಿಕೊಂಡಿದ್ದ ಅಬ್ದುಲ್ ಖಲೀಲ್(ನೌಶಾದ್ ಬಿಕೆಎಸ್) ಅವರು ಫೆ.1ರಂದು ಮಕ್ಕಾ ತಲುಪಿದ್ದಾರೆ. ಆ ಮೂಲಕ ಒಂದು ವರ್ಷ ಎರಡು ದಿನಗಳ ತನ್ನ ಸುಧೀರ್ಘ ಕಾಲ್ನಡಿಗೆ ಯಶಸ್ವಿಯಾಗಿ ಪೂರ್ತಿಗೊಂಡಿದ್ದು ಉಮ್ರಾ ಕರ್ಮವನ್ನು ಈಗಾಗಲೇ ನೆರವೇರಿಸಿದ್ದಾರೆ. ಈ ಬಾರಿಯ ಹಜ್ ಕರ್ಮ ನಿರ್ವಹಿಸಿದ ಬಳಿಕ ಅವರು ಊರಿಗೆ ವಾಪಸ್ ಬರಲಿದ್ದಾರೆ.


ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕ ನಿವಾಸಿ ಮುಹಮ್ಮದ್ ಹಾಗೂ ನಫೀಸಾ ದಂಪತಿಗಳ ಪುತ್ರನಾದ ಅಬ್ದುಲ್ ಖಲೀಲ್(ನೌಶಾದ್ ಬಿಕೆಎಸ್) ಅವರು ತನ್ನ ಒಂದು ವರ್ಷದ ಯಾತ್ರೆಯಲ್ಲಿ 8150 ಕಿ.ಮೀ ದೂರವನ್ನು ಕಾಲ್ನಡಿಗೆ ಮೂಲಕ ಸಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಭಾರತ, ಪಾಕಿಸ್ತಾನ, ಒಮನ್, ಯುಎಇ ಮತ್ತು ಸೌದಿ ಅರೇಬಿಯಾ ಮೂಲಕ ಅವರು ಮಕ್ಕಾ ತಲುಪಿದ್ದು ಪಾಕಿಸ್ತಾನದಲ್ಲಿ ಅವರ ಕಾಲ್ನಡಿಗೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ವಾಘಾ ಗಡಿಯ ಮೂಲಕ ಪಾಕಿಸ್ತಾನ ಪ್ರವೇಶಿಸಿ ಅಲ್ಲಿಂದ ವಿಮಾನದಲ್ಲಿ ಒಮಾನ್ ದೇಶ ಪ್ರವೇಶಿಸಿದ್ದು ಅಲ್ಲಿಂದ ಮತ್ತೆ ಕಾಲ್ನಡಿಗೆಯನ್ನು ಮುಂದುವರಿಸಿದ್ದರು. ಕಾಲ್ನಡಿಗೆ ಮಾಡಿರುವ ದೇಶಗಳಲ್ಲಿ ಅಬ್ದುಲ್ ಖಲೀಲ್‌ರವರಿಗೆ ಉತ್ತಮ ಸಹಕಾರ ದೊರಕಿತ್ತಲ್ಲದೇ ಜನರು ಕೂಡಾ ಇವರ ಜೊತೆ ಹೆಜ್ಜೆ ಹಾಕಿ ಬೆಂಬಲ ನೀಡಿದ್ದರು.

ಯಶಸ್ಸು ತಾಯಿಗೆ ಸಮರ್ಪಣೆ:
ತನ್ನ ಕಾಲ್ನಡಿಗೆ ಯಾತ್ರೆ ಕುರಿತು ಮಕ್ಕಾದಿಂದಲೇ ‘ಸುದ್ದಿ’ ಜೊತೆ ಮಾತನಾಡಿದ ಅಬ್ದುಲ್ ಖಲೀಲ್(ನೌಶಾದ್ ಬಿಕೆಎಸ್)ಅವರು ನನ್ನ ಕಾಲ್ನಡಿಗೆ ಒಂದು ವರ್ಷ ಪೂರ್ತಿಗೊಂಡ ಬಳಿಕ ನಾನು ಪವಿತ್ರ ಮಕ್ಕಾಗೆ ತಲುಪಿದ್ದು ಇದರ ಖುಷಿ ಮತ್ತು ಸಂತೋಷವನ್ನು ಹೇಳಿ ಮುಗಿಸಲು ಸಾಧ್ಯವಿಲ್ಲ, ಅಲ್ಲಾಹನ ಅಪಾರವಾದ ಅನುಗ್ರಹದಿಂದ ನಾನು ಮಕ್ಕಾ ತಲುಪಿದ್ದು ನನ್ನ ಯಾತ್ರೆಯ ಯಶಸ್ಸನ್ನು ನನ್ನ ತಾಯಿಗೆ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.

