ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ರಂಜಿಸಿದ ದ್ವಾರಕೋತ್ಸವ

0

ಪುತ್ತೂರು: ಪುತ್ತೂರು ದ್ವಾರಕಾ ಪ್ರತಿಷ್ಠಾನದ ವತಿಯಿಂದ ಮುಕ್ರಂಪಾಡಿಯ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ‘ದ್ವಾರಕೋತ್ಸವ-2024ʼ ಫೆ.18ರಂದು ನಡೆಯಿತು. ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಡಾ| ಶ್ರೀಪತಿ ಕಲ್ಲೂರಾಯರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ದೇಶದ ಜಿಡಿಪಿಗೆ ಕನ್‌ಸ್ಟ್ರಕ್ಷನ್ ಕ್ಷೇತ್ರದ ಕೊಡುಗೆ ತುಂಬಾ ಇದೆ. ದೇಶದಲ್ಲಿ ಕನ್‌ಸ್ಟ್ರಕ್ಷನ್ ಕ್ಷೇತ್ರ ಬಹಳ ವೇಗವಾಗಿ ಬೆಳೆಯುವ ಕ್ಷೇತ್ರವಾಗಿದೆ. ರಿಯಲ್ ಎಸ್ಟೇಟ್ ಹಾಗೂ ಕನ್‌ಸ್ಟ್ರಕ್ಷನ್ ಕಮರ್ಷಿಯಲ್ ಆಗಿ ಬೆಳೆದಿದೆ ಎಂದರು. ನಂದಗೋಕುಲ ಬಡಾವಣೆಯಲ್ಲಿ ವಾಸವಾಗಿರುವವರಿಗೆ ಧಾರ್ಮಿಕ ಶ್ರದ್ಧೆ, ಸಂಸ್ಕೃತಿಗಳನ್ನು ಬೆಳೆಸುವ ಕಾಳಜಿಯನ್ನು ದ್ವಾರಕಾ ಪ್ರತಿಷ್ಠಾನ ಮಾಡುತ್ತಿದೆ. ಇಲ್ಲಿನ ಜನರಿಗಾಗಿ ಲೈಬ್ರೇರಿ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಇಂತಹ ಕೆಲಸಗಳು ಬೇರೆ ಯಾವ ಬಡಾವಣೆಯಲ್ಲಿಯೂ ಕಾಣಸಿಗುವುದಿಲ್ಲ. ಈ ಬಡಾವಣೆಯಲ್ಲಿ ಪರಂಪರೆ, ಧರ್ಮವನ್ನು ಉಳಿಸುವ ಕೆಲಸ ಆಗುತ್ತಿದೆ ಎಂದು ಹೇಳಿ ಶುಭಹಾರೈಸಿದರು.

ಹಿರಿಯ ಸಾಹಿತಿ ಹಾಗೂ ಅಂಕಣಕಾರ ಪ್ರೊ.ವಿ.ಬಿ.ಅರ್ತಿಕಜೆಯವರು ಮಾತನಾಡಿ, ಆಸಕ್ತಿ ಮತ್ತು ಶಕ್ತಿ ದ್ವಾರಕ ಪ್ರತಿಷ್ಠಾನದ ಗೋಪಾಲಕೃಷ್ಣರವರಿಗೆ ಇದೆ. ಬಡವರಿಗೆ, ಅಶಕ್ತರಿಗೆ ಸಹಾಯ ಹಸ್ತ ಮಾಡಿದ್ದಾರೆ. ತಾನು ದುಡಿದ ಹಣದಲ್ಲಿ ಒಂದಂಶವನ್ನು ಜನರಿಗೆ ಕೊಡುತ್ತಿದ್ದಾರೆ. ನಾನು ಮಾಡಿದ ಸಾಧನೆ ತೀರಾ ಕಡಿಮೆ. ನಾನು ಕಲಿಸಿದ ವಿದ್ಯಾರ್ಥಿಗಳು ಇಂದು ಮಹಾನ್ ಸಾಧಕರಾಗಿದ್ದಾರೆ ಇದು ಹೆಮ್ಮೆಯ ವಿಷಯ ಎಂದರು.

