ಹಿಂಜಾವೇ ಮುಖಂಡರಿಬ್ಬರಿಗೆ ಗಡಿಪಾರು ನೊಟೀಸ್ ಎಸಿಯವರ ಆದೇಶಕ್ಕೆ ಜಿಲ್ಲಾ ನ್ಯಾಯಾಲಯ ತಡೆ

0

ಪುತ್ತೂರು:ಹಿಂದು ಜಾಗರಣ ವೇದಿಕೆಯ ಮುಖಂಡರಾದ ದಿನೇಶ್ ಪಂಜಿಗ ಮತ್ತು ಬೆಳ್ತಂಗಡಿಯ ಯಶೋಧರ ಅವರಿಗೆ ಗಡಿಪಾರು ಕುರಿತು ಉಪವಿಭಾಗೀಯ ದಂಡಾಧಿಕಾರಿಯವರ ನೋಟೀಸ್‌ಗೆ ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆ ನೀಡಿದೆ.
ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಮತ್ತು ವೇಣೂರು ವಲಯದ ಮುಖಂಡರಾಗಿದ್ದ ಬೆಳಾಲು ನಿವಾಸಿ ಯಶೋಧರ ಎಂಬವರಿಗೆ, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ ೫೫ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಉಪವಿಭಾಗೀಯ ದಂಡಾಧಿಕಾರಿ ನೋಟೀಸ್ ಜಾರಿ ಮಾಡಿದ್ದರು.ನೀವು ಸ್ವತಃ ಯಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ಈ ಕುರಿತು ವಾದಿಸಬಹುದು ಎಂದು ಈ ಮೂಲಕ ನಿಮಗೆ ತಿಳಿಸಲಾಗಿದೆ.ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಭಾವಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೋಟೀಸ್‌ನಲ್ಲಿ ತಿಳಿಸಲಾಗಿತ್ತು.ನೊಟೀಸ್ ಜಾರಿ ಮಾಡಿರುವ ಉಪವಿಭಾಗೀಯ ಕಾರ್ಯನಿರ್ವಾಹಕ ದಂಡಾಧಿಕಾರಿಯವರ ಕ್ರಮವನ್ನು ಪ್ರಶ್ನಿಸಿ ಆಪಾದಿತರು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.ಅರ್ಜಿದಾರರ ಪರ ವಕೀಲ ಮಹೇಶ್ ಕಜೆ ಅವರು ವಾದಿಸಿ,ಈ ನೋಟೀಸ್ ಜಾರಿ ಮಾಡಿದ ಕ್ರಮ ಸರಿಯಿಲ್ಲ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.ಅವರ ವಾದವನ್ನು ಪುರಸ್ಕರಿಸಿದ ನ್ಯಾಯಾಧೀಶರು ಗಡಿಪಾರು ಕುರಿತ ನೋಟೀಸ್‌ಗೆ ತಡೆ ನೀಡಿದ್ದಾರೆ.ಆರೋಪಿಗಳ ವಿರುದ್ಧ ದಾಖಲಿಸಿದ ಎಲ್ಲಾ ಕಡತವನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಸೂಚಿಸಿದೆ.

LEAVE A REPLY

Please enter your comment!
Please enter your name here