ಎಲ್ಲೆಡೆ ಸಹಕಾರ ಸಿಕ್ಕಿತ್ತು:
ನಾನು ಕಾಲ್ನಡಿಗೆ ಯಾತ್ರೆ ಮಾಡುತ್ತಿದ್ದ ವೇಳೆ ಆಯಾ ರಾಜ್ಯ, ದೇಶದ ಜನರು ನನಗೆ ಸಂಪೂರ್ಣ ಸಹಕಾರವನ್ನು ನೀಡಿದ್ದರು, ಕಾಲ್ನಡಿಗೆ ಮೂಲಕ ನನ್ನ ದೇಶದ ಹಾಗೂ ಇತರ ದೇಶದ ಸಂಪ್ರದಾಯ, ಪರಂಪರೆಯನ್ನು ಅರಿಯಲೂ ಸಾಧ್ಯವಾಯಿತು ಎಂದ ಅವರು ನನ್ನ ಕಾಲ್ನಡಿಗೆಯನ್ನು ವಿರೋಧಿಸಿದ ಕೆಲವರು ನನ್ನನ್ನು ನಿಂದಿಸಿ, ಅವಮಾನಿಸುವ ಪ್ರಯತ್ನ ಮಾಡಿದ್ದರು ಕೂಡಾ ದೇವರು ನನ್ನನ್ನು ಕೈಬಿಡಲಿಲ್ಲ, ಕಾಲ್ನಡಿಗೆ ವೇಳೆ ನನ್ನ ಆರೋಗ್ಯ ಕೂಡಾ ಚೆನ್ನಾಗಿತ್ತು. ಜಾತಿ, ಮತ, ಧರ್ಮ ನೋಡದೇ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬಾಳುವಂತಾಗಬೇಕು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮಕ್ಕಾದಲ್ಲಿ ನಾಲ್ಕು ತಿಂಗಳು ಇದ್ದು ಹಜ್ ಪೂರ್ತಿಗೊಳಿಸಿ ಭಾರತಕ್ಕೆ ವಾಪಸಾಗುವುದಾಗಿ ಅಬ್ದುಲ್ ಖಲೀಲ್
ತಿಳಿಸಿದ್ದಾರೆ.

ನನ್ನ ಕಾಲ್ನಡಿಗೆ ಯಾತ್ರೆಯ ಉದ್ದೇಶ ಪವಿತ್ರ ಮಕ್ಕಾಗೆ ತಲುಪಿ ಹಜ್, ಉಮ್ರಾ ನಿರ್ವಹಿಸುವುದಾಗಿತ್ತು. ಕಾಲ್ನಡಿಗೆ ಯಾತ್ರೆ ಅಲ್ಪ ಸವಾಲಾಗಿದ್ದರೂ ಕೂಡಾ ಎಲ್ಲಾ ಜಾತಿ, ಧರ್ಮಗಳ ಜನರ ಬೆಂಬಲ, ಸಹಕಾರ ನಿರೀಕ್ಷೆಗೂ ಮೀರಿ ಸಿಕ್ಕಿದ್ದರಿಂದ ಯಾವುದೇ ಅಡಚಣೆಯಿಲ್ಲದೇ ಯಾತ್ರೆ ಯಶಸ್ವಿಯಾಗಿದೆ. ಸುಽರ್ಘ ಯಾತ್ರೆ ನಿರೀಕ್ಷಿತ ಗುರಿ ತಲುಪಿದಾಗ ನನಗಾದ ಸಂತೋಷಕ್ಕೆ ಪಾರವೇ ಇಲ್ಲ. ದೇವರ ಅನುಗ್ರಹದಿಂದ ನನ್ನ ಮಕ್ಕಾ ಯಾತ್ರೆ ಯಶಸ್ವಿಯಾಗಿದ್ದು ಹಜ್ ಕರ್ಮ ಪೂರ್ತಿಗೊಳಿಸಿದ ಬಳಿಕ ಊರಿಗೆ ವಾಪಸ್ ಬರಲಿದ್ದೇನೆ. ಭಾರತದ ಮಣ್ಣಿನಲ್ಲಿ ನಾವೆಲ್ಲರೂ ಐಕ್ಯತೆ ಮತ್ತು ಸಾಹೋದರ್ಯತೆಯಿಂದ ಬಾಳುವಂತಾಗಬೇಕು ಎಂದು ನಾನಿಲ್ಲಿ ದೇವರಲ್ಲಿ ಪ್ರಾರ್ಥಿಸುತ್ತೇನೆ.
-ಅಬ್ದುಲ್ ಖಲೀಲ್

LEAVE A REPLY

Please enter your comment!
Please enter your name here