ಆರ್ಯಾಪು ಶ್ರೀಗುರುನರಸಿಂಹ ಕಲಾ ಮಂಡಳಿಯ ಯಕ್ಷಗಾನ ಪ್ರಸಾದನ ಕಲಾವಿದ ಕೆ. ವೆಂಕಟೇಶ ಮಯ್ಯರವರು ಮಾತನಾಡಿ, ಸಾಧನೆಗೆ ವಯಸ್ಸು ಎಂಬುದು ಇಲ್ಲ. ನಿಮ್ಮ ಸಾಧನೆಗೆ ಸಮಾಜ ಬೆನ್ನು ತಟ್ಟುತ್ತದೆ ಎಂದು ಹೇಳಿ ದ್ವಾರಕಾ ಪ್ರತಿಷ್ಠಾನ ಒಳ್ಳೆಯ ರೀತಿಯಲ್ಲಿ ಬೆಳೆಯಲಿ ಎಂದರು.


ಕೃತಿ ಬಿಡುಗಡೆಗೊಳಿಸಿದ ಕನ್ಯಾನ ಯಕ್ಷಗಾನ ಕಲಾಪೋಷಕ ಕೆ.ಪಿ ರಾಜಗೋಪಾಲ್‌ರವರು ಮಾತನಾಡಿ, ದ್ವಾರಕಾ ಪ್ರತಿಷ್ಠಾನ ಪುರಾಣ, ಯಕ್ಷಗಾನ ಕೃತಿಗಳಿಗೆ ಪ್ರೋತ್ಸಾಹ ಮಾಡುತ್ತಿದ್ದಾರೆ. ಕೃತಿಯಲ್ಲಿರುವ ಯಕ್ಷಗಾನ ಪ್ರಸಂಗಗಳು ಪುಸ್ತಕದಲ್ಲಿದ್ದರೆ ಮಾತ್ರ ಸಾಲದು. ಇದರ ಪ್ರಯೋಗಗಳು ಆಗಬೇಕು ಎಂದು ಹೇಳಿ ಶುಭಹಾರೈಸಿದರು.

ನಂದಗೋಕುಲ ಬಡಾವಣೆಯಲ್ಲಿ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ. ಮಾತನಾಡಿ, ಬಡಾವಣೆಯಲ್ಲಿ ಗ್ರಂಥಾಲಯವನ್ನು ಉದ್ಘಾಟಿಸಿದ್ದೇನೆ. ಇದು ನನ್ನ ಪುಣ್ಯ. ಗ್ರಂಥಾಲಯವೆಂಬುದು ಜ್ಞಾನದೇಗುಲ. ಜ್ಞಾನದ ಪ್ರಸಾರ ಎಲ್ಲಿ ಆಗುತ್ತದೋ ಅಲ್ಲಿ ಅದು ದೇವಾಲಯವನ್ನು ಕಟ್ಟಿದ್ದಷ್ಟೇ ಪುಣ್ಯದ ಕೆಲಸವಾಗುತ್ತದೆ ಎಂದರು. ಮುಖ್ಯ ಅಭ್ಯಾಗತರಾದ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಮೊಗ್ರಾಲ್‌ರವರು ಮಾತನಾಡಿ, ದ್ವಾರಕಾ ಎನ್ನುವುದು ಒಂದು ಸಂಸ್ಥೆಯಲ್ಲ. ಅದೊಂದು ವ್ಯವಸ್ಥೆ. ಒಬ್ಬ ವ್ಯಕ್ತಿಯಿಂದ ಇಷ್ಟೆಲ್ಲಾ ಆಗಲು ಸಾಧ್ಯವಾಗಿರುವುದು ವಿಶೇಷತೆಯಾಗಿದೆ. ಗೋಪಾಲಕೃಷ್ಣ ಭಟ್‌ರವರು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ ಇದು ಶ್ಲಾಘನೀಯ ಎಂದರು.


