ಫೆ.16: ಒಡಿಯೂರಿಗೆ ಪುತ್ತೂರಿನಿಂದ ಹೊರೆಕಾಣಿಕೆ ಸಮರ್ಪಣೆ-ಫೆ. 14: ಕಾರ್ಯಾಲಯ ಉದ್ಘಾಟನೆ

0

ಪುತ್ತೂರು: ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನಲ್ಲಿ ಫೆ.18 ಮತ್ತು 19ರಂದು ನಡೆಯುವ ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ ಸಿರಿರಾಮೆ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಫೆ.16ರಂದು ಬೆಳಿಗ್ಗೆ ಗಂಟೆ 10ಕ್ಕೆ ಪುತ್ತೂರಿನಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಹೊರಡಲಿದ್ದು, ಅದರ ಪೂರ್ವಭಾವಿಯಾಗಿ ಹೊರೆಕಾಣಿಕೆ ಸಂಗ್ರಹಣೆಗಾಗಿ ಕಾರ್ಯಾಲಯವನ್ನು ಫೆ.14ರಂದು ತೆರೆಯಲಾಗುವುದು ಎಂದು ಹೊರೆಕಾಣಿಕೆ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಿಂದ ಹೊರೆಕಾಣಿಕೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಲಿದ್ದಾರೆ. ಫೆ. 14ರಂದು ಹೊರೆಕಾಣಿಕೆ ಸಂಗ್ರಹಣೆಯ ಕಾರ್ಯಾಲಯವನ್ನು ದೇವಳದ ಬ್ರಹ್ಮರಥದ ಬಳಿಕ ತೆರೆಯಲಾಗುವುದು ಕಾರ್ಯಾಲಯವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಡ್ಯಾಶ್ ಮಾರ್ಕೆಟ್‌ನ ನಿಹಾಲ್ ಶೆಟ್ಟಿಯವರು ಉದ್ಘಾಟಿಸಲಿದ್ದಾರೆ ಎಂದವರು ಹೇಳಿದರು. ಪುತ್ತೂರು ಭಾಗದಿಂದ ಹೊರೆಕಾಣಿಕೆ ಸಮರ್ಪಣೆಗಾಗಿ ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಭಕ್ತಾದಿಗಳು ಭಕ್ತಿಪೂರ್ವಕವಾಗಿ ಹಸಿರುವಾಣಿ ಸಮರ್ಪಿಸಿ ಸಹಕಾರ ನೀಡುವುದರ ಜತೆಗೆ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವಂತೆ ವಿನಂತಿಸಿದರು.


ಪುತ್ತೂರಿನಿಂದ 50 ಕ್ವಿಂಟಾಲ್ ಅಕ್ಕಿ ಸಮರ್ಪಣೆಯ ಗುರಿ:
ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಸಮಿತಿಯಲ್ಲಿ ಹಲವಾರು ವಿಧದ ಸಾಮಾಜಿಕ ಸಂಸ್ಥೆಯಲ್ಲಿ ಗುರುತಿಸಿಕೊಂಡವರಿದ್ದಾರೆ. ಹೊರೆಕಾಣಿಕೆ ಸಮರ್ಪಣೆಗಾಗಿ ತಾಲೂಕಿನ ಒಂದೊಂದು ವಲಯಗಳಿಗೆ ಒಬ್ಬರಿಗೆ ಜವಾಬ್ದಾರಿ ನೀಡಲಾಗಿದೆ ಎಂದ ಅವರು, ಪುತ್ತೂರಿನಿಂದ ಸುಮಾರು 50 ಕ್ವಿಂಟಾಲ್ ಅಕ್ಕಿ ಸಮರ್ಪಣೆ ಮಾಡುವ ಗುರಿ ಹೊಂದಲಾಗಿದೆ. ಇದರ ಜೊತೆಗೆ ಪುತ್ತೂರಿನ ಸ್ನೇಹ ಸಂಗಮ ಅಟೋ ರಿಕ್ಷಾಗಳು ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಅದೇ ರೀತಿ ಇತರ ಸಂಘಟನೆಯ ರಿಕ್ಷಾ ಚಾಲಕರಿಗೂ ಭಾಗವಹಿಸುವ ಅವಕಾಶವಿದೆ. ಹೊರೆಕಾಣಿಕೆ ಮೆರವಣಿಗೆ ಫೆ.16 ರಂದು ಬೆಳಿಗ್ಗೆ ಪುತ್ತೂರಿನಿಂದ ಹೊರಟು ವಿಟ್ಲ, ಕನ್ಯಾನ ಮಾರ್ಗವಾಗಿ ಒಡಿಯೂರಿಗೆ ತೆರಳಲಿದೆ ಎಂದವರು ಮಾಹಿತಿ ನೀಡಿದರು.


ಹಿಂದು ಬಾಂಧವರು ಸಹಕರಿಸುವಂತೆ ವಿನಂತಿ:
ಸಮಿತಿಯ ಗೌರವಾಧ್ಯಕ್ಷ ಸುರೇಶ್ ಪುತ್ತೂರಾಯ ಅವರು ಮಾತನಾಡಿ, ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಅತ್ಯಂತ ವೈಭವದಿಂದ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಸಹಕರಿಸುವಂತೆ ವಿನಂತಿಸಿದರು.


ಪುತ್ತೂರಿಗೆ ಹೆಚ್ಚಿಗೆ ಮಹತ್ವ:
ಸಮಿತಿ ಇನ್ನೋರ್ವ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಹೊರೆಕಾಣಿಕೆ ಸಮರ್ಪಣೆ ನಿಟ್ಟಿನಲ್ಲಿ ಪುತ್ತೂರಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ 7 ವಲಯಗಳನ್ನಾಗಿ ಮಾಡಲಾಗಿದ್ದು, ಇದಕ್ಕೆ ಸಮಿತಿಗಳನ್ನು ರಚಿಸಿ ಗರಿಷ್ಠ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಕೃಷ್ಣ ಎಂ. ಅಳಿಕೆ, ಕೋಶಾಧಿಕಾರಿ ಅಶೋಕ್ ರೈ ಅರ್ಪಿಣಿಗುತ್ತು, ಉಪಾಧ್ಯಕ್ಷರಾಗಿರುವ ಒಡಿಯೂರು ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡ, ಹೊರೆಕಾಣಿಕೆ ಸಮಿತಿ ಸಂಘಟನಾ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here