ಪ್ರಥಮ: ಆಳ್ವಾಸ್ ಮೂಡಬಿದೆರೆ, ದ್ವಿತೀಯ: ಸೂರ್ಯನಾಥ ಆಳ್ವ ಮಾಲಕತ್ವದ ಟೀಮ್ ಮಿತ್ತಲಿಕೆ
ಪುತ್ತೂರು: ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ದಿ.ಅಖಿಲೇಶ್ ಸ್ಮರಣಾರ್ಥ ಹೊನಲು ಬೆಳಕಿನಲ್ಲಿ ಪ್ರಥಮ ಬಾರಿಗೆ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಫೆ. 10 ನಡೆದ ಲೀಗ್ ಮಾದರಿಯ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ 8 ತಂಡಗಳು ಭಾಗವಹಿಸಿದ್ದವು.
ಇದರಲ್ಲಿ ಆಳ್ವಾಸ್ ಕಾಲೇಜು ಮೂಡಬಿದರೆ ತಂಡವು ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಸೂರ್ಯನಾಥ ಆಳ್ವ ಮಾಲಕತ್ವದ ಟೀಮ್ ಮಿತ್ತಲಿಕೆ ಪುತ್ತೂರು ತಂಡವು ಪಡೆದುಕೊಂಡಿತು. ತೃತೀಯ ಬಹುಮಾನ ಎ.ಆರ್ ವಾರಿಯರ್ಸ್ ಪುತ್ತೂರು, ಚತುರ್ಥ ಬಹುಮಾನವನ್ನು ಸುಶಾಂತ್ ಕೇಟರ್ಸ್ ಬೆಂಗಳೂರು ಪಡೆದುಕೊಂಡಿತು.
ಇದಲ್ಲದೆ ಬೆಸ್ಟ್ ಪಾಸರ್ ಆಗಿ ಆದರ್ಶ ಶೆಟ್ಟಿ ಆಳ್ವಾಸ್ ಕಾಲೇಜು, ಬೆಸ್ಟ್ ಹ್ಯಾಟೇಕರ್ ಆಗಿ ನವೀನ್ ಕಾಂಚನ್ ಟೀಮ್ ಮಿತ್ತಲಿಕೆ, ಬೆಸ್ಟ್ ಲಿಬೆರೋ ಆಗಿ ಮಂಜು ಆಳ್ವಾಸ್, ಬೆಸ್ಟ್ ಆಲ್‌ರೌಂಡರ್ ಆಗಿ ಸಾಯಿ ಆಂಧ್ರಪ್ರದೇಶ ಟೀಮ್ ಮಿತ್ತಲಿಕೆ ಹಾಗೂ ಜನಮೆಚ್ಚಿದ ಆಟಗಾರರಾಗಿ ಆಯನ್ ಆಳ್ವಾಸ್‌ರವರು ಬಹುಮಾನ ಪಡೆದುಕೊಂಡರು. ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿ ಹೀರೋ ಸೈಕಲ್ ಅನ್ನು ಆಳ್ವಾಸ್ ತಂಡದ ರಾಹುಲ್ ಪಡೆದುಕೊಂಡರು. ಬಹುಮಾನವಾಗಿ ಪ್ರಥಮ ರೂ.25 ಸಾವಿರ ನಗದು, ದ್ವಿತೀಯ ರೂ.15 ಸಾವಿರ, ತೃತೀಯ ರೂ.10 ಸಾವಿರ ಹಾಗೂ ಚತುರ್ಥ ರೂ.7 ಸಾವಿರ ಹಾಗೇ ಪ್ರತಿ ಪಂದ್ಯಕ್ಕೆ ಮ್ಯಾನ್‌ಆಫ್ ದಿ ಮ್ಯಾಚ್ ನಗದು ಬಹುಮಾನ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಹೀರೋ ಸೈಕಲ್ ಇರಿಸಲಾಗಿತ್ತು.
ಪ್ರಶಸ್ತಿ ವಿತರಣಾ ಸಮಾರೋಪ ಸಮಾರಂಭದಲ್ಲಿ ಗಣ್ಯರಾದ ಪ್ರಜ್ವಲ್ ರೈ ಪಾಲ್ತಾಜೆ, ರಾಧಾಕೃಷ್ಣ ರೈ ಮುಂಡಾಸ್, ಸೂರ್ಯನಾಥ ಆಳ್ವ ಮಿತ್ತಳಿಕೆ, ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್‌ನ ಅಧ್ಯಕ್ಷ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ಗಣೇಶ್ ರೈ, ಪ್ರ.ಕಾರ್ಯದರ್ಶಿ ಪ್ರದೀಪ್, ಕೋಶಾಧಿಕಾರಿ ಗುಣಕರ ಶೆಟ್ಟಿ, ರಾಷ್ಟ್ರೀಯ ತೀರ್ಪುಗಾರ ಮಂಜು ಮಂಗಳೂರು ಹಾಗೂ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.