ಕೃತಿಕಾರರಾದ ಹಿರಿಯ ಸಾಹಿತಿ ಗಣರಾಜ ಕುಂಬ್ಳೆರವರು ಮಾತನಾಡಿ, ದ್ವಾರಕಾ ಎನ್ನುವ, ಹೆಸರೇ ರೋಚಕವಾಗಿದೆ. ಈ ಬಡಾವಣೆಗೆ ಭಾತಿಕವಾಗಿರುವ ದ್ವಾರಗಳಲ್ಲದೆ ತಾತ್ವಿಕವಾದ ದ್ವಾರಗಳು ಇದೆ. ಈ ಬಡಾವಣೆಯಲ್ಲಿ ಹಲವು ಚಟುವಟಿಕೆಗಳು ನಡೆಯುತ್ತಲೇ ಇದೆ. ಇವತ್ತಿನ ಉತ್ಸವ ಒಂದೇ ದಿನಕ್ಕೆ ಸೀಮಿತಾಗಬಾರದು. ವರ್ಷಪೂರ್ತಿ ನಡೆಯುವಂತಾಗಬೇಕು ಎಂದರು. ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಬೆಳ್ಳಾರೆ ಮಂಜುನಾಥ ಭಟ್ಟ, ದ್ವಾರಕಾ ಪ್ರತಿಷ್ಠಾನದ ಗೌರವಾಧಕ್ಷ ಹರ್ತ್ಯಡ್ಕ ಹರಿಕೃಷ್ಣ ಭಟ್‌ರವರು ಶುಭಹಾರೈಸಿದರು. ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುರಾಣ ಕಥೆಗಳನ್ನು, ಮಹಾನ್ ಪುರುಷರ ಕಥೆಗಳನ್ನು ಓದಿ. ದ್ವಾರಕಾ ಪ್ರತಿಷ್ಠಾನದ ವತಿಯಿಂದ ರಾಮಾಯಣ, ಮಹಾಭಾರತ ಪರೀಕ್ಷೆಗಳನ್ನು ಉಚಿತವಾಗಿ ನಡೆಸುತ್ತಿದ್ದೇವೆ ಎಂದು ಹೇಳಿ ಶುಭಹಾರೈಸಿ ವಂದಿಸಿದರು.


ಕೃತಿ ಬಿಡುಗಡೆ:

ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಬೆಳ್ಳಾರೆ ಮಂಜುನಾಥ ಭಟ್ಟ ಹಾಗೂ ಹಿರಿಯ ಸಾಹಿತಿ ಗಣರಾಜ ಕುಂಬ್ಳೆಯವರ ಕೃತಿಗಳನ್ನು ಕನ್ಯಾನದ ಯಕ್ಷಗಾನ ಕಲಾಪೋಷಕ ಕೆ.ಪಿ ರಾಜಗೋಪಾಲ್‌ರವರು ಬಿಡುಗಡೆಗೊಳಿಸಿದರು.


ಗೌರವಾರ್ಪಣೆ:

ಕೃತಿಕಾರರಾದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಬೆಳ್ಳಾರೆ ಮಂಜುನಾಥ ಭಟ್ಟ ಮತ್ತು ಹಿರಿಯ ಸಾಹಿತಿ ಗಣರಾಜ ಕುಂಬ್ಳೆಯವರನ್ನು ಗೌರವಿಸಲಾಯಿತು.
ಅಭಿನಂದನೆ:

ದ್ವಾರಕಾ ಪ್ರತಿಷ್ಠಾನದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲಾದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಅಂಬಿಕಾ ವಿದ್ಯಾಲಯದ ನಿಯುಕ್ತಿ, ಅನಘ, ಅನರ್ಘ್ಯ, ಚಂದನ ಇ., ಕೊಂಬೆಟ್ಟು ಹಿ.ಪ್ರಾ.ಶಾಲೆಯ ಲತಾ ಎಂ.ಕೆ., ಋತಿಕಾ ಬಿ.ಆರ್., ಸಿಂಚನಾ ಬಿ.ರವರನ್ನು ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಬು ಕೆ. ಮತ್ತು ನಂದಗೋಕುಲದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಅಪರಾಹ್ನ ೨ರಿಂದ ನಂದಗೋಕುಲದ ಕಿರಿಯ ಕಲಾವಿದರಿಂದ ಯಕ್ಷಗಾನ ವೈಭವ, ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ವಾಲಿ ಸುಗ್ರೀವರ ಕಾಳಗ ಯಕ್ಷಗಾನ ತಾಳಮದ್ದಳೆ, ಕಲಾದೀಪ ತಂಡದವರಿಂದ ಪಿಬರೇ ರಾಮರಸಂ ರಾಮಾಯಣ ರೂಪಕ ನಡೆಯಿತು. ಶ್ವೇತಾರಾಮ ಮೋಹನ್, ಧನ್ಯ ಸನ್ಮಾನ ಪತ್ರ ವಾಚಿಸಿದರು. ಬಡಾವಣೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಮೃತಕೃಷ್ಣ ಸ್ವಾಗತಿಸಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ದ್ವಾರಕಾ ಸಂಸ್ಥೆಯ ದುರ್ಗಾಗಣೇಶ್ ಹಾಗೂ ಸಿಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here