ಪುತ್ತೂರು: ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿಯ ಎಂಟನೇ ಪ್ರಶಸ್ತಿ ಪ್ರದಾನ ಸಮಾರಂಭವು ದುಬೈಯಲ್ಲಿ ನಡೆಯಿತು. ಚಲಿಸುವ ಕಂಪ್ಯೂಟರ್ ಧಾಮದ ರೂವಾರಿ, ಸುದ್ದಿ ಬಿಡುಗಡೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಹನೀಫ್ ಪುತ್ತೂರು ಸೇರಿದಂತೆ 50 ಮಂದಿಗೆ ಪ್ರಶಸ್ತಿ ನೀಡಲಾಗಿದ್ದು ಈ ಪೈಕಿ 47 ಯು.ಎ.ಇ ನಾಗರಿಕರು ಮತ್ತು ಮೂರು ಮಂದಿ ವಿದೇಶಿಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ರಾಸ್ ಅಲ್ ಖೈಮಾದ ನಾಗರಿಕ ವಿಮಾನಯಾನ ವಿಭಾಗದ ಅಧ್ಯಕ್ಷರು ಹಾಗೂ ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿಯ ಅಧ್ಯಕ್ಷರಾದ ಇಂಜಿನಿಯರ್ ಶೇಖ್ ಸಲೇಂ ಬಿನ್ ಸುಲ್ತಾನ್ ಅಲ್ ಖಾಸಿಮಿ ಆಯ್ಕೆಗೊಂಡ ಸ್ವಯಂಸೇವಕರಿಗೆ ಮಾನ್ಯತೆ ಮತ್ತು ಮೆಚ್ಚುಗೆಯ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿ ಸಮಾಜ ಸೇವೆಯು ಸಮಾಜದ ಐಕ್ಯತೆಯನ್ನು ಭದ್ರಪಡಿಸುತ್ತದೆ ಎಂಬುದನ್ನು ಹೇಳಿದರು. ಫಿರಾಸ್ ಅಜೀಜ್ ಬಿನ್ ದರ್ವಿಶ್ ಸ್ವಯಂಸೇವಕತ್ವದ ಅಪಾರ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರಲ್ಲದೆ ಇದು ಉದಾತ್ತ ಮಾನವೀಯ ಮೌಲ್ಯ ಮತ್ತು ಸಮಾಜದ ಪ್ರಗತಿ ಮತ್ತು ಅಭಿವೃದ್ಧಿಗೆ ಅಗತ್ಯವಾದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದರು ಹಾಗೂ ಇದಕ್ಕಾಗಿ ಶ್ರಮಿಸುತ್ತಿರುವ ಸಾಮಾಜಿಕ ಕಾರ್ಯಕರ್ತರನ್ನು ಅಭಿನಂದಿಸಿದರು.
ದುಬೈಯ ಹಟ್ಟಾ ಹನಿ ಬೀ ಗಾರ್ಡನ್ ನಲ್ಲಿ ಫೆ.10ರಂದು ನಡೆದ ಸರಳ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಲ್ ಖೈರ್ ಸ್ವಯಂಸೇವಕ ಪ್ರಶಸ್ತಿಯ ಡೆಪ್ಯೂಟಿ ಚೇರ್ಮನ್ ಫಿರಾಸ್ ಅಜೀಜ್ ಬಿನ್ ದರ್ವಿಶ್ ಹಾಗೂ ಸಂಸ್ಥೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಅಬ್ಬಾಸ್ ಹಾಜಿಯವರ ಪುತ್ರನಾಗಿರುವ ಹನೀಫ್ ಪುತ್ತೂರು, ಪುತ್ತೂರು ಆಸುಪಾಸಿನಲ್ಲಿ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಇದರ ಸಹಯೋಗದೊಂದಿಗೆ ಗ್ರಾಮೀಣ ಮಕ್ಕಳಿಗಾಗಿ ಕಾರ್ಯಾಚರಿಸುತ್ತಿರುವ ಉಚಿತ ಕಂಪ್ಯೂಟರ್ ಬಸ್ – ಕ್ಲಾಸ್ ಆನ್ ವೀಲ್ಸ್ ಇದರ ಸಂಸ್ಥಾಪಕರಾಗಿದ್ದು ಮಂಗಳೂರಿನ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಇದರ ಎನ್.ಆರ್.ಐ ಟ್ರಸ್ಟೀ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ತಾಂತ್ರಿಕ ನಿರ್ದೇಶರ್ಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಯು.ಎ.ಇ ಯ ಯೂನಿವರ್ಸಿಟಿ ಆಫ್ ದುಬಾಯಿ ಇದರ ಐಟಿ ಮ್ಯಾನೇಜರ್ ಹಾಗೂ ಮಹಮ್ಮದ್ ಬಿನ್ ರಾಶೀದ್ ಬಾಹ್ಯಾಕಾಶ ಸಂಸ್ಥೆಯಲ್ಲಿ ಕ್ಲೌಡ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜರ್ ಹಾಗಿ ಉದ್ಯೋಗದಲ್ಲಿರುವ ಇವರು ಯು.ಎ.ಇ ಗೋಲ್ಡನ್ ವೀಸಾ ಹೊಂದಿರುತ್ತಾರೆ.