ಪುತ್ತೂರು: ಶ್ರೀ ಭಾರತೀ ಅಮರಜ್ಯೋತಿ ಮಂದಿರ ಅಮರಗಿರಿ’ಗೆ ವರ್ಷದ ಸಂಭ್ರಮ ಕನ್ಯಾಕುಮಾರಿಯಲ್ಲಿರುವ ಭಾರತ ಮಾತಾ ಪೂಜನಾ ಮಂದಿರ ಬಿಟ್ಟರೆ ದಕ್ಷಿಣ ಭಾರತದಲ್ಲೇ ಪ್ರಥಮ ಭಾರತ ಮಾತಾ ಪೂಜನಾ ಮಂದಿರ ಎನಿಸಿಕೊಂಡಿರುವ ಅಮರಗಿರಿಯ ಶ್ರೀ ಭಾರತಿ ಅಮರಜ್ಯೋತಿ ಮಂದಿರಕ್ಕೆ ಪ್ರಥಮ ವರ್ಷದ ಸಂಭ್ರಮ.
ಬದುಕು ಸಮಾಜಕ್ಕಾಗಿ, ಪ್ರಾಣ ದೇಶಕ್ಕಾಗಿ ಎಂಬ ದಿವ್ಯ ಸಂದೇಶದೊಂದಿಗೆ ಅಖಂಡ ಭಾರತದ ಪರಿಕಲ್ಪನೆಯ ಅನಾವರಣದೊಂದಿಗೆ ಶ್ರೀ ಭಾರತಿ ಅಮರಜ್ಯೋತಿ ಮಂದಿರಕ್ಕೆ ತೆರೆದುಕೊಳ್ಳುವ ಒಂದು ದಿವ್ಯಾನುಭವವನ್ನು ನೀಡುವ ಸ್ಥಳವೇ ಅಮರಗಿರಿ. ಅಖಂಡ ಭಾರತ ಪರಿಕಲ್ಪನೆಯನ್ನು ಬಹಳ ವಿಶೇಷ, ವಿಭಿನ್ನವಾಗಿ ಮನಮುಟ್ಟುವಂತೆ ಇಲ್ಲಿ ತೆರೆದಿಡಲಾಗಿದೆ. ಈ ಅಮರಗಿರಿಯ ಧ್ವಾರವನ್ನು ಪ್ರವೇಶಿಸುತ್ತಿದ್ದಂತೆ ನಮ್ಮ ಮನಸ್ಸು ದೇಶ ಭಕ್ತಿ, ದೇಶ ಪ್ರೇಮದ ಕಡೆಗೆ ತೆರೆದುಕೊಳ್ಳುತ್ತದೆ. ರಾಷ್ಟ್ರಧ್ವಜ, ರಾಷ್ಟ್ರಲಾಂಭನದೊಂದಿಗೆ ಪವಿತ್ರ ವಂದೇ ಮಾತರಂ ಗೀತೆಯ ಸಾಲುಗಳು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ. ಎದುರು ಕಣ್ಣಾಡಿಸಿದರೆ ವಿಶಾಲವಾದ ಪಾರ್ಕ್, ಸೈನಿಕಕ ಮುಷ್ಠಿ ಹಿಡಿದ ಕೈ, ಕೈಯಲ್ಲೊಂದು ಹಾರಾಡುತ್ತಿರುವ ತ್ರಿವರ್ಣ ಧ್ವಜ, ಎದುರಿಗೆ ದಿಬ್ಬವೊಂದರ ಮೇಲೆ ನಿರ್ಮಾಣಗೊಂಡ ಶ್ರೀ ಭಾರತಿ ಅಮರಜ್ಯೊತಿ ಮಂದಿರ.
ಅಮರಗಿರಿಯ ವೈಭವವನ್ನು ಕೇವಲ ಮಾತಿನಿಂದ ಹೇಳಿದರೆ ಯಾರಿಗೂ ಅರ್ಥವಾಗದು ಇದನ್ನು ಸ್ವತಃ ನಮ್ಮ ಕಣ್ಣುಗಳಿಂದ ಅನುಭವಿಸಿಯೇ ನೋಡಬೇಕಾಗಿದೆ. ಪ್ರಕೃತಿಯ ಮಡಿಲಲ್ಲಿ ಒಂದು ಅದ್ಭುತ ಕಲ್ಪನಾ ಲೋಕವನ್ನು ಸೃಷ್ಟಿಸಿದ ಪರಿ ನಿಜಕ್ಕೂ ರೋಮಾಂಚನ ತರುತ್ತದೆ. ಬಹಳ ಸುಂದರವಾಗಿ ನಿರ್ಮಿಸಿದ ಹಚ್ಚ ಹಸುರಿನ ಪಾರ್ಕ್‌ನ ಇಕ್ಕೆಲಗಳಲ್ಲಿ ಸಾಗುತ್ತಿದ್ದರೆ ದೇಶ ಭಕ್ತಿ, ನಮ್ಮ ಸೈನಿಕರ ಮೇಲಿನ ಗೌರವ ಎಲ್ಲವೂ ನಮಗೆ ಗೊತ್ತಿಲ್ಲದಂತೆ ಮನಸ್ಸಲ್ಲಿ ಅರಳಿಕೊಳ್ಳುತ್ತದೆ. ಸಂಜೆಯ ಹೊತ್ತಲ್ಲಿ ಮನಸ್ಸಿಗೆ ಅಹ್ಲಾದತೆಯ ಅನುಭವವನ್ನು ನೀಡುವುದರ ಜೊತೆಗೆ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವ ಕಾರ್ಯವೂ ನಡೆಯುತ್ತದೆ.ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರಿಗೂ ಇಷ್ಟವಾಗುವ ಅಮರಗಿರಿ ದಕ್ಷಿಣ ಭಾರತದಲ್ಲೇ ಪ್ರಥಮ ಭಾರತ ಮಾತ ಮಂದಿರವಾಗಿದೆ.
ಫೆ.11: ಅಮರಗಿರಿಯ ವಾರ್ಷಿಕೋತ್ಸವ
ಅಮರಗಿರಿಯ ವಾರ್ಷಿಕೋತ್ಸವವು ಫೆ.11 ರಂದು ಜರಗಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹನುಮಗಿರಿ ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಸಭಾಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ನಿವೃತ್ತ ಸೇನಾ ಅಧಿಕಾರಿ ಕ್ಯಾ.ಬೃಜೇಶ್ ಚೌಟ, ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್.ಚಳ್ಳಂಗಾರು ಭಾಗವಹಿಸಲಿದ್ದು ನಿವೃತ್ತ ಯೋಧರಾಧ ವಿದ್ಯಾಧರ ಎನ್‌ರವರಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ವಿವೇಕಾನಂದ ಪದವಿ ಮಹಾವಿದ್ಯಾಲಯ ಪುತ್ತೂರು ಇದರ ಲಲಿತಕಲಾ ಸಂಘದ ವಿದ್ಯಾರ್ಥಿ ಕಲಾವಿದರಿಂದ ಶ್ರೀರಾಮ ಭಾವ ಯಾನ’ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.